ಬೆಂಗಳೂರು: ಕನ್ನಡ ಸಿನಿ ಜಗತ್ತಿನ ಜನಪ್ರಿಯ ನಟ ದರ್ಶನ್ಗೆ ಬಿಗ್ ಶಾಕ್ ಎದುರಾಗಿದೆ. ಕರ್ನಾಟಕ ಹೈಕೋರ್ಟ್ ಮಂಜೂರು ಮಾಡಿದ್ದ ಜಾಮೀನನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿದೆ. ಸುಪ್ರೀಂ ಕೋರ್ಟ್ನ ನ್ಯಾಯಮೂರ್ತಿಗಳು ಜೇ.ಬಿ. ಪರ್ಡಿವಾಲಾ ಮತ್ತು ಆರ್. ಮಹಾದೇವನ್ ಅವರಿದ್ದ ದ್ವಿಸದಸ್ಯ ಪೀಠದಿಂದ ಈ ಆದೇಶ ಹೊರಬಿದ್ದಿದೆ. ಈ ತೀರ್ಪಿನ ಪರಿಣಾಮವಾಗಿ ದರ್ಶನ್ ಜೈಲು ಸೇರುವ ಪರಿಸ್ಥಿತಿ ಎದುರಾಗಿದೆ. ದರ್ಶನ್ ಅವರ ವೃತ್ತಿ ಜೀವನದ ಮೇಲೆ ಈ ತೀರ್ಪು ಭಾರೀ ಪ್ರಭಾವ ಬೀರಲಿದೆ ಎಂದು ಅಭಿಪ್ರಾಯ ವ್ಯಕ್ತವಾಗಿದೆ.
“ಹೈಕೋರ್ಟ್ ಆದೇಶದಲ್ಲಿ ದೋಷವಿದೆ. ತಾಂತ್ರಿಕ ಕಾರಣಗಳಿಂದ ಜಾಮೀನು ನೀಡಿದ್ದಾರೆ” ಎಂದು ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ಹೇಳಿದೆ. “ಆರೋಪಿ ಎಷ್ಟೇ ದೊಡ್ಡವರಿದ್ದರೂ ಅವರು ಕಾನೂನಿಗಿಂತ ದೊಡ್ಡವರಲ್ಲ. ಕಾನೂನು ಆಡಳಿತವನ್ನು ಎತ್ತಿಹಿಡಿಯಲಾಗಿದೆ. ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ, ಯಾರೂ ಚಿಕ್ಕವರಲ್ಲ. ಆರೋಪಿಗಳಿಗೆ 5 ಸ್ಟಾರ್ ಟ್ರೀಟ್ಮೆಂಟ್ ನೀಡಲಾಗಿದೆ. ಜೈಲು ಸೂಪರಿಂಟೆಂಡೆಂಟ್ನ್ನು ಸಸ್ಪೆಂಡ್ ಮಾಡಬೇಕಿತ್ತು” ಎಂದು ಪೀಠ ಅಭಿಪ್ರಾಯಪಟ್ಟಿದೆ. ಈ ತೀರ್ಪು ಲ್ಯಾಂಡ್ಮಾರ್ಕ್ ತೀರ್ಪು ಎಂದು ಸುಪ್ರೀಂ ಕೋರ್ಟ್ ವಿಶ್ಲೇಷಿಸಿದೆ.
ಕಳೆದ ವರ್ಷ ಜೂನ್ 11ರಂದು ದರ್ಶನ್ ಬಂಧನಕ್ಕೆ ಒಳಗಾದರು. ನಂತರ ನಾಲ್ಕು ತಿಂಗಳಿಗೂ ಅಧಿಕ ಅವಧಿ ಜೈಲಿನಲ್ಲಿ ಇರಬೇಕಾದ ಪರಿಸ್ಥಿತಿ ಎದುರಿಸಬೇಕಾಯಿತು. ಬೆನ್ನು ನೋವಿನ ಕಾರಣ ನೀಡಿ ಅವರು ಜೈಲಿನಿಂದ ಹೊರಬಂದರು. ಡಿಸೆಂಬರ್ನಲ್ಲಿ ಅವರಿಗೆ ಸಂಪೂರ್ಣ ಜಾಮೀನು ದೊರೆಯಿತು. ಈ ಜಾಮೀನು ಮಂಜೂರಾತಿಯನ್ನು ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಿತ್ತು.
ಹಲವು ದಿನಗಳ ಕಾಲ ಈ ಪ್ರಕರಣದ ವಿಚಾರಣೆ ಸುಪ್ರೀಂ ಕೋರ್ಟ್ನಲ್ಲಿ ನಡೆಯಿತು. ಕರ್ನಾಟಕ ಹೈಕೋರ್ಟ್ ನೀಡಿದ್ದ ಜಾಮೀನು ಆದೇಶದ ಕುರಿತು ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತ್ತು. ಈಗ ಅಂತಿಮವಾಗಿ ತೀರ್ಪು ಪ್ರಕಟವಾಗಿದ್ದು, ದರ್ಶನ್ ಜಾಮೀನು ರದ್ದುಪಡಿಸಲಾಗಿದೆ.
ಇಷ್ಟು ದಿನ ಹೊರಗೆ ಹಾಯಾಗಿ ಓಡಾಡಿಕೊಂಡಿದ್ದ ದರ್ಶನ್, ಇದೀಗ ಮತ್ತೆ ಜೈಲು ಸೇರುವ ಸ್ಥಿತಿ ಎದುರಿಸುತ್ತಿದ್ದಾರೆ. ಈ ಬೆಳವಣಿಗೆ ಅವರ ಅಭಿಮಾನಿಗಳಲ್ಲಿ ಬೇಸರ ಮತ್ತು ಆಘಾತ ಮೂಡಿಸಿದೆ. ಸದ್ಯ ದರ್ಶನ್ ಹಾಗೂ ತಂಡವನ್ನ ವಿಚಾರಣೆ ನಡೆಸಿದ ಬಳಿಕ ದರ್ಶನ್ ರನ್ನ ಬಳ್ಳಾರಿ ಜೈಲಿಗಾ ? ಅಥವಾ ಬೆಂಗಳೂರಿನ ಪರಪ್ಪನ ಅಗ್ರಹಾರದ ಜೈಲಿಗಾ? ಎನ್ನೋದನ್ನ ಕಾದುನೋಡಬೇಕಿದೆ.