ಗದಗ/ಮುಂಡರಗಿ:- ಮುಂಡರಗಿ ಪಟ್ಟಣದಲ್ಲಿ ಹಗಲು ಹೊತ್ತಿನಲ್ಲೇ ಮತ್ತೊಂದು ಮನೆ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದ್ದು, ಪಟ್ಟಣದ ಜನರಲ್ಲಿ ಆತಂಕ ಉಂಟುಮಾಡಿದೆ. ಈ ಬಾರಿ ದುಷ್ಕರ್ಮಿಗಳು ಬ್ಯಾಂಕ್ ವ್ಯವಸ್ಥಾಪಕರ ಮನೆಯನ್ನೇ ಟಾರ್ಗೆಟ್ ಮಾಡಿದ್ದು,ಮಟ ಮಟ ಮಧ್ಯಾಹ್ನದ ವೇಳೆಯಲ್ಲೇ ಮನೆಗೆ ನುಗ್ಗಿ ಹಣ, ಬಂಗಾರ ಹಾಗೂ ಬೆಳ್ಳಿ ವಸ್ತುಗಳನ್ನು ಕಳ್ಳತನ ಮಾಡಿರುವ ಘಟನೆ ನಡೆದಿದೆ.
🖋ವರದಿ: ಮಹಲಿಂಗೇಶ ಹಿರೇಮಠ.ಗದಗ
ಪಟ್ಟಣದ ಜನನೀಬೀಡ ಪ್ರದೇಶದಲ್ಲಿ ವಾಸವಿದ್ದ ಕೆನರಾ ಬ್ಯಾಂಕ್ನ ಮುಖ್ಯ ವ್ಯವಸ್ಥಾಪಕರಾದ ರಾಘವೇಂದ್ರಕುಮಾರ ಅವರ ಮನೆಯಲ್ಲಿ ಈ ಕಳ್ಳತನ ನಡೆದಿದೆ.
ಮಧ್ಯಾಹ್ನ ಸುಮಾರು 3.20 ರಿಂದ 4.40 ರೊಳಗಿನ ಸಮಯದಲ್ಲಿ ಘಟನೆ ನಡೆದಿರುವುದು ತಿಳಿದುಬಂದಿದೆ.
ಘಟನೆಯ ವೇಳೆಯಲ್ಲಿ ರಾಘವೇಂದ್ರಕುಮಾರ ಅವರು ಬ್ಯಾಂಕ್ ಕೆಲಸಕ್ಕೆ ತೆರಳಿದ್ದರೆ, ಅವರ ಪತ್ನಿ ಸ್ಥಳೀಯ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಈ ಹಿನ್ನೆಲೆಯಲ್ಲಿ ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಗಮನಿಸಿದ ದುಷ್ಕರ್ಮಿಗಳು ಪಕ್ಕಾ ಪ್ಲ್ಯಾನ್ ರೂಪಿಸಿ ಮನೆಯ ಬಾಗಿಲಿನ ಕೀಲಿಯನ್ನು ಮುರಿದು ಒಳನುಗ್ಗಿದ್ದಾರೆ.
ಮನೆಯಲ್ಲಿದ್ದ ಹಣ, ಬಂಗಾರ ಹಾಗೂ ಬೆಳ್ಳಿ ವಸ್ತುಗಳನ್ನು ಕದ್ದುಕೊಂಡು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಕೊಪ್ಪಳ ಪಟ್ಟಣಕ್ಕೆ ತೆರಳುವ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಜನನೀಬೀಡ ಪ್ರದೇಶದಲ್ಲೇ ಈ ಘಟನೆ ನಡೆದಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.
ಇತ್ತೀಚೆಗೆ ಪಟ್ಟಣದ ವಿದ್ಯಾನಗರ ಪ್ರದೇಶದಲ್ಲಿ ನಡೆದಿದ್ದ ಕಳ್ಳತನ ಪ್ರಕರಣ ಇನ್ನೂ ಮಾಸುವ ಮುನ್ನವೇ ಹಗಲು ಹೊತ್ತಿನಲ್ಲಿ ಈ ರೀತಿಯ ಮತ್ತೊಂದು ಘಟನೆ ನಡೆದಿರುವುದು ಜನರಲ್ಲಿ ಮತ್ತಷ್ಟು ಭಯ ಹುಟ್ಟಿಸಿದೆ.
ಬ್ಯಾಂಕ್ ವ್ಯವಸ್ಥಾಪಕರ ಮನೆಯಲ್ಲೇ ಕಳ್ಳತನ ನಡೆದಿರುವ ಸುದ್ದಿ ತಿಳಿದು ಪಟ್ಟಣದ ಜನತೆ ದಿಗಿಲು ವ್ಯಕ್ತಪಡಿಸಿದ್ದಾರೆ.ಸುದ್ದಿ ತಿಳಿಯುತ್ತಿದ್ದಂತೆ ಮುಂಡರಗಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣದ ತನಿಖೆಗಾಗಿ ಶ್ವಾನದಳ ಹಾಗೂ ಬೆರಳಚ್ಚು ತಜ್ಞರನ್ನೂ ಕರೆಸಿ ಪರಿಶೀಲನೆ ನಡೆಸಲಾಗಿದೆ.
ಮುಂಡರಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಕಳ್ಳರ ಪತ್ತೆಗಾಗಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
