ಮುಂಡರಗಿ:
ಬೈಕ್ ಹಾಗೂ ಕಾರಿನ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಬೈಕ್ ಸವಾರರು ಸಾವನ್ನಪ್ಪಿರುವ ದುರ್ಘಟನೆ ಗದಗ ಜಿಲ್ಲೆಯ ಮುಂಡರಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗುರುವಾರ(5-3-26) ರಾತ್ರಿ 7 ಗಂಟೆ ಸುಮಾರಿಗೆ ಸಂಭವಿಸಿದೆ.
🖋ವರದಿ: ಮಹಲಿಂಗೇಶ ಹಿರೇಮಠ. ಗದಗ
ಸಾವನ್ನಪ್ಪಿದವರನ್ನು ಆನಂದ ಲಕ್ಷ್ಮೇಶ್ವರಮಠ (50) ಶಿವಪ್ಪ ಪಾಟ್ಲಿ (36) ಹಾಗೂ ಮುತ್ತಪ್ಪ ಮುದಗಣ್ಣವರ (28) ಎಂದು ಗುರುತಿಸಲಾಗಿದೆ.
ಮುಂಡರಗಿ ಪಟ್ಟಣದಿಂದ ಜಂತ್ಲಶಿರೂರ ಗ್ರಾಮಕ್ಕೆ ತೆರಳುತ್ತಿದ್ದ ಬೈಕ್ ಸವಾರರು ಹಾಗೂ ಡೋಣಿ ಗ್ರಾಮದಿಂದ ಹಿರೇಹಡಗಲಿ ಕಡೆಗೆ ಸಾಗುತ್ತಿದ್ದ ಕಾರಿನ ನಡುವೆ ಬರದೂರು ಮತ್ತು ಮೇವುಂಡಿ ಗ್ರಾಮಗಳ ಮಧ್ಯೆ ಈ ದುರ್ಘಟನೆ ನಡೆದಿದೆ.
ಲಭಿಸಿದ ಮಾಹಿತಿಯ ಪ್ರಕಾರ, ಬೈಕ್‌ನಲ್ಲಿ ಮೂವರು ಯುವಕರು ಒಂದೇ ಬೈಕ್ ನಲ್ಲಿ ಪ್ರಯಾಣಿಸುತ್ತಿದ್ದರು. ಇದೇ ವೇಳೆ ಎದುರಿನಿಂದ ಬರುತ್ತಿದ್ದ ಕಾರು ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದೆ. ಅಪಘಾತದ ತೀವ್ರತೆಗೆ ಬೈಕ್ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಮೂವರು ಸವಾರರು ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತಪಟ್ಟ ಮೂವರು ಸಹ, ಜಂತ್ಲಿ ಗ್ರಾಮದವರೆಂದು ತಿಳಿದು ಬಂದಿದೆ.
ಅಪಘಾತದ ತೀವ್ರತೆಗೆ ಆನಂದ ಲಕ್ಷ್ಮೇಶ್ವರಮಠ ಮತ್ತು ಶಿವಪ್ಪ ಪಾಟ್ಲಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಮುತ್ತಪ್ಪ ಮುದಗಣ್ಣವರ ಅವರನ್ನು ತಕ್ಷಣ ಸ್ಥಳೀಯರು ಮತ್ತು ಪೊಲೀಸರು ಸೇರಿ ಗದಗದ ಜಿಮ್ಸ್ (GIMS) ಆಸ್ಪತ್ರೆಗೆ ದಾಖಲಿಸಿದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಸಹ ಬಳಿಕ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಅಪಘಾತದ ಸುದ್ದಿ ತಿಳಿದ ತಕ್ಷಣ ಮುಂಡರಗಿ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಘಟನೆಯ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಈ ದುರ್ಘಟನೆಯಿಂದ ಮೃತರ ಕುಟುಂಬದಲ್ಲಿ ಆಕ್ರಂದನ ಮುಗಿಲುಮುಟ್ಟಿದ್ದು, ಸ್ಥಳೀಯರಲ್ಲಿ ದುಃಖದ ವಾತಾವರಣ ನಿರ್ಮಾಣವಾಗಿದೆ.
ಒಂದೇ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ ಮೂವರು ಯುವಕರ ಸಾವಿನಿಂದ ಗ್ರಾಮದಲ್ಲಿ ಶೋಕದ ವಾತಾವರಣ ಕಂಡುಬಂದಿದೆ.
ಈ ಸಂಬಂಧ ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.
