ಗದಗ: ಗದಗ ಜಿಲ್ಲಾ ಪೊಲೀಸ್ ಇಲಾಖೆಯ ಭರ್ಜರಿ ಕಾರ್ಯಾಚರಣೆಯಿಂದಾಗಿ ಕಳೆದ ಒಂದು ವರ್ಷದ ಅವಧಿಯಲ್ಲಿ (ಆಗಸ್ಟ್ 1, 2024ರಿಂದ ಜುಲೈ 31, 2025ರವರೆಗೆ) ಅನೇಕ ಸ್ವತ್ತಿನ ಅಪರಾಧ ಪ್ರಕರಣಗಳು, ಮೋಸ, ವಂಚನೆ ಹಾಗೂ ಕಳ್ಳತನ ಪ್ರಕರಣಗಳನ್ನು ಪತ್ತೆ ಹಚ್ಚಿ ಅಪಾರ ಮೌಲ್ಯದ ವಸ್ತುಗಳನ್ನ ವಶಪಡಿಸಿಕೊಳ್ಳಲಾಗಿದೆ.
ಈ ಹಿನ್ನೆಲೆ ಇಂದು ಸಂಭಾಪುರ ರಸ್ತೆಯಲ್ಲಿರುವ ಪೊಲೀಸ್ ಭವನದಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕ ರೋಹನ್ ಜಗದೀಶ್ ಅವರ ನೇತೃತ್ವದಲ್ಲಿ ಪತ್ತೆಯಾದ ನಗದು ಮತ್ತು ಆಭರಣಗಳನ್ನು ಮೂಲ ವಾರಸುದಾರರಿಗೆ ಹಸ್ತಾಂತರಿಸಲಾಯಿತು.
ಜಿಲ್ಲಾ ಪೊಲೀಸ್ ಅಧೀಕ್ಷಕ ರೋಹನ್ ಜಗದೀಶ್ ಅವರು ಈ ಸಂದರ್ಭದಲ್ಲಿ ಮಾಹಿತಿ ನೀಡಿ, ಕಳೆದ ಒಂದು ವರ್ಷದಲ್ಲಿ ಜಿಲ್ಲೆಯಾದ್ಯಂತ ಒಟ್ಟು 55 ಕಳ್ಳತನ ಪ್ರಕರಣಗಳು ದಾಖಲಾಗಿದ್ದು, ಅವುಗಳಲ್ಲಿ 27 ಪ್ರಕರಣಗಳನ್ನು ಪತ್ತೆ ಹಚ್ಚಿ 33 ಆರೋಪಿಗಳನ್ನು ಬಂಧಿಸಲಾಗಿದೆ ಎಂದರು. ಬಂಧಿತರಿಂದ ₹42 ಲಕ್ಷಕ್ಕೂ ಅಧಿಕ ಮೌಲ್ಯದ ಬಂಗಾರದ ಆಭರಣ ಹಾಗೂ ₹5 ಲಕ್ಷಕ್ಕೂ ಅಧಿಕ ಬೆಳ್ಳಿ ಆಭರಣಗಳನ್ನ ವಶಪಡಿಸಿಕೊಳ್ಳಲಾಗಿದೆ. ಜೊತೆಗೆ ₹16 ಲಕ್ಷಕ್ಕೂ ಅಧಿಕ ನಗದು ಕಳ್ಳತನ ಪ್ರಕರಣದಲ್ಲಿ ₹2,74,900 ಮೊತ್ತವನ್ನು ಪತ್ತೆಹಚ್ಚಲಾಗಿದೆ ಎಂದು ತಿಳಿಸಿದರು.

ಅದೇ ರೀತಿ, 49 ವಾಹನ ಕಳ್ಳತನ ಪ್ರಕರಣಗಳು ದಾಖಲಾಗಿದ್ದು, ಅದರಲ್ಲಿ 25 ವಾಹನಗಳನ್ನು ಪತ್ತೆ ಹಚ್ಚಿ 35 ಆರೋಪಿಗಳನ್ನು ಬಂಧಿಸಲಾಗಿದೆ. ಮೋಸ ಮತ್ತು ವಂಚನೆಯ 21 ಪ್ರಕರಣಗಳಲ್ಲಿ 9 ಪ್ರಕರಣಗಳನ್ನು ಪತ್ತೆ ಹಚ್ಚಿ 27 ಆರೋಪಿಗಳನ್ನು ಬಂಧಿಸಿದ್ದು,ಒಟ್ಟು ₹13,90,345 ಮೊತ್ತವನ್ನು ವಶಪಡಿಸಿಕೊಂಡಿದ್ದೇವೆ ಎಂದು ಹೇಳಿದರು.
ಜಿಲ್ಲೆಯಾದ್ಯಂತ 1,137 ಮೊಬೈಲ್ ಕಳ್ಳತನ ಪ್ರಕರಣಗಳು ದಾಖಲಾಗಿದ್ದು, ಅದರಲ್ಲಿ ₹41,55,000 ಮೌಲ್ಯದ 277 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕರು ವಿವರಿಸಿದರು.
“ಕಳೆದ ಒಂದು ವರ್ಷದಲ್ಲಿ ಕಳ್ಳತನ, ಸುಲಿಗೆ, ವಂಚನೆ ಪ್ರಕರಣಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿ ಪತ್ತೆ ಹಚ್ಚಲಾಗಿದೆ. ಪ್ರಕರಣ ಪತ್ತೆ ಮಾಡಲು ಪೊಲೀಸರು ಸಾಕಷ್ಟು ಶ್ರಮ ವಹಿಸಿದ್ದು, ಶೇ.70% ಪ್ರಕರಣಗಳನ್ನು ಯಶಸ್ವಿಯಾಗಿ ಪತ್ತೆ ಹಚ್ಚಲಾಗಿದೆ. ವಿಶೇಷವಾಗಿ ಸುಲಿಗೆ ಪ್ರಕರಣಗಳನ್ನು ಶೇ.80% ರಷ್ಟು ಪತ್ತೆ ಹಚ್ಚಲು ಸಾಧ್ಯವಾಗಿದೆ. ಪೊಲೀಸ್ ಸಿಬ್ಬಂದಿಯ ಅಚ್ಚುಕಟ್ಟಾದ ಕಾರ್ಯದಿಂದ ಇದು ಸಾಧ್ಯವಾಗಿದೆ,” ಎಂದು ಅವರು ಪ್ರಶಂಸಿಸಿದರು.
ಕೋಟ್:
“ಬಡವರು ಜೀವನ ಪರ್ಯಂತ ದುಡಿದು ಸಂಪಾದಿಸಿದ ಆಭರಣಗಳನ್ನು ಕಿಡಿಗೆಡಿಗಳು ಕದ್ದಿರುತ್ತಾರೆ. ಇಂತಹ ಪ್ರಕರಣಗಳನ್ನು ಪತ್ತೆ ಹಚ್ಚಲು ನಮ್ಮ ಪೊಲೀಸರು ಹಗಲು-ರಾತ್ರಿ ಶ್ರಮಿಸಿದ್ದಾರೆ. ಆರೋಪಿಗಳು ಎಲ್ಲಿಗೆ ಹೋಗ್ತಾರೆ, ಯಾರ ಜೊತೆ ಸಂಬಂಧ ಇಟ್ಟುಕೊಂಡಿದ್ದಾರೆ ಎಂಬುದರ ಮಾಹಿತಿ ಸಂಗ್ರಹಿಸಿ, ಹೊರ ರಾಜ್ಯಗಳಿಂದಲೂ ಆರೋಪಿಗಳನ್ನು ಬಂಧಿಸಿ ತರಲಾಗಿದೆ. ಜೊತೆಗೆ ಬೇರೆ ಜಿಲ್ಲೆಯಲ್ಲಿ ಕಳ್ಳತನವಾದ ವಾಹನಗಳನ್ನು ವಶಪಡಿಸಿಕೊಂಡಿದ್ದೇವೆ,” ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ರೋಹನ್ ಜಗದೀಶ್ ಹೇಳಿದರು.