ಗದಗ:
ಆದಾಯ ಮೀರಿ ಆಸ್ತಿ ಗಳಿಕೆ ಆರೋಪದಡಿ ಶಿರಹಟ್ಟಿಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ (BCM) ಅಧಿಕಾರಿ M.S. ಸುರಕೋಡ ಅವರ ನಿವಾಸ ಹಾಗೂ ಸಂಬಂಧಿತ ಸ್ಥಳಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ಇಂದು ಬೆಳಿಗ್ಗೆ ದಾಳಿ ನಡೆಸಿದ್ದಾರೆ.
🖋ವರದಿ: ಮಹಲಿಂಗೇಶ ಹಿರೇಮಠ.ಗದಗ
ಗದಗ ನಗರದ ವಿಶ್ವೇಶ್ವರ ನಗರದಲ್ಲಿರುವ ಅಧಿಕಾರಿ ನಿವಾಸ ಸೇರಿದಂತೆ, ಗದಗ, ಧಾರವಾಡ, ರೋಣ ತಾಲೂಕಿನ ಕೌಜಗೇರಿ ಸೇರಿ ಒಟ್ಟು ಆರು ಕಡೆಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಲಾಗಿದೆ.
ಲೋಕಾಯುಕ್ತ ಎಸ್‌ಪಿ S.T. ಸಿದ್ಧಲಿಂಗಪ್ಪ ಅವರ ನೇತೃತ್ವದಲ್ಲಿ ಆರು ತಂಡಗಳನ್ನು ರಚಿಸಿ ಈ ಕಾರ್ಯಾಚರಣೆ ಕೈಗೊಳ್ಳಲಾಗಿದೆ.
ಶಿರಹಟ್ಟಿಯಲ್ಲಿ BCM ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ M.S. ಸುರಕೋಡ ಅವರ ವಿರುದ್ಧ, ಸೇವಾ ಅವಧಿಯಲ್ಲಿ ಕಾನೂನಾತೀತವಾಗಿ ಅಪಾರ ಆಸ್ತಿ ಗಳಿಸಿರುವ ಬಗ್ಗೆ ಗಂಭೀರ ಆರೋಪಗಳು ಕೇಳಿಬಂದ ಹಿನ್ನೆಲೆ, ಈ ದಾಳಿ ನಡೆದಿದೆ ಎನ್ನಲಾಗಿದೆ.
ಗದಗ ಲೋಕಾಯುಕ್ತ ಡಿವೈಎಸ್‌ಪಿ ವಿಜಯ ಬಿರಾದಾರ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದು, ಮನೆಗಳು, ಕಚೇರಿಗಳು ಹಾಗೂ ಸಂಬಂಧಿತ ಸ್ಥಳಗಳಲ್ಲಿ ದಾಖಲೆಗಳು, ಬ್ಯಾಂಕ್ ಪಾಸ್‌ಬುಕ್‌ಗಳು, ಭೂ ದಾಖಲೆಗಳು ಮತ್ತು ಇತರೆ ಮಹತ್ವದ ದಾಖಲೆಗಳ ಪರಿಶೀಲನೆ ನಡೆಸಲಾಗುತ್ತಿದೆ.
ಮೂಲತಃ ರೋಣ ತಾಲೂಕುನ ಕೌಜಗೇರಿ ಗ್ರಾಮದವರಾದ M.S. ಸುರಕೋಡ, ಶಿರಹಟ್ಟಿಯಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ದಾಳಿ ವೇಳೆ ಮಹತ್ವದ ದಾಖಲೆಗಳು ಪತ್ತೆಯಾಗುವ ಸಾಧ್ಯತೆ ಇದ್ದು, ಪರಿಶೀಲನೆ ಪೂರ್ಣಗೊಂಡ ಬಳಿಕ ಅಧಿಕೃತ ಮಾಹಿತಿ ನೀಡಲಾಗುವುದು ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.
ಸದ್ಯ ದಾಳಿ ಪ್ರಕ್ರಿಯೆ ಮುಂದುವರಿದಿದ್ದು, ಮುಂದಿನ ಬೆಳವಣಿಗೆಗಳತ್ತ ಸಾರ್ವಜನಿಕರು ಹಾಗೂ ಆಡಳಿತ ವಲಯ ಕಣ್ಣಿಟ್ಟಿದೆ.
