ಮುಂಡರಗಿ:
ಗದಗ ಜಿಲ್ಲೆಯ ಮುಂಡರಗಿ ಪಟ್ಟಣದ ಎಸ್‌ಎಫ್‌ಎಸ್ ಪ್ರೌಢ ಶಾಲೆಯಲ್ಲಿ ಇತ್ತೀಚೆಗೆ ವಿದ್ಯಾರ್ಥಿಗಳ ಶೈಕ್ಷಣಿಕ ಹಂತ ಪೂರ್ಣಗೊಳಿಸುವ ಪದವಿ ಪ್ರದಾನ ಸಮಾರಂಭ ಹಾಗೂ ಹಳದಿ ದಿನಾಚರಣೆ ಅತ್ಯಂತ ಸಂಭ್ರಮ ಮತ್ತು ಶಿಸ್ತುಪಾಲನೆಯೊಂದಿಗೆ ಜರುಗಿತು.
ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಹಡಗಲಿ ತುಂಗಭದ್ರಾ ಶಿಕ್ಷಣ ಸಂಸ್ಥೆಯ ಚಿತ್ರಕಲಾ ಶಿಕ್ಷಕರು ಹಾಗೂ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ದ್ವಾರಕೀಶ್ ರೆಡ್ಡಿಯವರು ಮಾತನಾಡಿ,
“ಶಾಲೆಗಳು ಮಕ್ಕಳ ಕನಸುಗಳನ್ನು ಬಿತ್ತುವ ಪವಿತ್ರ ಸ್ಥಳಗಳು. ಆದರೆ ಇಲ್ಲಿ ಅಶುದ್ಧತೆ, ಅಸಂಸ್ಕೃತಿ ಮತ್ತು ಕಸಕ್ಕೆ ಯಾವುದೇ ಜಾಗವಿಲ್ಲ. ಮಕ್ಕಳ ಕನಸುಗಳನ್ನು ಬೆಳೆಸುವ ಹೊಣೆಗಾರಿಕೆ ಪಾಲಕರು ಹಾಗೂ ಶಿಕ್ಷಕರ ಮೇಲಿದೆ” ಎಂದು ಅಭಿಪ್ರಾಯಪಟ್ಟರು.
ಪಾಲಕರು ಮಕ್ಕಳಿಗೆ ಕೇವಲ ವಿದ್ಯೆಯಷ್ಟೇ ಅಲ್ಲದೆ ಸಂಸ್ಕೃತಿ ಹಾಗೂ ಸಂಸ್ಕಾರಗಳನ್ನು ಕಲಿಸುವುದು ಅತ್ಯಂತ ಅಗತ್ಯ ಎಂದು ತಿಳಿಸಿದ ಅವರು,“ಇಂದಿನ ಪಾಲಕರು ಅನಾವಶ್ಯಕ ಒತ್ತಡ ಹೇರಿಸುವ ಮೂಲಕ ಮಕ್ಕಳ ಬಾಲ್ಯವನ್ನೇ ಕಸಿದುಕೊಳ್ಳುತ್ತಿದ್ದಾರೆ. ಕುಟುಂಬದೊಂದಿಗೆ ಬೆರೆಯುವ, ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳುವ ವಾತಾವರಣವನ್ನು ಮಕ್ಕಳಿಗೆ ಕಲಿಸಬೇಕು. ಮುಂದೆ ನಿಮ್ಮ ಮಕ್ಕಳು ವೃದ್ಧಾಶ್ರಮದ ವಿಳಾಸವನ್ನು ಕೇಳದಂತೆ, ಮನೆತನದ ಮೌಲ್ಯಗಳನ್ನು ಅರಿತವರಾಗಿ ಬೆಳೆಸಬೇಕು” ಎಂದು ಮನವಿ ಮಾಡಿದರು.
ಮಕ್ಕಳನ್ನು ಇತರರೊಂದಿಗೆ ಹೋಲಿಕೆ ಮಾಡುವ ಪ್ರವೃತ್ತಿ ಅಪಾಯಕಾರಿ ಎಂದು ಎಚ್ಚರಿಸಿದ ಅವರು,“ಪ್ರತಿ ಮಗು ವಿಭಿನ್ನ ಪ್ರತಿಭೆಯ ಜೀವಂತ ಹೂವಿನಂತಿದೆ. ಆ ಹೂವಿನ ನಗು ಮಂಕಾಗುವಂತೆ ಮಾಡದೆ, ಅದರ ಬೆಳವಣಿಗೆಗೆ ಸೂಕ್ತ ಹೊಣೆಗಾರಿಕೆಯನ್ನು ವಹಿಸಬೇಕು. ಮಕ್ಕಳಿಗೆ ಕಲಿಕೆಯನ್ನು ಪ್ರೀತಿಸುವ ಗುಣವನ್ನು ಕಲಿಸಬೇಕು. ಪಾಲಕರ ಮಾತುಗಳು ಮಕ್ಕಳ ಭವಿಷ್ಯವನ್ನು ಎತ್ತರಕ್ಕೇರಿಸಬಲ್ಲವು; ಅದೇ ಮಾತು ಅವರನ್ನು ಕುಗ್ಗಿಸಬಹುದೂ ಆಗುತ್ತದೆ” ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಫಲಕಗಳನ್ನು ವಿತರಿಸಲಾಯಿತು. ಅಲ್ಲದೇ ಶಾಲಾ ಮಕ್ಕಳಿಂದ ಮನರಂಜನಾತ್ಮಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವ ಮೂಲಕ ಸಮಾರಂಭಕ್ಕೆ ಮತ್ತಷ್ಟು ಮೆರಗು ನೀಡಲಾಯಿತು.
ಹಳದಿ ದಿನಾಚರಣೆಯ ಅಂಗವಾಗಿ ಮಕ್ಕಳು ಹಳದಿ ಬಣ್ಣದ ಉಡುಪು ಧರಿಸಿ, ಹಾಡು-ನೃತ್ಯಗಳ ಮೂಲಕ ಹರ್ಷಭರಿತ ವಾತಾವರಣವನ್ನು ಸೃಷ್ಟಿಸಿದರು.
ಕಾರ್ಯಕ್ರಮದಲ್ಲಿ ಶಾಲೆಯ ಪ್ರಾಂಶುಪಾಲರಾದ ಫಾದರ್ ನಿರ್ಮಲ್ ಜೋಸೆ, ಆಡಳಿತಾಧಿಕಾರಿಗಳಾದ ಫಾದರ್ ಪ್ರಶಾಂತ್, ಶಿಸ್ತು ವಿಭಾಗದ ಮುಖ್ಯಸ್ಥರಾದ ಫಾದರ್ ಸಿಮಿಲ್, ಸಂಯೋಜಕರಾದ ಅಶ್ವಿನಿ ಬದಿ ಸೇರಿದಂತೆ ಸಂಸ್ಥೆಯ ಎಲ್ಲಾ ಶಿಕ್ಷಕರು, ಶಿಕ್ಷಕಿಯರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಶಾಲಾ ಮಕ್ಕಳ ಪಾಲಕರು ಸಹ ಅಪಾರ ಸಂಖ್ಯೆಯಲ್ಲಿ ಭಾಗವಹಿಸಿ, ತಮ್ಮ ಮಕ್ಕಳ ಸಾಂಸ್ಕೃತಿಕ ಪ್ರದರ್ಶನಗಳು ಹಾಗೂ ನೃತ್ಯಗಳನ್ನು ಕಣ್ತುಂಬಿಕೊಂಡು ಸಂಭ್ರಮಿಸಿದರು. ಸಮಾರಂಭವು ಶೈಕ್ಷಣಿಕ ಮೌಲ್ಯಗಳು, ಸಂಸ್ಕಾರ ಮತ್ತು ಕುಟುಂಬ ಬಂಧಗಳ ಮಹತ್ವವನ್ನು ಸ್ಮರಿಸುವ ಸಂದೇಶದೊಂದಿಗೆ ಯಶಸ್ವಿಯಾಗಿ ಸಂಪನ್ನವಾಯಿತು.
