ಗದಗ : ಗದಗ ಜಿಲ್ಲೆಯ ಹುಲಕೋಟಿ ಮೂಲದ ಖ್ಯಾತ ವೈದ್ಯರಾದ ಡಾ. ಶಾಂತಗಿರಿ ಮಲ್ಲಪ್ಪ ಅವರು ದೇಶದ ಎಲ್ಲಾ ವೈದ್ಯರು ಪ್ರಿಸ್ಕ್ರಿಪ್ಷನ್‌ಗಳು ಹಾಗೂ ವೈದ್ಯಕೀಯ ದಾಖಲೆಗಳನ್ನು ಅಚ್ಚುಕಟ್ಟಾಗಿ ಮತ್ತು ದೊಡ್ಡ ಅಕ್ಷರಗಳಲ್ಲಿ ಬರೆಯುವಂತೆ ಕಡ್ಡಾಯಗೊಳಿಸಲು ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರಿಗೆ ಪತ್ರ ಬರೆದು ವಿನಂತಿ ಸಲ್ಲಿಸಿದ್ದಾರೆ.
ಡಾ. ಶಾಂತಗಿರಿ ಅವರು ರಾಷ್ಟ್ರಪತಿಗೆ ಇ-ಮೇಲ್ ಮುಖಾಂತರ ಹಾಗೂ ಅಂಚೆ ಮೂಲಕವೂ ಪತ್ರ ಕಳುಹಿಸಿದ್ದು, ವೈದ್ಯರು ನೀಡುವ ಪ್ರಿಸ್ಕ್ರಿಪ್ಷನ್‌ಗಳು, ಕೇಸ್ ಹಿಸ್ಟರಿ, ಜನನ ಪ್ರಮಾಣಪತ್ರ, ಮರಣ ಪ್ರಮಾಣಪತ್ರ, ಮರಣ ಸಾರಾಂಶ, ಹಾಗೂ ಇತರ ವೈದ್ಯರಿಗೆ ನೀಡುವ ಉಲ್ಲೇಖ ಪತ್ರಗಳನ್ನು ದೊಡ್ಡ ಅಕ್ಷರಗಳಲ್ಲಿ ಬರೆಯುವಂತೆ ಕಾನೂನು ಜಾರಿಗೊಳಿಸಬೇಕೆಂದು ಮನವಿ ಮಾಡಿದ್ದಾರೆ.
“ಇಂತಹ ಕಾನೂನು ಜಾರಿಗೆ ಬಂದರೆ ರೋಗಿಗಳು ಮತ್ತು ಅವರ ಆರೈಕೆದಾರರಲ್ಲಿ ಪಾರದರ್ಶಕತೆ, ಸ್ಪಷ್ಟತೆ ಮತ್ತು ತೃಪ್ತಿ ಮೂಡುತ್ತದೆ” ಎಂದು ಡಾ. ಶಾಂತಗಿರಿ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.
ಕಳೆದ ಎರಡು ದಶಕಗಳಿಂದ ಬೆಂಗಳೂರಿನಲ್ಲಿ ನೆಲೆಸಿರುವ ಈ ವೈದ್ಯರು ರಾಜ್ಯಾದ್ಯಂತ 200 ಕ್ಕೂ ಹೆಚ್ಚು ಆರೋಗ್ಯ ತಪಾಸಣಾ ಶಿಬಿರಗಳನ್ನು ಆಯೋಜಿಸಿದ್ದಾರೆ. ತಮ್ಮ ವೃತ್ತಿ ಜೀವನದ ಜೊತೆಗೆ, ವೈದ್ಯರ ಕೈಬರಹ ಸುಧಾರಣೆಯ ಪರ ಅಭಿಯಾನವನ್ನೂ ಪ್ರಾರಂಭಿಸಿದ್ದಾರೆ. “ವೈದ್ಯರ ಕೈಬರಹ ಅಭಿಯಾನ” ಆರಂಭವಾದ ನಂತರ ಅನೇಕ ವೈದ್ಯರು ತಮ್ಮ ಬರವಣಿಗೆಯಲ್ಲಿ ಶುದ್ಧತೆಗೆ ಮಹತ್ವ ನೀಡಿದ್ದು, ಡಾ. ಶಾಂತಗಿರಿಯವರ ಹೋರಾಟಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು ನಗರದಲ್ಲಿ ವೈದ್ಯರಿಂದ ಬರೆದ ಅನೇಕ ಪ್ರಿಸ್ಕ್ರಿಪ್ಷನ್‌ಗಳನ್ನು ಪರಿಶೀಲಿಸಿದ ನಂತರ ಉತ್ತಮ ಕೈಬರಹದ ಕಲ್ಪನೆ ಡಾ. ಶಾಂತಗಿರಿಯವರ ಮನಸ್ಸಿನಲ್ಲಿ ಬೇರೂರಿತು. ಆರಂಭದಲ್ಲಿ ಸ್ವತಃ ಅವರು ತಮ್ಮ ಪ್ರಿಸ್ಕ್ರಿಪ್ಷನ್‌ಗಳನ್ನು ದೊಡ್ಡ ಅಕ್ಷರಗಳಲ್ಲಿ ಬರೆಯಲು ಪ್ರಾರಂಭಿಸಿದ್ದು, ಇಂದಿಗೂ ಅದನ್ನು ಅನುಸರಿಸುತ್ತಿದ್ದಾರೆ. ಅವರ ಪ್ರೇರಣೆಯಿಂದ ಮಧುಮೇಹ ತಜ್ಞ ಡಾ. ಕೆ.ಎನ್. ಪ್ರಸನ್ನಕುಮಾರ್, ದಂತ ವೈದ್ಯ ಡಾ. ಪಿ. ಲೋಕೇಶ್, ವೈದ್ಯೆ ಡಾ. ಮಮತಾ ಸೇರಿದಂತೆ ಅನೇಕರು ಈಗ ದೊಡ್ಡ ಅಕ್ಷರಗಳಲ್ಲಿ ಪ್ರಿಸ್ಕ್ರಿಪ್ಷನ್ ಬರೆಯುತ್ತಿದ್ದಾರೆ.
ರ‍್ಕಾಮೈನ್ (Rcamine) ಮತ್ತು ರ‍್ಟಾಮೈನ್ (Rtamane) ಎಂಬಂತೆ ಕೆಲವು ಔಷಧಿಗಳ ಹೆಸರುಗಳು ಸಾಮಾನ್ಯ ಕೈಬರಹದಲ್ಲಿ ಬಹುತೇಕ ಒಂದೇ ರೀತಿಯಾಗಿ ಕಾಣಿಸಿಕೊಳ್ಳುವುದರಿಂದ, ಔಷಧ ಮಾರಾಟಗಾರರಲ್ಲಿ ಗೊಂದಲ ಉಂಟಾಗುವ ಸಂದರ್ಭಗಳು ಎದುರಾಗುತ್ತವೆ. ಇದರಿಂದ ಕೆಲವೊಮ್ಮೆ ರೋಗಿಗಳ ಜೀವದ ಹಿತಕ್ಕೂ ಧಕ್ಕೆಯಾಗಬಹುದು. ಈ ಹಿನ್ನೆಲೆಯಲ್ಲಿ ವೈದ್ಯರ ಕೈಬರಹ ಸುಧಾರಣೆ ಅತ್ಯವಶ್ಯಕವೆಂದು ಪರಿಗಣಿಸಿ, ಡಾ. ಶಾಂತಗಿರಿ ಕೈಬರಹ ಅಭಿಯಾನವನ್ನು ಆರಂಭಿಸಿದರು.
ಪ್ರಸ್ತುತ ಅವರು ಬಾಣಸವಾಡಿಯಲ್ಲಿ ‘ಶಾಂತಗಿರಿ ಹೆಲ್ತ್‌ಕೇರ್’ ಎಂಬ ಹೆಸರಿನಲ್ಲಿ ತಮ್ಮದೇ ಆಸ್ಪತ್ರೆ ನಡೆಸುತ್ತಿದ್ದಾರೆ. ಗದಗದ ಡಿ.ಜಿ. ಮೇಲ್ಮಾಳಗಿ ಆಯುರ್ವೇದ ಕಾಲೇಜಿನಲ್ಲಿ ಅಧ್ಯಯನ ಪೂರ್ಣಗೊಳಿಸಿದ ನಂತರ, 2003ರಲ್ಲಿ ಬೆಂಗಳೂರಿಗೆ ತೆರಳಿ ಎಂ.ಎಸ್. ರಾಮಯ್ಯ ಸ್ಮಾರಕ ಆಸ್ಪತ್ರೆ, ಲೋಖಂಡೆ ಆಸ್ಪತ್ರೆ ಹಾಗೂ ಇತರ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
ಇಂದು ತಮ್ಮ ಕೈಬರಹ ಅಭಿಯಾನದ ಮೂಲಕ ಗದಗ ಜಿಲ್ಲೆಯಷ್ಟೇ ಅಲ್ಲ, ಸಂಪೂರ್ಣ ಕರ್ನಾಟಕಕ್ಕೆ ಮಾದರಿಯಾಗಿರುವ ಡಾ. ಶಾಂತಗಿರಿ, ಈ ಅಭಿಯಾನವನ್ನು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯುವ ಕನಸನ್ನೂ ಹೊಂದಿದ್ದಾರೆ.