ಗದಗ, ಜುಲೈ 27 – ಗದಗ ನಗರದ ಚನ್ನಮ್ಮ ಸರ್ಕಲ್ ಬಳಿ ಭಾನುವಾರ ರಾತ್ರಿ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ. ಡಿವೈಡರ್‌ನಲ್ಲಿದ್ದ ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.
ಮೃತಪಟ್ಟವರನ್ನು ಜವಳಗಲ್ಲಿಯ ಅಮನ್ ರಿಯಾಜ್ ಅಹ್ಮದ ಮುಳಗುಂದ (25) ಮತ್ತು ಜುನೇದ್ ಮಕಬೂಲಸಾಬ ಕಾಗದಗಾರ (23) ಎಂದು ಗುರುತಿಸಲಾಗಿದೆ. ಇಬ್ಬರೂ ಬಾಲ್ಯ ಮಿತ್ರರು ಎನ್ನಲಾಗಿದೆ.
ಪೊಲೀಸ್ ಮೂಲಗಳ ಪ್ರಕಾರ, ಮುಳಗುಂದ ನಾಕಾದಿಂದ ಭೀಷ್ಮ ಕೆರೆ ಕಡೆಗೆ ಅವರು ಬೈಕ್‌ನಲ್ಲಿ ತೆರಳುತ್ತಿದ್ದರು. ಈ ವೇಳೆ ಚನ್ನಮ್ಮ ಸರ್ಕಲ್ ಬಳಿ ನಿಯಂತ್ರಣ ತಪ್ಪಿದ ಬೈಕ್ ನೇರವಾಗಿ ಡಿವೈಡರ್‌ನಲ್ಲಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಂಬದ ಮೇಲಿದ್ದ ವಿದ್ಯುತ್ ಬಲ್ಬುಗಳು ನೆಲಕ್ಕು ಬಿದ್ದು ಚೂರಾಗಿವೆ. ಸ್ಥಳದಲ್ಲೇ ಇಬ್ಬರು ತೀವ್ರ ಗಾಯಗೊಂಡು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಘಟನೆಯ ಮಾಹಿತಿ ದೊರಕುತ್ತಿದ್ದಂತೆ ಗದಗ ಸಂಚಾರಿ ಪೊಲೀಸ್ ಠಾಣೆ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಮೃತದೇಹಗಳನ್ನು ಸಿವಿಲ್ ಆಸ್ಪತ್ರೆಗೆ ರವಾನಿಸಲಾಗಿದೆ ಮತ್ತು ಅಪಘಾತದ ಬಗ್ಗೆ ಪ್ರಕರಣ ದಾಖಲಿಸಲಾಗಿದೆ.
ಸ್ಥಳೀಯರ ಪ್ರಕಾರ, ಚನ್ನಮ್ಮ ಸರ್ಕಲ್ ಬಳಿಯ ರಸ್ತೆಯ ಡಿವೈಡರ್‌ಗಳು ಸ್ಪಷ್ಟವಾಗಿ ಕಾಣಿಸದಂತಹ ಸ್ಥಿತಿಯಲ್ಲಿದ್ದು, ಇದರಿಂದಾಗಿ ಅಪಘಾತ ಸಂಭವಿಸುವ ಸಂಭವ ಹೆಚ್ಚಾಗಿದೆ. ಈ ಭಾಗದಲ್ಲಿ ನೈಟ್ ಲೈಟಿಂಗ್ ವ್ಯವಸ್ಥೆ ಸಾಕಷ್ಟು ದುರ್ಬಲವಾಗಿದೆ ಎಂಬ ಆರೋಪವೂ ಕೇಳಿಬಂದಿದೆ.
ಸಾರ್ವಜನಿಕರಿಂದ ರಸ್ತೆ ಸುರಕ್ಷತೆಗಾಗಿ ಆಗ್ರಹ:
ಈ ಅಪಘಾತದ ಬಳಿಕ ಸಾರ್ವಜನಿಕರು ರಸ್ತೆ ಡಿವೈಡರ್‌ಗಳ ಸ್ಪಷ್ಟ ಗುರುತಿನ ಗುರುತು, ಬೆಳಕಿನ ವ್ಯವಸ್ಥೆ ಮತ್ತು ರಸ್ತೆ ಗುಂಡಿಗಳ ಸರಿಪಡಣೆಯ ಕುರಿತು ಅಧಿಕಾರಿಗಳಿಗೆ ಬಿಸಿಮುಟ್ಟುವಂತೆ ಆಗ್ರಹಿಸಿದ್ದಾರೆ. ಯುವಜನರು ಆಗಾಗ ತಮ್ಮ ಪ್ರಾಣ ಕಳೆದುಕೊಳ್ಳುವಂತಹ ಘಟನೆಗಳು ಪುನರಾವೃತ್ತವಾಗಬಾರದು ಎಂಬುದು ಸಾರ್ವಜನಿಕರ ಮನವಿಯಾಗಿದ್ದು, ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.