ಬೆಂಗಳೂರು: ಬ್ಯಾಂಕ್ ಲಾಕರ್‌ನಲ್ಲಿ (Bank Locker) ಇಟ್ಟಿದ್ದ 8 ಲಕ್ಷ ರೂಪಾಯಿ ಗೆದ್ದಲು ಹಿಡಿದು ನೋಟುಗಳೆಲ್ಲ ಪುಡಿಪುಡಿಯಾಗಿರುವ ಘಟನೆ ಮಂಗಳೂರಿನ (Mangaluru) ಕೋಟೆಕಾರ್‌ನಲ್ಲಿರುವ ಕೆನರಾ ಬ್ಯಾಂಕಿನಲ್ಲಿ ನಡೆದಿದೆ.
ಈ ಸಂಬಂಧ ಸಫಲ್ ಅನ್ನೋ ಗ್ರಾಹಕರೊಬ್ಬರು ಬೆಂಗಳೂರಿನ ಪ್ರಧಾನ ಕಚೇರಿಗೆ ದೂರು ನೀಡಿದ್ದಾರೆ.
ಸಫಲ್ ಮಂಗಳೂರಿನ ಕೋಟೆಕಾರ್‌ನಲ್ಲಿರುವ ಕೆನರಾ ಬ್ಯಾಂಕಿನಲ್ಲಿ 8 ಲಕ್ಷ ರೂ. ಇಟ್ಟಿದ್ದರು. 6 ತಿಂಗಳ ಬಳಿಕ ಔಷಧಿಗಾಗಿ ದುಡ್ಡು ತೆಗೆಯಲು ಬ್ಯಾಂಕ್ ಗೆ ಆಗಮಿಸಿ ಲಾಕರ್ ತೆರೆದಿದ್ದಾರೆ.ಬ್ಯಾಂಕ್ ನವರೇ ಖುದ್ದಾಗಿ ಲಾಕರ್ ಓಪನ್ ಮಾಡಿದ್ದಾರೆ. ಆದರೆ ಲಾಕರ್ ಓಪನ್ ಮಾಡಿದ ಬ್ಯಾಂಕ್ ಸಿಬ್ಬಂದಿ ಹಾಗೂ ಗ್ರಾಹಕ ಸಫಲ್ ಗೆ ಶಾಕ್ ಕಾದಿತ್ತು.

ದುಡ್ಡು ಇಟ್ಟಿದ್ದ ಲಾಕರ್ ಮಳೆನೀರಿನಲ್ಲಿ ನೆಂದ ಸ್ಥಿತಿಯಲ್ಲಿದ್ದರೆ, ಇತ್ತ ದುಡ್ಡು ಸಂಪೂರ್ಣವಾಗಿ ಕಪ್ಪಾಗಿ ಹುಡಿ ಹುಡಿಯಾಗಿ ಗೆದ್ದಲು ಹಿಡಿದು ಚೂರಾಗಿ ಬಿದ್ದಿದೆ. ಸಂಪೂರ್ಣ ಎಂಟು ಲಕ್ಷ ರೂ. ದುಡ್ಡು ಇದೇ ರೀತಿ ಆಗಿದೆ.
ಆರ್‌ಬಿಐ ನಿಯಮದ ಪ್ರಕಾರ ಪ್ರಕಾರ ದುಡ್ಡನ್ನು ಲಾಕರ್‌ನಲ್ಲಿ ಇಡುವಂತಿಲ್ಲ ಹೀಗಾಗಿ ಇದಕ್ಕೂ ನಮಗೂ ಸಂಬಂಧ ಇಲ್ಲ ಎಂದು ಬ್ಯಾಂಕ್‌ನವರು ಹೇಳಿದ್ದಾರೆ. ಹೀಗಾಗಿ ಸಫಲ್ ಕುಟುಂಬಸ್ಥರು ಬೆಂಗಳೂರಿಗೆ ಆಗಮಿಸಿ ಪ್ರಧಾನ ಕಚೇರಿಗೆ ದೂರು ನೀಡಿ, ಹಳೆಯ ಕಟ್ಟಡ ನಿರ್ವಹಣೆ ಕೊರತೆಯಿಂದ ಸಮಸ್ಯೆಯಾಗಿದೆ. ಹೀಗಾಗಿ ಸರಿಪಡಿಸಬೇಕು ಎಂದು ಮನವಿ ಮಾಡಿದ್ದಾರೆ.
ಲಾಕರ್‌ನಲ್ಲಿ ಹಣ ಇಡಬಾರದು ನಿಜ. ಆದರೆ ಬ್ಯಾಂಕ್‌ನಲ್ಲಿ ಹಣ ಇಟ್ಟರೆ ಸೇಫ್ ಎಂಬ ನಂಬಿಕೆಯಿದೆ. ಆದರೆ ನಿರ್ವಹಣೆ ಕೊರತೆಯಿಂದ ಈ ರೀತಿ ಸಮಸ್ಯೆಯಾದರೆ ಯಾರು ಹೊಣೆ ಎನ್ನುವುದೇ ಸದ್ಯದ ಪ್ರಶ್ನೆಯಾಗಿದೆ.