ಬಾಗಲಕೋಟೆ: ಸಂತೆ ನಡೆಯುತ್ತಿರೋ ವೇಳೆಯಲ್ಲಿ, ಹಾವು ಪ್ರತ್ಯಕ್ಷಗೊಂಡು ಆತಂಕ ಸೃಷ್ಠಿಸಿರೋ ಘಟನೆ ಬಾಗಲಕೋಟೆ ಜಿಲ್ಲೆಯ ಲೋಕಾಪುರ ಪಟ್ಟಣದಲ್ಲಿ ನಡೆದಿದೆ. ಪಟ್ಟಣದ ಬಸವೇಶ್ವರ ವೃತ್ತದ ಬಳಿ ಕೇರೆ ಹಾವು ಪ್ರತ್ಯಕ್ಷವಾಗಿದ್ದು, ಹಾವು ಕಂಡೊಡನೆ ಸ್ಥಳದಲ್ಲಿದ್ದವರೆಲ್ಲರೂ ಭಯಭೀತಗೊಂಡಿದ್ದಾರೆ.
ಆದರೆ ಇದೇ ವೇಳೆ, ಸ್ಥಳದಲ್ಲಿದ್ದ ಮಹಾಶಯನೊಬ್ಬ, ತಮ್ಮ ಬರಿಗೈಯಿಂದ ಹಾವು ಸೆರೆ ಹಿಡಿದು, ಅದನ್ನ ತನ್ನ ಕೊರಳಲ್ಲಿ ಸುತ್ತಿಕೊಂಡು ಮೊಬೈಲ್ ಕ್ಯಾಮಾರಾಗೆ ಪೋಸ್ ಕೊಟ್ಟಿದ್ದಾನೆ.
ಹೀಗೆ ಹಾವು ಸುತ್ತಿಕೊಂಡ ವ್ಯಕ್ತಿ ಹೆಸರು ಇಬ್ರಾಹಿಂ ಅತ್ತಾರ್ ಎನ್ನಲಾಗಿದ್ದು, ಮೊದಲೇ ಹಾವು ಎಂಟ್ರಿ ಕೊಟ್ಟಿದ್ದಕ್ಕೆ ಭಯಗೊಂಡಿದ್ದ ಜನರಿಗೆ, ಈ ವ್ಯಕ್ತಿ ಅದೇ ಹಾವನ್ನ ತನ್ನ ಕೊರಳಲ್ಲಿ ಧರಿಸಿಕೊಂಡು, ಜನರಿಗೆ ಡಬಲ್ ಶಾಕ್ ಕೊಟ್ಟಿದ್ದಾನೆ.
ಲೋಕಾಪುರ ಪಟ್ಟಣದಲ್ಲಿ ಪ್ರತಿನಿತ್ಯವೂ ಸಂತೆ ನಡೆಯುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುತ್ತಾರೆ. ಅದೃಷ್ಟವಶಾತ್ ಹಾವಿನಿಂದ ಯಾರಿಗೂ ಪ್ರಾಣಹಾನಿ ಆಗಿಲ್ಲ.
ನಂತರ ಕೊರಳಲ್ಲಿ ಹಾವು ಧರಿಸಿದ್ದ ವ್ಯಕ್ತಿ, ಅದನ್ನ ತನ್ನ ಕೈಚೀಲಕ್ಕೆ ಸೇರಿಸಿದ್ದಾನೆ. ಸದ್ಯ ಹಾವು ಹಿಡಿಯುವ ದೃಶ್ಯ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಕಷ್ಟು ವೈರಲ್ ಆಗಿದೆ.