ಗದಗ, ಜೂನ್ 24 – ಗದಗ ಜಿಲ್ಲೆಯ ಲಕ್ಕುಂಡಿ ಗ್ರಾಮದ ಸಮೀಪ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 67ರ ಮೇಲೆ ಇಂದು ಬೆಳಿಗ್ಗೆ ಬೈಕ್ ಹಾಗೂ ಕಾರು ಮುಖಾಮುಖಿಯಾಗಿ ಢಿಕ್ಕಿಯಾಗಿ ಅಪಘಾತ ಸಂಭವಿಸಿದೆ.
ಅಪಘಾತದ ರಭಸಕ್ಕೆ ಕಾರು ಪಲ್ಟಿ ಹೊಡೆದು ರಸ್ತೆ ಪಕ್ಕಕ್ಕೆ ಉರುಳಿ ಬಿದ್ದಿದ್ದು, ಘಟನೆಯಲ್ಲಿ ಬೈಕ್ ಸವಾರ ಹಾಗೂ ಕಾರಿನಲ್ಲಿ ಪ್ರಯಾಣಿಸುತ್ತಿದ್ದವರಿಗೆ ತೀವ್ರ ಗಾಯಗಳಾಗಿವೆ.
ಘಟನೆ ವಿವರ:
ಕೊಪ್ಪಳದಿಂದ ಗದಗ ಕಡೆಗೆ ಸಾಗುತ್ತಿದ್ದ ಕಾರು, ಗದಗದಿಂದ ಲಕ್ಕುಂಡಿ ಗ್ರಾಮದ ಕಡೆಗೆ ಹೊರಟಿದ್ದ ಬೈಕ್‌ಗೆ ಡಿಕ್ಕಿ ಹೊಡೆದಿದ್ದು, ಬೈಕ್ ಸವಾರರ ಹೆದ್ದಾರಿ ಕ್ರಾಸ್ ಮಾಡುವಾಗ ಈ ಅಪಘಾತ ಸಂಭವಿಸಿದೆ. ವೇಗವಾಗಿ ಸಾಗುತ್ತಿದ್ದ ಕಾರು ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಪಲ್ಟಿ ಹೊಡೆದು ಉರುಳಿಬಿದ್ದಿದೆ.
ಗಾಯಾಳುಗಳಿಗೆ ತಕ್ಷಣ ಚಿಕಿತ್ಸೆ:
ಘಟನೆ ನಡೆದ ತಕ್ಷಣವೇ ಸ್ಥಳೀಯರು ಹಾಗೂ ಸಮೀಪದ ವಾಹನ ಚಾಲಕರು ಕೂಡಿಕೊಂಡು, ಗಾಯಾಳುಗಳನ್ನು ಕೂಡಲೇ ಗದಗದ ಜೀಮ್ಸ್(JIMS) ಆಸ್ಪತ್ರೆಗೆ ರವಾನಿಸಲಾಗಿದೆ. ಪ್ರಾಥಮಿಕ ಮಾಹಿತಿಯಂತೆ, ಬೈಕ್ ಸವಾರರಿಗೆ ತಲೆಗೆ ಹಾಗೂ ಕಾಲಿಗೆ ಗಂಭೀರ ಗಾಯಗಳಾಗಿದ್ದು, ಕಾರಿನಲ್ಲಿದ್ದವರಿಗೂ ಗಂಭೀರ ಗಾಯಗಳಾಗಿವೆ ಎನ್ನಲಾಗಿದೆ.
ಪೊಲೀಸರ ಸ್ಥಳ ಭೇಟಿ ಹಾಗೂ ಪರಿಶೀಲನೆ:
ಘಟನೆಯ ಸುದ್ದಿ ತಲುಪಿದ ತಕ್ಷಣ ಗದಗ ಗ್ರಾಮೀಣ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಅಪಘಾತದ ಕಾರಣವಾಗಿ ಸಂಚಾರಿ ಅಡಚಣೆ ಉಂಟಾಗಿದ್ದ ಹೀಗಾಗಿ ಟ್ರಾಫಿಕ್ ನಿಯಂತ್ರಿಸಲು ಪೋಲೀಸರ ತಂಡ ಸ್ಥಳದಲ್ಲಿ ನಿಯೋಜಿತವಾಗಿತ್ತು.
ಸ್ಥಳೀಯರ ಪ್ರಕಾರ, ಹೆದ್ದಾರಿಯಲ್ಲಿ ಸ್ಪಷ್ಟವಾದ ಕ್ರಾಸಿಂಗ್ ವ್ಯವಸ್ಥೆ ಇಲ್ಲದಿರುವುದು ಅಪಘಾತಕ್ಕೆ ಕಾರಣವಾಗಿರಬಹುದು ಎಂಬ ಅಸಮಾಧಾನವೂ ವ್ಯಕ್ತವಾಗಿದೆ. ಗದಗ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.