ಲಕ್ಷ್ಮೇಶ್ವರ: ಸಾಧನೆ ಯಾರ ಕೈಗೂ ಸಹ ಸುಲಭವಾಗಿ ಸಿಗುವುದಲ್ಲ. ಪರಿಶ್ರಮ ಬೇಕು. ಅದು ಸಹ ನಿರಂತರ ಪರಿಶ್ರಮ. ಪರಿಶ್ರಮ ಅಷ್ಟೆ ಸಾಕೆ. ಇಲ್ಲ, ನಿರ್ದಿಷ್ಟ ಗುರಿ ಇರಬೇಕು. ಅದಕ್ಕೆ ಸೂಕ್ತ ಪ್ಲಾನಿಂಗ್ ಇರಬೇಕು. ದೂರ ದೃಷ್ಟಿ ಸಹ ಇರಬೇಕು. ಮುಂದೇನು ಎಂಬುದರ ಬಗ್ಗೆ ಕ್ಲಾರಿಟಿ ಇರಬೇಕು. ಹೀಗೆ ಹಲವು ಅಂಶಗಳು ಒಂದು ಸಾಧನೆಯ ಹಿಂದಿರುವ ಹಂತಗಳು ಎನ್ನಬಹುದು.
ವರದಿ : ಪರಮೇಶ ಎಸ್ ಲಮಾಣಿ
ಈ ಸಾಧನೆ, ಯಶಸ್ಸು ಎಂಬುದನ್ನು ಸರ್ಕಾರಿ ಕೆಲಸ ಗಿಟ್ಟಿಸುವವರಿಗೆ ಹೋಲಿಸಿ ನೋಡಿದಾಗ ಅಲ್ಲಂತೂ ಎಷ್ಟು ಜನ ಈ ಸಾಧನೆಗಾಗಿ ಹಾತೊರೆಯುತ್ತಾರೆ, ಹೇಗೆಲ್ಲಾ ಶ್ರಮ, ಎಷ್ಟೆಲ್ಲಾ ವರ್ಷ ಮಣ್ಣು ಹೊರುತ್ತಾರೆ ಎಂದು ಹಾಗೆ ಒಮ್ಮೆ ಗ್ಲಾನ್ಸ್ ಮಾಡಿದರೆ ಅಬ್ಬಾ.. ಎನ್ನುವುದರಲ್ಲಿ ಸಂಶಯವೇ ಇಲ್ಲ. ಬಡತನ, ಸಿರಿತನ, ಉನ್ನತ ಶಿಕ್ಷಣ ಯಾವುದನ್ನು ಲೆಕ್ಕಿಸದೇ, ಅಷ್ಟೆ ಅಲ್ಲ ವರ್ಷಕ್ಕೆ 50 ಲಕ್ಷ ವೇತನ ಪ್ಯಾಕೇಜ್ ಪಡೆಯುವವರು ಭಾರತ ಸರ್ಕಾರಿ ಕೆಲಸಕ್ಕಾಗಿ, ಜನರ ಸೇವೆಗಾಗಿ ಮರಳಿ ವರ್ಷಾನುಗಟ್ಟಲೇ ಓದಿ ಜಾಬ್ ಪಡೆದಿದ್ದಾರೆ. ಇಂತಹ ಸಾಧಕರ ಪೈಕಿ ಇನ್ನು ಒಂದು ಹೆಜ್ಜೆ ಮೇಲೆ ನಿಲ್ಲುವುದು, ಸ್ಪೂರ್ತಿ ಆಗಿ ನಿಲ್ಲುವುದು ಯಾರೆಂದರೆ ಬಡತನದಲ್ಲಿ ಬೆಳೆದು ಸರ್ಕಾರದ ಉನ್ನತ ಹುದ್ದೆ ಗಿಟ್ಟಿಸುವವರು. ಅಂತಹ ಸಾಧಕರ ಪೈಕಿ ಇಂದಿನ ಲೇಖನದಲ್ಲಿ ನಾವು ಬಡತನದಲ್ಲೇ ಅರಳಿದ ಪ್ರತಿಭೆಯೂ ರೈತನ ಪುತ್ರನ ಬಗ್ಗೆ ಮಾತನಾಡುತ್ತಿದ್ದೇವೆ.
ಇಲಾಖಾವಾರು ಖಾಲಿ ಇದ್ದ ಹುದ್ದೆಗಳಿಗೆ ಕೇಂದ್ರ ಲೋಕಸೇವಾ ಆಯೋಗವು ಜುಲೈನಲ್ಲಿ ಸಂದರ್ಶನ ನಡೆಸಿ, ಇತ್ತೀಚಿಗೆ ಬಿಡುಗಡೆ ಮಾಡಿದ ಆಯ್ಕೆ ಪಟ್ಟಿಯಲ್ಲಿ ಭಾರತೀಯ ವಾರ್ತಾ ಸೇವೆಯ ಹಿರಿಯ ಶ್ರೇಣಿಯ ಅಧಿಕಾರಿ ಹುದ್ದೆಗೆ ಆಯ್ಕೆಯಾದ ಮುರಳೀಧರ ತುಕ್ಕಪ್ಪ ಕಾರಭಾರಿ.
ಇವರು ಮೂಲತಃ ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಸುವರ್ಣಗಿರಿ ಗ್ರಾಮದವರು. ತಂದೆ ತುಕ್ಕಪ್ಪ ಕಾರಭಾರಿ ಮಧ್ಯಮ ವರ್ಗದ ಮನೆತನದಲ್ಲಿ ಹುಟ್ಟಿ ಬೆಳೆದ ಇವರು ಧಾರವಾಡದಲ್ಲಿ ಪದವಿ ಓದುತ್ತಿರುವಾಗಲೇ ತಂದೆಯನ್ನು ಕಳೆದುಕೊಂಡ ಇವರು. ಧೈರ್ಯಗೆಡದೆ ತಾಯಿ ಗಂಗವ್ವ, ಹಿರಿಯ ಸಹೋದರಿ ಮೀನಾಕ್ಷಿ ಮತ್ತು ಹಿರಿಯ ಸಹೋದರ ಮಲ್ಲಿಕಾರ್ಜುನ ರ ಸಹಕಾರದಿಂದ ಓದು ಮುಂದುವರೆಸುತ್ತಾರೆ.
ಮನೆಯವರಿಗೆ ಹೆಚ್ಚು ಕಷ್ಟ ಆಗಬಾರದು ಎಂದು ಭಾವಿಸಿ ಊರಿಗೆ ಹೋಗದೆ ಧಾರವಾದಲ್ಲೇ ಇದ್ದು ಯಾವುದಾದರು ಸರ್ಕಾರಿ ಕೆಲಸ ಗಿಟ್ಟಿಸಿಕೊಳ್ಳಬೇಕು ಎಂದು ನಿರ್ಧರಿಸಿ ಸ್ವಂತ ಖರ್ಚಿನಲ್ಲಿ ಪುಸ್ತಕ, ಬಾಡಿಗೆ ರೋಮ ಮತ್ತು ಊಟಕ್ಕಾಗಿ ಕೆಲವು ವರ್ಷ ವಿದ್ಯಾಕಾಶಿಯಲ್ಲೇ ಇದ್ದುಕೊಂಡು ಪಾರ್ಟ್ ಟೈಮ್ ಕೆಲಸ ಮಾಡುತ್ತಲೇ ಓದು ಮುಂದುವರೆಸಿ, ಅಂದುಕೊಂಡಂತೆ 2012 ರ ಡಿಸೆಂಬರ್ ನಲ್ಲಿ ಸರ್ಕಾರಿ ಸೇವೆಗೆ ಸೇರುತ್ತಾರೆ.
ಪ್ರಾಥಮಿಕ ಶಿಕ್ಷಣವನ್ನು ಸ್ವಗ್ರಾಮದಿಂದ ಪಡೆದ ಇವರು ಪ್ರೌಢ ಶಾಲೆಯನ್ನು ಲಕ್ಷ್ಮೇಶ್ವರದಲ್ಲಿ ಪೂರ್ಣಗೊಳಿಸಿದ ಇವರು ಮುಂದೆ ಪಿ.ಯು.ಸಿ ಮತ್ತು ಬಿ.ಎ. ಪದವಿಯನ್ನು ಧಾರವಾಡದ ಪ್ರತಿಷ್ಟಿತ ಕರ್ನಾಟಕ ಕಾಲೇಜಿನಿಂದ ಪಡೆದು, ಬಿ. ಎಡ್ ತರಬೇತಿಯನ್ನು ಜೆ.ಎಸ್.ಎಸ್ ಕಾಲೇಜಿನಲ್ಲಿ ಮುಗಿಸಿ, ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ (ಇಗ್ನೌ) ಮತ್ತು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಮೈಸೂರು (ಕೆ.ಎಸ್.ಓ.ಯು)ದಿಂದ ಪತ್ರಿಕೋದ್ಯಮದಲ್ಲಿ ಉನ್ನತ ವ್ಯಾಸಂಗವನ್ನು ಮುಗಿಸಿರುತ್ತಾರೆ.
ಪ್ರಸ್ತುತ ಇವರು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಅಡಿಯಲ್ಲಿರುವ ಕೇಂದ್ರ ಸಂವಹನ ಇಲಾಖೆ, ಧಾರವಾಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೂ, ಇವರು 2012 ರ ಡಿಸೆಂಬರ್ ನಲ್ಲಿ ಮೈಸೂರಿನಲ್ಲಿ ವೃತ್ತಿಯನ್ನು ಪ್ರಾರಂಬಿಸಿದರು ನಂತರ ವಿಜಯಪುರ ಜಿಲ್ಲೆಯಲ್ಲಿ ಸಹ ಇದೆ ಇಲಾಖೆಯಲ್ಲಿ ಸೇವೆಯನ್ನು ಸಲ್ಲಿಸಿರುತ್ತಾರೆ, ಒಟ್ಟು 12 ವರ್ಷಗಳ ಗ್ರೂಪ್ ಸಿ ಸರ್ಕಾರಿ ಸೇವೆಯ ನಂತರ, ಕೇಂದ್ರ ಲೋಕಸೇವಾ ಆಯೋಗವು 2022 ರಲ್ಲಿ ಇವರು ಕೆಲಸ ಮಾಡುತ್ತಿದ್ದ ವಾರ್ತಾ ಮತ್ತು ಪ್ರಸಾರ ಸಚಿವಾಲಯದಲ್ಲಿ ಗ್ರೂಪ್ ‘ಬಿ’ ಹಿರಿಯ ಅಧಿಕಾರಿಗಳ ಖಾಲಿಯಿರುವ ಹುದ್ದೆಗಳಿಗೆ ಅರ್ಜಿ ಆವ್ಹಾನಿಸಿತ್ತು. ಇದೆ ವರ್ಷದ ಜುಲೈನಲ್ಲಿ ಆಯೋಗವು ನವದೆಹಲಿಯಲ್ಲಿ ನಡೆಸಿದ ಸಂದರ್ಶನದಲ್ಲಿ ಭಾಗವಹಿಸಿ, ಆಯ್ಕೆಯಾದರು.
ಪ್ರಸ್ತುತ ಇವರನ್ನು ವಾರ್ತಾ ಮತ್ತು ಪ್ರಸಾರ ಸಚಿವಾಲಯ,
ಭಾರತ ಸರ್ಕಾರವು
ಕ್ಯಾಂಪ್ಯೆನ್ ಅಧಿಕಾರಿಯಾಗಿ, ಸೆಂಟ್ರಲ್ ಬ್ಯೂರೋ ಆಫ್ ಕಮ್ಯುನಿಕೇಷನ್ ನವದೆಹಲಿ ಕೇಂದ್ರ ಕಛೇರಿಗೆ ಹಿರಿಯ ದರ್ಜೆಯ ಭಾರತೀಯ ವಾರ್ತಾ ಸೇವೆ ಅಡಿಯಲ್ಲಿ ಸ್ಥಳ ನಿಯೋಜಿಸಿ ಆದೇಶವನ್ನು ಹೊರಡಿಸಿದ್ದು, ಇದು ಸಮಾಜದ ಮತ್ತು ಜಿಲ್ಲೆಯ ಹೆಮ್ಮೆಯಾಗಿದೆ.
