ಮುಂಡರಗಿ: ರಾಜ್ಯದಲ್ಲಿ ಬ್ಯಾಂಕ್ ದರೋಡೆ, ಎಟಿಎಂ ದರೋಡೆ, ಹೈವೇ ರಾಬರಿಯಂಥ ಪ್ರಕರಣಗಳು ಜನರನ್ನ ಬೆಚ್ಚಿಬೀಳಿಸವೆ. ಈ ದರೋಡೆ ಪ್ರಕರಣಗಳು ಮಾಸುವ ಮುನ್ನವೇ, ಗದಗ ಜಿಲ್ಲೆಯಲ್ಲಿ ಒಂದೇ ರಾತ್ರಿಯಲ್ಲಿ ಸರಣಿ ಕಳ್ಳತನ ನಡೆದಿರುವ ಘಟನೆ ಬೆಳಕಿಗೆ ಬಂದಿದೆ.
ಹೌದು, ಗದಗ ಜಿಲ್ಲೆ ಮುಂಡರಗಿ ಹಾಗೂ ಶಿರಹಟ್ಟಿ ವ್ಯಾಪ್ತಿಯಲ್ಲಿ (ದಿ:22-01-2025) ರಂದು ಈ ಕಳ್ಳತನ ನಡೆದಿದ್ದು, ಒಂದೇ ರಾತ್ರಿಯಲ್ಲಿ ಒಟ್ಟು ಮೂರು ಗ್ರಾಮಗಳಲ್ಲಿ ಏಳು ಕಡೆ ಕಳ್ಳತನ ನಡೆದಿದೆ. ಖದೀಮರು ಸಿನಿಮೀಯ ರೀತಿಯಲ್ಲಿ ಕಳ್ಳತನ ಮಾಡಿ ಎಸ್ಕೇಪ್ ಆಗಿದ್ದು, ತಮ್ಮ ಎಂಟತ್ತು ಜನರ ಗ್ಯಾಂಗ್ ಸಮೇತವಾಗಿಯೇ ದರೋಡೆ ನಡೆಸಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಶಿರಹಟ್ಟಿ ತಾಲೂಕಿನ ಬೆಳ್ಳಟ್ಟಿ ಗ್ರಾಮದಿಂದ ಮುಂಡರಗಿ ಹೋಗುವ ಮಾರ್ಗದ ಗ್ರಾಮಗಳಲ್ಲಿ ಕಳ್ಳತನ ನಡೆಸಲಾಗಿದ್ದು, ಬೆಳ್ಳಟ್ಟಿ, ಬನ್ನಿಕೊಪ್ಪ, ಹಾಗೂ ಮುಂಡರಗಿ ತಾಲೂಕಿನ ಬಾಗೇವಾಡಿ ಗ್ರಾಮಗಳಲ್ಲಿ ಕಳ್ಳತನ ಹಾಗೂ ಕಳ್ಳತನಕ್ಕೆ ಯತ್ನ ನಡೆದಿದೆ.

ಬೆಳ್ಳಟ್ಟಿ ಗ್ರಾಮದಲ್ಲಿ ಎಗ್ ರೈಸ್ ಅಂಗಡಿ, ಪಾನ್ ಶಾಪ್ ಅಂಗಡಿಗಳಲ್ಲಿ ಕಳ್ಳತನಕ್ಕೆ ಯತ್ನ ನಡೆದಿದ್ದು, ಮುಂದೆ ಬನ್ನಿಕೊಪ್ಪ ಗ್ರಾಮದಲ್ಲಿ ಎರಡು ಪಾನ್ ಶಾಪ್ ಸೇರಿದಂತೆ ನಾಲ್ಕು ಅಂಗಡಿಗಳಲ್ಲಿ ಕಳ್ಳತನಕ್ಕೆ ಯತ್ನಿಸಿದ್ದಾರೆ. ಸಣ್ಣ ಪುಟ್ಟ ಅಂಗಡಿಗಳಾಗಿದ್ದರಿಂದ ಹೆಚ್ಚಿನ ವಸ್ತುಗಳಾಗಲಿ, ಹಣವಾಗಲಿ ಕಳ್ಳತನವಾಗಿಲ್ಲ ಎನ್ನಲಾಗಿದೆ.
ಆದರೆ ಇದೇ ಮಾರ್ಗದಲ್ಲಿ ಮುಂದಿನ ಗ್ರಾಮಕ್ಕೆ ಎಂಟ್ರಿ ಕೊಟ್ಟ ಖದೀಮರಿಗೆ, ದೊಡ್ಡ ಜಾಕ್ ಪಾಟ್ ಸಿಕ್ಕದಂತಾಗಿದೆ. ಮುಂಡರಗಿ ತಾಲೂಕಿನ ಬಾಗೇವಾಡಿ ಗ್ರಾಮದಲ್ಲಿ, ಶಾಂತಪ್ಪ ಕರಡಿ ಎಂಬುವರ ಮನೆ ಕಳ್ಳತನವಾಗಿದ್ದು,ಮನೆಯಲ್ಲಿದ್ದ 50 ಗ್ರಾಂ ಬಂಗಾರ ಆಭರಣ, ಸುಮಾರು 100 ಗ್ರಾಂ ಬೆಳ್ಳಿ ವಸ್ತುಗಳು, ಸೀರೆಗಳು ಮತ್ತು ನಗದು ಸೇರಿದಂತೆ ಒಟ್ಟು 3 ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳು ಕಳ್ಳತನವಾಗಿವೆ.
ಮನೆಯಲ್ಲಿ ಯಾರು ಇಲ್ಲದಿರುವುದನ್ನು ಗಮನಿಸಿ ಖದೀಮರು ಹೊಂಚು ಹಾಕಿದ್ದು, ಇದಾದ ಬಳಿಕ ಶಿರಹಟ್ಟಿ ತಾಲೂಕಿನ ಕಡಕೋಳ ಗ್ರಾಮದಲ್ಲಿಯೂ ಕಳ್ಳತನಕ್ಕೆ ವಿಫಲ ಯತ್ನ ನಡೆದಿದೆ ಎನ್ನಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಶಿರಹಟ್ಟಿ ಹಾಗೂ ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿವೆ.