ಲಕ್ಷ್ಮೇಶ್ವರ: ಸಮೀಪದ ಮಂಜಲಾಪೂರ ಗ್ರಾಮದಲ್ಲಿ ಮೆಕ್ಕೆಜೋಳದ ರಾಶಿಗಳಿಗೆ ಆಕಸ್ಮಿಕ ಬೆಂಕಿ ಹೊತ್ತಿಕೊಂಡ ಪರಿಣಾಮ ಎರಡ್ಮೂರು ರಾಶಿಗಳು ಸಂಪೂರ್ಣ ಸುಟ್ಟು ಭಸ್ಮವಾಗಿದ್ದು ರೈತರಿಗೆ ಅಪಾರ ಹಾನಿ ಸಂಭವಿಸಿದ ಘಟನೆ ಸೋಮವಾರ ಜರುಗಿದೆ.
ಗ್ರಾಮದ ಸರ್ಕಾರಿ ಉರ್ದು ಶಾಲೆ ಎದುರಿನ ರೈತರ ಹೊಲಗಳಲ್ಲಿ ಮೆಕ್ಕೆಜೋಳ ಬೆಳೆದಿರುವ ಹತ್ತಾರು ರೈತರು ಒಕ್ಕಣಿಗಾಗಿ ಕಟಾವು ಮಾಡಿ ರಾಶಿ ಹಾಕಿದ್ದರು. ಆದರೆ ಆಕಸ್ಮಿಕವಾಗಿ ರಾಶಿಗಳಿಗೆ ಬೆಂಕಿ ಹತ್ತಿಕೊಂಡಿದ್ದರಿಂದ ಈ ಅನಾಹುತ ಸಂಭವಿಸಿದೆ.
ವರದಿ : ಪರಮೇಶ ಎಸ್ ಲಮಾಣಿ
ಕಮಲವ್ವ ಹೊಸಮನಿ ಅವರಿಗೆ ಸೇರಿದ್ದ, ೬ ಎಕರೆಯಲ್ಲಿ ಬೆಳೆದಿದ್ದ ಮೆಕ್ಕೆಜೋಳ ಹಾಗೂ ಶಿರಾಜುದ್ದೀನ್ ಹೊಸಮನಿ ಅವರಿಗೆ ಸೇರಿದ್ದ ೭ ಎಕರೆಯಲ್ಲಿ ಬೆಳೆದಿದ್ದ ಮೆಕ್ಕೆಜೋಳದ ರಾಶಿ ಸುಟ್ಟು ಕರಕಲಾಗಿದೆ.
ಉಳಿದಂತೆ ಪರಮೇಶ ಕಿತ್ಲಿ ಮತ್ತು ದಾನಪ್ಪ ಲಮಾಣಿ ಅವರಿಗೆ ಸೇರಿದ ಮೆಕ್ಕೆಜೋಳದ ಮೇವು ಬೆಂಕಿಯಲ್ಲಿ ಸುಟ್ಟಿದ್ದು, ರೈತರು ಕಣ್ಣಿರು ಹಾಕುತ್ತಿದ್ದಾರೆ.
ಸುದ್ದಿ ತಿಳಿಯುತ್ತಲೇ ಅಗ್ನಿಶಾಮಕ ಸಿಬ್ಬಂದಿ ಧಾವಿಸಿ ಬೆಂಕಿ ನಂದಿಸಿದರು. ಜೋರಾಗಿ ಗಾಳಿ ಬಿಸುತ್ತಿರುವುದರಿಂದ ಬೆಂಕಿ ಒಂದು ರಾಶಿಯಿಂದ ಮತ್ತೊಂದು ರಾಶಿಗೆ ವೇಗವಾಗಿ ಹರಡುತ್ತಿದ್ದು ರಾಶಿ ಹಾಕಿರುವ ಉಳಿದ ರೈತರಲ್ಲಿ ಭಯ ಮೂಡಿಸಿತ್ತು.
ತಹಶೀಲ್ದಾರ ಭೇಟಿ:
ವಿಷಯ ಗೊತ್ತಾಗುತ್ತಿದ್ದಂತೆ ತಹಶೀಲ್ದಾರ ಎಂ.ಧನಂಜಯ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳಾದ ಎಸ್.ಕೆ. ಪಠಾಣ, ಬಸವರಾಜ ಹಳ್ಳಿಕೇರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
