ಮುಂಡರಗಿ: ಬೆಳಗಾವಿಯಲ್ಲಿ ಪಂಚಮಸಾಲಿ 2ಎ ಮೀಸಲಾತಿ ಹೋರಾಟದ ವೇಳೆ ಪೊಲೀಸರು ಲಾಠಿ ಪ್ರಹಾರ ನಡೆಸಿದ ಹಿನ್ನೆಲೆ, ಗದಗ ಜಿಲ್ಲೆ ಮುಂಡರಗಿ ಪಟ್ಟಣದಲ್ಲಿಯೂ ತಾಲೂಕಿನ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ, ಸಮಾಜ ಬಾಂಧವರು, ಸರ್ಕಾರದ ನೀತಿ ಖಂಡಿಸಿ, ರಸ್ತೆ ತಡೆ ನಡೆಸುವ ಮೂಲಕ ಪ್ರತಿಭಟನೆ ನಡೆಸಿದರು.
ಪಟ್ಟಣದ ಚೆನ್ನಮ್ಮ ವೃತ್ತದ ಬಳಿ ಜಮಾಯಿಸಿದ ಪ್ರತಿಭಟನಾಕಾರರು, ಗದಗ ಹಾಗೂ ಮುಂಡರಗಿ ಸಂಪರ್ಕ ಕಲ್ಪಿಸುವ ಅರಭಾವಿ-ಚಳ್ಳಕೇರೆ ರಾಜ್ಯ ಹೆದ್ದಾರಿ ತಡೆದು, ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.ಕಾಂಗ್ರೆಸ್ ಸರ್ಕಾರದ ಸಿದ್ಧರಾಮಯ್ಯನವರ ಆಡಳಿತ ಲಿಂಗಾಯತರ ವಿರೋಧಿ ಸರ್ಕಾರವಾಗಿದೆ ಎಂದು ಪಂಚಮಸಾಲಿ ಮುಖಂಡರು ಈ ವೇಳೆ ಆಕ್ರೋಶ ವ್ಯಕ್ತಪಡಿಸಿದರು.
ನಂತರ ಪ್ರತಿಭಟನಾ ರ್ಯಾಲಿ ಮೂಲಕ ತಾಲೂಕ ದಂಡಾಧಿಕಾರಿಗಳ ಕಚೇರಿಗೆ ಆಗಮಿಸಿ ತಹಶೀಲ್ದಾರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು. ರಸ್ತೆ ತಡೆ ನಡೆಸಿದ ಹಿನ್ನೆಲೆ ಕೆಲಕಾಲ ಸಂಚಾರ ಅಸ್ತವ್ಯಸ್ತವಾಗಿ ಪ್ರಯಾಣಿಕರು ಪರದಾಟ ಅನುಭವಿಸುವಂತಾಯಿತು.
ಪ್ರತಿಭಟನೆಗೂ ಮುನ್ನ ಕಿತ್ತೂರ ಚೆನ್ನಮ್ಮನ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು.ಈ ವೇಳೆ ಪಂಚಮಸಾಲಿ ಮುಖಂಡರು ಸೇರಿದಂತೆ,ಶಹರ ಘಟಕ, ಯುವ ಘಟಕ ಹಾಗೂ ಮಹಿಳಾ ಘಟಕದ ಸದಸ್ಯರು ನೂರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.