ಗದಗ : ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳ ಓದು, ಅವರ ಸರ್ವಾಂಗೀಣ ಪ್ರಗತಿಯ ಬಗ್ಗೆ ಪಾಲಕರು, ಪೋಷಕರು ಹಾಗೂ ನಾವೆಲ್ಲರೂ ತುಂಬಾ ಆಸಕ್ತಿ ವಹಿಸಿ ಅವರನ್ನು ಈ ರಾಜ್ಯದ, ರಾಷ್ಟ್ರದ ಸಮಾಜದ ಸತ್ಪ್ರಜೆಗಳನ್ನಾಗಿ ಮಾಡುವಂತಹ ಗುರುತರ ಹೊಣೆಗಾರಿಕೆ ನಮ್ಮೆಲ್ಲರದಾಗಿದೆ ಎಂದು ಸನ್ಮಾರ್ಗ ಪದವಿ ಪೂರ್ವ ಮಹಾವಿದ್ಯಾಲಯದ ಚೇರ್ಮನ್ ಪ್ರೋ. ರಾಜೇಶ ಕುಲಕರ್ಣಿ ಅಭಿಪ್ರಾಯ ಪಟ್ಟರು.
ನೂತನ ವಿದ್ಯಾರ್ಥಿಗಳಿಗಾಗಿ ಜರುಗಿದ‘ಟ್ಯಾಲೆಂಟ್ ಸರ್ಚ್ ಪರೀಕ್ಷೆ’ (ಪ್ರತಿಭಾನ್ವೇಷಣೆ ಪರೀಕ್ಷೆ)ಗೆ ಚಾಲನೆ ನೀಡುತ್ತಾ ಪ್ರತಿ ವಿದ್ಯಾರ್ಥಿಯೆಡೆಗೆ ವಿಶೇಷ ಗಮನ ನೀಡುವಿಕೆ, ಅವರ ಸರ್ವಾಂಗೀಣ ಪ್ರಗತಿ,ಅವರನ್ನು ಉತ್ತಮ ಪ್ರಜೆಯನ್ನಾಗಿ ರೂಪುಗೊಳಿಸಿ ಸಮಾಜದ ಮುಖ್ಯ ವಾಹಿನಿಗೆ ತರುವುದೇ ನಮ್ಮ ಮಹಾವಿದ್ಯಾಲಯದ ಪ್ರಮುಖ ಉದ್ದೇಶವಾಗಿದೆ ಎಂದರು. ಇದಕ್ಕಾಗಿ ನಾವು ನಮ್ಮ ಶಕ್ತಿ ಮೀರಿ ವಿದ್ಯಾರ್ಥಿಗಳ ಅಭ್ಯುದಯಕ್ಕಾಗಿ ಏನು ಅವಶ್ಯವಿದೆಯೋ ಅವೆಲ್ಲವನ್ನು ನಾವು ನಮ್ಮ ಮಹಾವಿದ್ಯಾಲಯದಲ್ಲಿ ಪರಿಚಯಿಸುತ್ತಿದ್ದೇವೆ ಎಂದು ನುಡಿದರು. ಪಾಲಕ – ಪೋಷಕರಾದ ನಿಮ್ಮೆಲ್ಲರ ಅಭಿಮಾನ, ಪ್ರೋತ್ಸಾಹ, ಬೆಂಬಲವೇ ನಮಗೆ ಶ್ರೀರಕ್ಷೆ ಎಂದರು.
ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೋ.ಪ್ರೇಮಾನಂದ ರೋಣದ ಸಭೆಯಲ್ಲಿ ಮಾತನಾಡುತ್ತಾ, ವಿದ್ಯಾರ್ಥಿಗಳು ಕರ್ಪೂರದ ಗೊಂಬೆಗಳಿದ್ದಂತೆ. ನಾವು ಹೇಗೆ ಅವರನ್ನು ಅನುದಿನವೂ ತಿದ್ದುತ್ತೇವೆಯೋ ಹಾಗೆ ಅವರು ಪ್ರಗತಿ ಪಥದೆಡೆಗೆ ಸಾಗುತ್ತಾರೆ. ಈ ಅಂಶವನ್ನು ನಾವು ನಮ್ಮ ಲಕ್ಷದಲ್ಲಿಟ್ಟುಕೊಂಡು, ವಿದ್ಯಾರ್ಥಿಗಳಿಗಾಗಿ ಉತ್ತಮ ಕಟ್ಟಡ, ಸ್ನೇಹಮಯಿ ಪರಿಸರ, ಮೂರು ಪ್ರತ್ಯೇಕ ಪ್ರಯೋಗಾಲಯಗಳು ಹಾಗೂ ಸುಸಜ್ಜಿತ ಗ್ರಂಥಾಲಯ, ನುರಿತ ಉಪನ್ಯಾಸಕ ವೃಂದ ಮತ್ತು ಹೊರಗಿನಿಂದ ನುರಿತ ವಿಷಯ ಬೋಧನಾ ತಜ್ಞರಿಂದಲೂ ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ, ಇವೆಲ್ಲವನ್ನು ಪ್ರತಿ ವರ್ಷ ನಾವು ನಮ್ಮ ಮಹಾವಿದ್ಯಾಲಯದಲ್ಲಿ ಚಾಚೂ ತಪ್ಪದೇ ಅನುಸರಿಸುತ್ತಿದ್ದೇವೆ ಎಂದು ನುಡಿದು ಸಭೆಯ ಗಮನ ಸೆಳೆದರು.
ಮಹಾವಿದ್ಯಾಲಯದ ನಿರ್ದೇಶಕ ಪ್ರೋ.ಪುನೀತ ದೇಶಪಾಂಡೆಯವರು ಮಾತನಾಡುತ್ತಾ, ನೂತನ ವಿದ್ಯಾರ್ಥಿಗಳಿಗೆ ನಮ್ಮ ಮಹವಿದ್ಯಾಲಯದಲ್ಲಿ ದಿನನಿತ್ಯ ಪಾಠದ ಜೊತೆಗೆ NEET, CET ಮುಂತಾದ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ, ಕರಿಯರ್ ಗೈಡೆನ್ಸ್ಬಗ್ಗೆ ಪಾಲಕರ ಗಮನ ಸೆಳೆದರು. ಈ ಹಿಂದಿನ ವರ್ಷಗಳಲ್ಲಿ ನಮ್ಮ ಮಹಾವಿದ್ಯಾಲಯದಿಂದ NEET, CET ಪರೀಕ್ಷೆಯಲ್ಲಿ ಪಾಸಾದ ವಿದ್ಯಾರ್ಥಿಗಳ ಹೆಸರು ಹಾಗೂ ಅವರ ಶ್ರಮವನ್ನು ಸಭೆಗೆ ಎಳೆ ಎಳೆಯಾಗಿ ವಿವರಿಸಿದರು.
ಮಹಾವಿದ್ಯಾಲಯದ ಆಡಳಿತಾಧಿಕಾರಿ ಶ್ರೀ.ಎಮ್.ಸಿ.ಹಿರೇಮಠ ಸಭೆಯಲ್ಲಿ ಮಾತನಾಡುತ್ತಾ, ಇಂದಿನ ಸಾಮರ್ಥ್ಯ ಅನ್ವೇಷಣಾ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗೆ ಹತ್ತು ಸಾವಿರರೂ, ದ್ವಿತೀಯ ಸ್ಥಾನ ಪಡೆದವರಿಗೆ ಏಳು ಸಾವಿರ ಹಾಗೂ ತೃತೀಯ ಸ್ಥಾನ ಪಡೆದವರಿಗೆ ಮೂರು ಸಾವಿರರೂಪಾಯಿ ಪ್ರೋತ್ಸಾಹಧನವನ್ನು ನೀಡಲಾಗುವುದೆಂದರು.ಅತೀ ಬಡ ವಿದ್ಯಾರ್ಥಿಗಳತ್ತಲೂ ನಮ್ಮ ಮಹಾವಿದ್ಯಾಲಯವು ಗಮನ ನೀಡುತ್ತದೆ ಎಂಬುದನ್ನು ಹಿಂದಿನ ವರ್ಷಗಳಲ್ಲಿ ಬಡ ವಿದ್ಯಾರ್ಥಿಗಳಿಗೆ ನೀಡಿದ ಸಹಾಯವನ್ನು ಸಭೆಗೆ ವಿವರಿಸಿದರು.ನಮ್ಮ ಮಹಾವಿದ್ಯಾಲಯಕ್ಕೆ ಆಗಮಿಸುವ ನೂತನ ವಿದ್ಯಾರ್ಥಿಗಳಿಗೆ ದೊರೆಯುವ ಸಹಾಯ ಸೌಲಭ್ಯಗಳು, ಸಂಚರಿಸಲು ಬಸ್ಸ ವವ್ಯಸ್ಥೆ, ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ೯೫% ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ನಮ್ಮ ಕಾಲೇಜಿನಿಂದ ಸನ್ಮಾರ್ಗ ವಿಧ್ವತ್ ವಿದ್ಯಾರ್ಥಿ ವೇತನ ನೀಡುವ ಸೌಲಭ್ಯವನ್ನು ಪಾಲಕರಿಗೆ ತಿಳಿಸಿದರು.
ಇಂದಿನ ಸಾಮರ್ಥ್ಯ ಅನ್ವೇಷಣಾ ಪರೀಕ್ಷೆಗೆ ವಿದ್ಯಾರ್ಥಿಗಳಿಂದ, ಪಾಲಕ – ಪೋಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಸುಮಾರು ನಾಲ್ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ದೂರದೂರದ ಊರುಗಳಿಂದ, ಹಾಗೂ ನಾನಾ ಶಾಲೆಗಳಿಂದ ಆಗಮಿಸಿ ಉತ್ಸಾಹದಿಂದ ಪರೀಕ್ಷೆ ಬರೆದರು.
ಸಭೆಯಲ್ಲಿ ಸನ್ಮಾರ್ಗ ಪದವಿ ಪೂರ್ವ ಮಹಾವಿದ್ಯಾಲಯದ ಆಡಳಿತಾಧಿಕಾರಿ ಶ್ರೀ.ಎಮ್.ಸಿ ಹಿರೇಮಠ, ನಿರ್ದೇಶಕರುಗಳಾದ ಪ್ರೋ.ರೋಹಿತ್‌ಒಡೆಯರ, ಪ್ರೊ. ರಾಹುಲ ಒಡೆಯರ, ಪ್ರೋ. ಸೈಯ್ಯದ್ ಮತೀನ್ ಮುಲ್ಲಾ ಬೋಧಕ – ಬೋಧಕೇತರ ಸಿಬ್ಬಂದಿ, ಪರಿಕ್ಷಾರ್ಥಿಗಳು, ಪಾಲಕ – ಪೋಷಕರು ಉಪಸ್ಥಿತರಿದ್ದರು.
ಮಹಾವಿದ್ಯಾಲಯದ ರಸಾಯನ ಶಾಸ್ತ್ರದ ಉಪನ್ಯಾಸಕಿ ಹೀನಾ ಕೌಸರ ಮಾಳೆಕೊಪ್ಪಅಚ್ಚುಕಟ್ಟಾಗಿಕಾರ್ಯಕ್ರಮವನ್ನು ನಿರ್ವಹಿಸಿ ಎಲ್ಲರನ್ನು ಸ್ವಾಗತಿಸಿದರೆ, ಗಣಿತ ಶಾಸ್ತ್ರದ ಉಪನ್ಯಾಸಕಿ ಚೇತನಾ ಬೊಮ್ಮಣ್ಣವರ ವಂದಿಸಿದರು.
