ಗದಗ, ಏಪ್ರಿಲ್ 18: ಸಮಾಜದಲ್ಲಿ ಸಮಾನತೆ ಮತ್ತು ಬಾಂಧವ್ಯದ ಸಂಕೇತವಾಗಿ, ಏಪ್ರಿಲ್ 19ರಂದು ಗದಗದಲ್ಲಿ ಸಮಾನತೆಯ ರಥಯಾತ್ರೆ ಹಾಗೂ ಸಮಾನತೆ ಬುತ್ತಿ ಕಾರ್ಯಕ್ರಮ ನಡೆಯಲಿದೆ. ಈ ಐತಿಹಾಸಿಕ ಕಾರ್ಯಕ್ರಮವು ಬೆಳಗ್ಗೆ ಬಸವೇಶ್ವರ ಸರ್ಕಲ್‌ನಿಂದ ಪ್ರಾರಂಭವಾಗಿ, ನಗರಸಭೆ ಆವರಣದಲ್ಲಿ ಇರುವ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡುವ ಮೂಲಕ ಮುನ್ಸಿಪಲ್ ಕಾಲೇಜ್ ಮೈದಾನದತ್ತ ಸಾಗಲಿದೆ. ಅಲ್ಲಿಯೇ ವಿಶೇಷ ವೇದಿಕೆಯಲ್ಲಿ ಬಹಿರಂಗ ಸಭೆ ನಡೆಯಲಿದ್ದು, ಸಾವಿರಾರು ಜನರ ಉಪಸ್ಥಿತಿಯಲ್ಲಿ ಕಾರ್ಯಕ್ರಮದ ಶೋಭೆ ಹೆಚ್ಚಲಿದೆ.
ಈ ಕುರಿತು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಖಿಲ ಭಾರತ ಸಮಾನತೆ ಮಂದಿರ ಪ್ರತಿಷ್ಠಾಪನೆ ಮಹಾಸಭಾದ ಸಂಸ್ಥಾಪಕ ಅಧ್ಯಕ್ಷರಾದ ಅನಿಲ ಪಿ. ಮೆಣಸಿನಕಾಯಿ ಅವರು, “ಈ ಸಮಾನತೆಯ ಯಾತ್ರೆ ಕೇವಲ ಧಾರ್ಮಿಕ ಅಥವಾ ಸಾಮಾಜಿಕ ಕಾರ್ಯಕ್ರಮವಲ್ಲ. ಇದು ಮಾನವೀಯ ಮೌಲ್ಯಗಳ ಸಾರವಾದ, ಶೋಷಿತ-ದಮನಿತ ಜನತೆಯ ಹಕ್ಕುಗಳನ್ನು ಒತ್ತಿ ಹೇಳುವ ವೇದಿಕೆ. ನೂರಾರು ಸಂತರು, ಶರಣರು, ಪೌರಕಾರ್ಮಿಕರು, ಶ್ರಮಿಕರು, ಬುದ್ದಿಜೀವಿಗಳು, ಸಾಹಿತಿಗಳು, ಸ್ಮಶಾನ ಕಾವಲುಗಾರರು, ದಲಿತರು ಹಾಗೂ ವಿವಿಧ ಹಿನ್ನಾಲೆಯ ಸಮಾಜದ ಜನರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ,” ಎಂದು ಹೇಳಿದರು.

ಮೇಲಿನ ಪೋಸ್ಟ ನ್ನ ಟಚ್ ಮಾಡಿದಲ್ಲಿ ಕಾಲೇಜಿನ ಸಂಪೂರ್ಣ ಮಾಹಿತಿ ಒದಗುತ್ತದೆ.
ಸ್ನೇಹಸಮ್ಮಿಲನಕ್ಕೆ ರಾಜಕೀಯ ಮೀಮಾಂಸೆ ಇಲ್ಲ..
ಕಾರ್ಯಕ್ರಮದ ವಿಶಿಷ್ಟತೆಯೆಂದರೆ, ಇದಕ್ಕೆ ರಾಜಕೀಯ ಬಣ್ಣವಿಲ್ಲ. “ಸಮಾನತೆ ಮಂದಿರ ನಿರ್ಮಾಣದ ಕಲ್ಪನೆ ರಾಜಕೀಯದ ಪಾರವಾಗಿದೆ. ಎಲ್ಲ ಧಾರ್ಮಿಕ, ಸಾಮಾಜಿಕ ಹಾಗೂ ರಾಜಕೀಯ ಹಿತಾಸಕ್ತಿಗಳನ್ನು ತ್ಯಜಿಸಿ, ನಿಜವಾದ ಸಮಾನತೆಯ ಪರಿಕಲ್ಪನೆಯನ್ನು ಬೆಂಬಲಿಸಬೇಕೆಂದು ನಾವು ಕೋರುತ್ತಿದ್ದೇವೆ,” ಎಂದು ಮೆಣಸಿನಕಾಯಿ ಹೇಳಿದ್ದಾರೆ.
ವಿಶೇಷ ವೇದಿಕೆ, ಸಂಸ್ಕೃತಿಕ ವೈಭವ..
ಮುನ್ಸಿಪಲ್ ಮೈದಾನದಲ್ಲಿ ಭವ್ಯ ವೇದಿಕೆ ನಿರ್ಮಿಸಲಾಗುತ್ತಿದೆ. ವಿವಿಧ ಕ್ಷೇತ್ರಗಳಿಂದ ಆಗಮಿಸುವ ಸನ್ಮಾನ್ಯರನ್ನು ಸನ್ಮಾನಿಸಲಾಗುವುದು. ಸಂಘ-ಸಂಸ್ಥೆಗಳ ಪ್ರತಿನಿಧಿಗಳು, ಕ್ರೀಡಾಪಟುಗಳು, ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಹಾಗೂ ಜಿಲ್ಲಾಪಂಚಾಯತ್ ಸದಸ್ಯರು, ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಸೇರಿದಂತೆ ಸಾವಿರಾರು ಮಂದಿ ಭಾಗವಹಿಸಲಿದ್ದಾರೆ.

ಕಾರ್ಯಕ್ರಮದ ಯಶಸ್ಸಿಗೆ ಸಮುದಾಯದ ಕೈಜೋಡಿಕೆ ಅಗತ್ಯ..
“ಸಮಾನತೆ ಮಂದಿರ ಕೇವಲ ಕಟ್ಟಡವಲ್ಲ, ಇದು ಹೊಸ ಯುಗದ ಸಂಕೇತ. ಸಮಾನತೆಯ ಆಶಯವನ್ನು ಪ್ರತಿನಿಧಿಸುವ ಈ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬರೂ ಭಾಗವಹಿಸಿ ಶಕ್ತಿ ತುಂಬಬೇಕು,” ಎಂದು ಮೆಣಸಿನಕಾಯಿ ಮನವಿ ಮಾಡಿದರು.

ಈ ಸುದ್ದಿಗೋಷ್ಠಿಯಲ್ಲಿ ಮಾಜಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿದ್ದಣ್ಣ ಪಲ್ಲೇದ, ಮುತ್ತಣ್ಣ ಗದುಗಿನ, ಮಂಜುನಾಥ ಮ್ಯಾಗೆರಿ, ಉಡಚಪ್ಪ ಹಳ್ಳಿಕೇರಿ, ವಸಂತ ಪಡಗದ, ಪರಮೇಶ ನಾಯಕ, ಶರಣಪ್ಪ ಚಿಂಚಲಿ, ಉಮೇಶ್ ಹಡಪದ ಮುಂತಾದವರು ಉಪಸ್ಥಿತರಿದ್ದರು.