ಮುಂಡರಗಿ: ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಡಂಬಳ ಗ್ರಾಮದಲ್ಲಿ ಮನಕಲಕುವ ಘಟನೆ ನಡೆದಿದೆ. ಅಜ್ಜಿ ಸಾವಿನ ದುಃಖದಲ್ಲೂ ಮನೋಬಲವನ್ನು ಕಳೆದುಕೊಳ್ಳದೆ, ಎಸ್‌ಎಸ್‌ಎಲ್‌ಸಿ ಕನ್ನಡ ಪರೀಕ್ಷೆ ಬರೆದ ವಿದ್ಯಾರ್ಥಿನಿ ಜಲಜಾಕ್ಷಿ ಕಿಲಾರಿ, ಇತರರಿಗೆ ಪ್ರೇರಣೆಯಾಗಿದ್ದಾರೆ.
ಜಗದ್ಗುರು ತೋಂಟದಾರ್ಯ ಬಾಲಕಿಯರ ಪ್ರೌಢಶಾಲೆಯ ವಿದ್ಯಾರ್ಥಿನಿ ಜಲಜಾಕ್ಷಿ, ಎಸ್‌ಎಸ್‌ಎಲ್‌ಸಿ ಕನ್ನಡ ಪರೀಕ್ಷೆಗೆ ಸಿದ್ಧರಾಗುತ್ತಿದ್ದ ಸಂದರ್ಭದಲ್ಲಿಯೇ, ವಿಧಿಯಾಟವೊ೦ದು ಆಕೆಯ ಕುಟುಂಬವನ್ನು ಕಾಡಿತು. ನಿನ್ನೆ ರಾತ್ರಿ ಅಜ್ಜಿ ನಿಧನರಾದರು, ಇದರಿಂದ ಕುಟುಂಬದಲ್ಲಿ ಆಘಾತದ ವಾತಾವರಣ ನಿರ್ಮಾಣವಾಯಿತು. ಈ ದುಃಖದ ಹೊತ್ತಲ್ಲಿಯೇ ಪರೀಕ್ಷೆ ಬರೆಯಬೇಕೆಂಬ ಒತ್ತಡವೂ ವಿದ್ಯಾರ್ಥಿನಿಯನ್ನು ಕಾಡಿತ್ತು.
ಆದರೆ, ಕುಟುಂಬದ ಸದಸ್ಯರು, ಶಾಲೆಯ ಶಿಕ್ಷಕರು ಹಾಗೂ ಸಹಪಾಠಿಗಳ ಬೆಂಬಲದೊಂದಿಗೆ ಜಲಜಾಕ್ಷಿ ಧೈರ್ಯ ಸಾಧಿಸಿ ಪರೀಕ್ಷೆ ಬರೆಯಲು ಮುಂದಾದರು. ಅಜ್ಜಿಗೆ ಪೂಜೆ ಸಲ್ಲಿಸಿ, ಪ್ರಾರ್ಥನೆ ಮಾಡಿ, ಪುಷ್ಪ ಸಮರ್ಪಿಸಿ ಆಶೀರ್ವಾದ ಪಡೆದುಕೊಂಡು ಶಾಲೆಗೆ ತೆರಳಿದ ವಿದ್ಯಾರ್ಥಿನಿ, ಕಣ್ಣೀರನ್ನು ತೊಳೆದು ಧೈರ್ಯದಿಂದ ಪರೀಕ್ಷೆ ಬರೆದರು.

ಶಿಕ್ಷಕಿಯರಾದ ಶ್ರೀಮತಿ ಎ.ಬಿ. ಬೇವಿನಕಟ್ಟಿ, ಸಂಜುತ ಸಂಕಣ್ಣವರ್, ಶ್ರೀಮತಿ ಎಸ್ಎಂ ಹಂಚಿನಾಳ, ಬುದಪ್ಪ ಅಂಗಡಿ, ಎಸ್.ಎಸ್. ತಿಮ್ಮಾಪುರ್, ಎಂ.ಎಂ. ಗೌಳೆರ ಅವರಂತಹ ಶಿಕ್ಷಕರು ವಿದ್ಯಾರ್ಥಿನಿಗೆ ಪರೀಕ್ಷಾ ಕೊಠಡಿಯಲ್ಲಿ ಧೈರ್ಯ ತುಂಬಿದರು. ಇಡೀ ಶಾಲೆಯು ಆಕೆಯ ಧೈರ್ಯವನ್ನು ಮೆಚ್ಚಿ ಸಂತಸ ವ್ಯಕ್ತಪಡಿಸಿದೆ.
ಅಜ್ಜಿ ಅಗಲಿಕೆಯ ದುಃಖ ಎದೆಗಟ್ಟಿಕೊಂಡು, ತನ್ನ ಭವಿಷ್ಯಕ್ಕಾಗಿ ಹೋರಾಡಿದ ಜಲಜಾಕ್ಷಿ, ಇತರ ವಿದ್ಯಾರ್ಥಿಗಳಿಗೆ ಆದರ್ಶವಾಗಿದ್ದಾರೆ. ಈ ದಿಟ್ಟ ಹೆಜ್ಜೆಗೆ ಎಲ್ಲೆಡೆಯಿಂದ ಅಭಿನಂದನೆಗಳು ವ್ಯಕ್ತವಾಗುತ್ತಿವೆ.