ಲಕ್ಷ್ಮೇಶ್ವರ: ಲವ್ ಜಿಹಾದ್ ಕಾರಣಕ್ಕಾಗಿ ಹಾವೇರಿ ಜಿಲ್ಲಾ ರಟ್ಟೀಹಳ್ಳಿ ತಾಲ್ಲೂಕಿನ ಮಾಸೂರ ಗ್ರಾಮದ ಸ್ವಾತಿ ರಮೇಶ ಬ್ಯಾಡಗಿ ಹತ್ಯೆಯನ್ನು ಖಂಡಿಸಿ, ಗದಗ ಜಿಲ್ಲೆ ಲಕ್ಷ್ಮೇಶ್ವರ ಪಟ್ಟಣದಲ್ಲಿ (ಮಾ.20) ಗುರುವಾರ ಎಬಿವಿಪಿ ಸಂಘಟನೆ ನೆತೃತ್ವದಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳು, ಮೆರವಣಿಗೆ ನಡೆಸಿ ಬೃಹತ್ ಪ್ರತಿಭಟನೆ ನಡೆಸಿದರು.
ಲಕ್ಷ್ಮೇಶ್ವರ ವರದಿ: ಪರಮೇಶ ಎಸ್ ಲಮಾಣಿ
ಪಟ್ಟಣದ ಸರ್ಕಾರಿ ಕಾಲೇಜಿನಿಂದ ಪ್ರತಿಭಟನಾ ಮೆರವಣಿಗೆ ಆರಂಭವಾಗಿ ನಗರದ ಬಸ್ ನಿಲ್ದಾಣದ ಮಾರ್ಗವಾಗಿ, ನಂತರ ಪಂಪ ಸರ್ಕಲ್ , ದರ್ಗಾ ಮೂಲಕ ತಹಶಿಲ್ದಾರ ಕಚೇರಿವರೆಗೂ ಪ್ರತಿಭಟನಾ ಮೆರವಣಿಗೆ ನಡೆಯಿತು.
ಗದಗ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮತ್ತು ರಾಜ್ಯ ಕಾರ್ಯಕಾರಿಣಿ ಸದಸ್ಯ ಅರುಣ ಬಾರಕಿ ಮತ್ತು ಅಭಿಷೇಕ ಉಮಚಗಿ ಮಾತನಾಡಿ, ‘ಸ್ವಾತಿಯನ್ನು ಮಾಸೂರಿನ ಮುಸ್ಲಿಂ ಯುವಕ ನಯಾಜ್ ಪ್ರೀತಿಸಿ ಮದುವೆಯಾಗಿ ನಂಬಿಸಿ,ನಂತರ ಬೇರೊಂದು ಹುಡುಗಿಯೊಂದಿಗೆ ಮದುವೆ ನಿಶ್ಚಯವನ್ನು ಮಾಡಿಕೊಂಡಿದ್ದ.

ಇದರ ನಡುವೆ ಯುವತಿಯು ಕಾಣೆಯಾಗಿ 7 ದಿನಗಳ ನಂತರ ಶವವಾಗಿ ಪತ್ತೆ ಆಗಿದ್ದಾಳೆ. ಪೊಲೀಸ್ ಇಲಾಖೆಯವರು ಪೋಷಕರಿಗೆ ತಿಳಿಸದೇ ಅಂತ್ಯಕ್ರಿಯೆ ನಡೆಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಕೊಲೆಯ ಸುತ್ತ ಲವ್ ಜಿಹಾದ್ ಪ್ರಯತ್ನ ಎದ್ದು ತೋರುತ್ತಿದ್ದು ತನಿಖೆಯಲ್ಲೂ ಪೊಲೀಸರು ಹಲವಾರು ರೀತಿಯ ಲೋಪವನ್ನು ಎಸಗುತ್ತಿರುವುದು, ತಾರಾತುರಿಯಲ್ಲಿ ಶವ ಯಾರ ದೇಹವೆಂದು ಸರಿಯಾಗಿ ಗುರುತಿಸುವ ಮುನ್ನವೇ ಅಂತ್ಯಕ್ರಿಯೆ ನಡೆದಿರುವುದು ಬಹಳಷ್ಟು ಅನುಮಾನಕ್ಕೆ ಕಾರಣವಾಗಿದೆ ಎಂದು ಆರೋಪಿಸಿದರು.
‘ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕಾನೂನು ಸುವ್ಯವಸ್ಥೆ ಹದಗೆಡುತ್ತಿದೆ. ನೇಹಾ ಹಿರೇಮಠ ಹತ್ಯೆ ಮಾಸುವ ಮುನ್ನವೇ ಮತ್ತೊಂದು ಯುವತಿ ಲವ್ ಜಿಹಾದ್ಗೆ ಬಲಿಯಾಗಿದ್ದಾಳೆ. ಈ ಪ್ರಕರಣದ ಕುರಿತು ಪೊಲೀಸ್ ಇಲಾಖೆ ಸೂಕ್ತ ತನಿಖೆಯನ್ನು ನಡೆಸಬೇಕು. ಈ ಪ್ರಕರಣದಲ್ಲಿ ರಾಜಕೀಯ ಹಸ್ತಕ್ಷೇಪವನ್ನು ಸರ್ಕಾರ ಮಾಡಕೂಡದು. ಸ್ವಾತಿ ಬ್ಯಾಡಗಿ ಹತ್ಯೆಗೆ ನ್ಯಾಯವನ್ನು ದೊರಕಿಸಿ ಕೊಡಬೇಕು. ಕೊಲೆಗೈದ ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಬೇಕು’ ಎಂದು ಆಗ್ರಹಿಸಿದರು.
ತಹಶಿಲ್ದಾರರು ತಡವಾಗಿ ಬಂದಿದ್ದರಿಂದ ಎಬಿವಿಪಿ ಕಾರ್ಯಕರ್ತರು ಆಕ್ರೋಶಗೊಂಡು ಕಚೇರಿಯ ಬಾಗಿಲು ಬಂದ್ ಮಾಡಲು ಮುಂದಾದಾಗ ಪೋಲಿಸರು ತಡೆದು ಸಮಾಧಾನ ಪಡಿಸಿದರು. ನಂತರ ತಹಶಿಲ್ದಾರ ವಾಸುದೇವಸ್ವಾಮಿ ಅವರು ಮನವಿ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಗದಗ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಅರುಣ ಬಾರಕಿ, ತಾಲೂಕ ಸಂಚಾಲಕ ಪ್ರಕಾಶ ಕುಂಬಾರ, ರಾಜ್ಯ ಕಾರ್ಯಕಾರಿಣಿ ಸದಸ್ಯ ಅಭಿಷೇಕ್ ಉಮಚಗಿ, ಸಂಜನಾ ಪಾಟೀಲ್, ತೇಜಸ್ವಿನಿ ಕ್ಷತ್ರಿ, ಅಭಿಷೇಕ ಇಷನಗೌಡ್ರು, ಪೂರ್ಣಿಮಾ ಕ್ಷತ್ರಿ, ಅರವಿಂದ ಇಚ್ಚಂಗಿ, ವಿರೇಶ ಕುಂಬಾರ, ವಿನಾಯಕ ಹುಂಬಿ , ವಿನಾಯಕ ಕುಂಬಾರ, ಕಾರ್ತಿಕ ಹುನಗುಂದ, ವಿನಾಯಕ ಉಮಚಗಿ ಮತ್ತು ತಾಲೂಕಿನ ವಿವಿಧ ಕಾಲೇಜ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.