ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಶ್ರೀ ಜಗದ್ಗುರು ಅನ್ನದಾನೀಶ್ವರ ವಿದ್ಯಾ ಸಮಿತಿಯ ಶತಮಾನೋತ್ಸವ ಸಂಭ್ರಮ ಇದೇ ಜನವರಿ 17 ಹಾಗೂ 18ರಂದು ವಿಜೃಂಭಣೆಯಿಂದ ಜರುಗಲಿದ್ದು, ಈ ಐತಿಹಾಸಿಕ ಸಂಭ್ರಮದ ಪೂರ್ವಭಾವಿಯಾಗಿ ಶತಮಾನೋತ್ಸವದ ಸ್ಮರಣಾರ್ಥವಾಗಿ ನಿರ್ಮಿಸಲಾದ ನೂತನ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ಲಿಂಗೈಕ್ಯ ವೆಂಕಟಾಪುರ ಅಜ್ಜನವರ ಶಿಲಾಮೂರ್ತಿಯ ಭವ್ಯ ಮೆರವಣಿಗೆ ಹಾಗೂ ಸಾಮಾಜಿಕ ಜಾಗೃತಿ ಜಾಥಾವನ್ನು ಭಾನುವಾರ ಹಮ್ಮಿಕೊಳ್ಳಲಾಗಿತ್ತು.
🖋ವರದಿ: ಮಹಲಿಂಗೇಶ ಹಿರೇಮಠ.ಗದಗ
ಈ ಜಾಗೃತಿ ಜಾಥಾಗೆ ಶ್ರೀ ಮನಿಪ್ರ ಜ. ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಚಾಲನೆ ನೀಡಿದರು. ಅವರ ಮಾರ್ಗದರ್ಶನದಲ್ಲಿ ಹಾಗೂ ಉತ್ತರಾಧಿಕಾರಿಗಳಾದ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಜಿಗಳ ನೇತೃತ್ವದಲ್ಲಿ ನಡೆದ ಈ ಜಾಥಾ ಶಿಸ್ತುಬದ್ಧವಾಗಿ ಹಾಗೂ ಅತ್ಯಂತ ಅರ್ಥಪೂರ್ಣವಾಗಿ ನಡೆಯಿತು.
ಜಾಥಾದಲ್ಲಿ ಅನ್ನದಾನೀಶ್ವರ ವಿದ್ಯಾ ಸಂಸ್ಥೆಯ ಎಲ್ಲ ಶಾಲೆಗಳ ವಿದ್ಯಾರ್ಥಿಗಳು ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಂಡು ಶತಮಾನದ ಸಾಮಾಜಿಕ ನಡಿಗೆಯ ಭಾಗವಾಗಿ ಹೆಜ್ಜೆ ಹಾಕಿದರು. ವಿದ್ಯಾರ್ಥಿಗಳು ಸಂಸ್ಕೃತ ಭಾಷೆಯ ಮಹತ್ವ, ಸಮಾನತೆ, ಶಿಕ್ಷಣದ ಅಗತ್ಯತೆ, ಭಾರತೀಯ ಸಂವಿಧಾನ ಮತ್ತು ನಾಗರಿಕ ಕರ್ತವ್ಯನಿಷ್ಠೆ, ಆರೋಗ್ಯ ಜಾಗೃತಿ, ಮಾನವ ಹಕ್ಕುಗಳು, ಮಹಿಳಾ ಸುರಕ್ಷತೆ, ಪರಿಸರ ಸಂರಕ್ಷಣೆ, ಮಣ್ಣಿನ ಸಂರಕ್ಷಣೆ, ರೈತಮಿತ್ರ ಚಿಂತನೆ, ನೀರಿನ ಸಂರಕ್ಷಣೆ ಹಾಗೂ ಭಾರತದ ಸಂಸ್ಕೃತಿ ಮತ್ತು ಮೌಲ್ಯಗಳು ಕುರಿತ ಸಂದೇಶಗಳನ್ನು ಸಾರುವ ಜಾಗೃತಿ ಬ್ಯಾನರ್‌ಗಳು ಮತ್ತು ಪೋಸ್ಟರ್‌ಗಳನ್ನು ಪ್ರದರ್ಶಿಸಿದರು.
“ಸಾಮಾಜಿಕ ನಡಿಗೆ – ಶತಮಾನದ ಕಡೆಗೆ” ಎಂಬ ಘೋಷಣೆಯೊಂದಿಗೆ ಜಾಥಾ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸಾರ್ವಜನಿಕರಲ್ಲಿ ಸಾಮಾಜಿಕ ಅರಿವು ಮೂಡಿಸಿತು. ಜಾಥಾದ ಶಿಸ್ತು, ವಿದ್ಯಾರ್ಥಿಗಳ ಉತ್ಸಾಹವೂ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು.
ಈ ಜಾಥಾದಲ್ಲಿ ಸಂಸ್ಥೆಯ NCC ಘಟಕ, ಸೇವಾದಳ, ಸ್ಕೌಟ್ ಮತ್ತು ಗೈಡ್ಸ್ ಹಾಗೂ ಶ್ರೀಮಠದ ಅಕ್ಕನಬಳಗ ಸೇರಿದಂತೆ ವಿವಿಧ ಸೇವಾ ಘಟಕಗಳು ಸಕ್ರಿಯವಾಗಿ ಭಾಗವಹಿಸಿ ಕಾರ್ಯಕ್ರಮಕ್ಕೆ ವೈಶಿಷ್ಟ್ಯತೆ ನೀಡಿದವು.
ಶ್ರೀಮಠದಿಂದ ಆರಂಭಗೊಂಡ ಜಾಥಾ, ಸಿದ್ದಪ್ಪ ಕೊಂಬಳಿ ವೃತ್ತ, ಕಿತ್ತೂರ ಚೆನ್ನಮ್ಮ ವೃತ್ತ, ಕೊಪ್ಪಳ ವೃತ್ತ, ಬೃಂದಾವನ ವೃತ್ತ, ಕನ್ನಿಕಾಪರಮೇಶ್ವರಿ ವೃತ್ತ, ಅಂಬಾಭವಾನಿ ದೇವಸ್ಥಾನ ರಸ್ತೆ, ಕೇಂದ್ರ ಬಸ್ ನಿಲ್ದಾಣ ಸೇರಿದಂತೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಅನ್ನದಾನೀಶ್ವರ ಮೈದಾನಕ್ಕೆ ಆಗಮಿಸಿ ಸಂಪನ್ನಗೊಂಡಿತು.
ಕಾರ್ಯಕ್ರಮದಲ್ಲಿ ಹಿರೇಮಲ್ಲನಕೇರಿ, ಕುಕನೂರು, ಹೊಳಲು, ಗುಡ್ಡದ ಆನ್ವೇರಿ ಸೇರಿದಂತೆ ವಿವಿಧ ಮಠಾಧೀಶರು ಪಾಲ್ಗೊಂಡಿದ್ದು, ಜೊತೆಗೆ ಅನ್ನದಾನೀಶ್ವರ ವಿದ್ಯಾ ಸಂಸ್ಥೆಯ ಎಲ್ಲಾ ಆಡಳಿತ ಮಂಡಳಿ ಸದಸ್ಯರು, ಪ್ರಾಂಶುಪಾಲರು, ಶಿಕ್ಷಕ ವರ್ಗ ಹಾಗೂ ಸಿಬ್ಬಂದಿ ಹಾಗೂ ಶ್ರೀಮಠದ ಭಕ್ತಸಮೂಹ ಹಾಜರಿದ್ದು ಜಾಥಾಕ್ಕೆ ಶೋಭೆ ಹೆಚ್ಚಿಸಿದರು.
ಒಟ್ಟಾರೆ, ಅನ್ನದಾನೀಶ್ವರ ವಿದ್ಯಾ ಸಮಿತಿಯ ಶತಮಾನೋತ್ಸವದ ಸಂಭ್ರಮಕ್ಕೆ ಮುನ್ನುಡಿಯಾದ ಈ ಸಾಮಾಜಿಕ ಜಾಗೃತಿ ಜಾಥಾ ಶಿಕ್ಷಣದ ಜೊತೆಗೆ ಮೌಲ್ಯಾಧಾರಿತ ಸಮಾಜ ನಿರ್ಮಾಣದ ಸಂಕಲ್ಪವನ್ನು ಮತ್ತೊಮ್ಮೆ ಪ್ರತಿಪಾದಿಸಿತು.
