ಗದಗ: ಚಿಕ್ಕಟ್ಟಿ ಸಮೂಹ ಶಿಕ್ಷಣ ಸಂಸ್ಥೆಗಳ ಅಧೀನದಲ್ಲಿನ ಚಿಕ್ಕಟ್ಟಿ ಪೂರ್ವ ಪ್ರಾಥಮಿಕ ಶಾಲೆಗಳ ವಾರ್ಷಿಕೋತ್ಸವವು ಭಾನುವಾರ ಅದ್ಧೂರಿಯಾಗಿ ನಡೆಯಿತು.
ಕಾರ್ಯಕ್ರಮಕ್ಕೆ ಗೌರವ ಅತಿಥಿಗಳಾಗಿ ಆಗಮಿಸಿದ್ದ ಹಿರಿಯ ವಕೀಲರಾದ ಶ್ರೀ ಸುಧೀರ ಘೋರ್ಪಡೆ ಅವರು ಮಾತನಾಡಿ, “ಇಲ್ಲಿರುವ ಮಹಾತ್ಮರ, ಸಾಧಕರ ಹಾಗೂ ಸಂತ–ಶರಣರ ವಾಣಿಗಳನ್ನು ಓದಿ, ಅವುಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ನೀವೂ ಸಹ ಸಾಧಕರಾಗಬೇಕು” ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಇಂದಿನ ಶಾಲಾ ವಾರ್ಷಿಕೋತ್ಸವದ ಸಂತಸದ ಸಂದರ್ಭದಲ್ಲಿ ನಿಮ್ಮ ಮಧ್ಯೆ ಹಾಜರಾಗಿರುವುದು ನನಗೆ ಅತ್ಯಂತ ಗೌರವದ ಸಂಗತಿ. ಈ ವೇದಿಕೆ ವಿದ್ಯಾರ್ಥಿಗಳ ಪ್ರತಿಭೆಯ ಪ್ರತಿಬಿಂಬವಾಗಿದೆ. ಈ ಶಾಲೆಯಲ್ಲಿ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಾಸಕ್ಕಾಗಿ ಶಿಸ್ತು, ಸಂಸ್ಕೃತಿ, ಸಂಸ್ಕಾರ ಮತ್ತು ಮೌಲ್ಯಗಳನ್ನು ಕಲಿಸಿಕೊಡಲಾಗುತ್ತಿದೆ. ಇಂತಹ ಕಾರ್ಯಕ್ರಮಗಳು ಮಕ್ಕಳಲ್ಲಿ ಆತ್ಮವಿಶ್ವಾಸ ಹಾಗೂ ಸೃಜನಶೀಲತೆಯನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಇಂದು ಪ್ರದರ್ಶಿಸಲಾದ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಶೈಕ್ಷಣಿಕ ಯಶಸ್ಸುಗಳು ಈ ಸಂಸ್ಥೆಯ ಶ್ರಮ ಮತ್ತು ಸಮರ್ಪಣೆಯನ್ನು ಸ್ಪಷ್ಟವಾಗಿ ತೋರಿಸುತ್ತವೆ. ಮಕ್ಕಳ ಸರ್ವತೋಮುಖ ಅಭಿವೃದ್ಧಿಗಾಗಿ ವಿಶಿಷ್ಟ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಶಿಕ್ಷಕರು ನಿರಂತರವಾಗಿ ಶ್ರಮಿಸುತ್ತಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರೊ. ಎಸ್. ವಾಯ್. ಚಿಕ್ಕಟ್ಟಿ ಅವರು ಮಾತನಾಡಿ, ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ವಿವಿಧ ಸ್ಪರ್ಧೆಗಳ ಮೂಲಕ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿರುವುದು ಶಾಲೆಯ ಶೈಕ್ಷಣಿಕ ಮಟ್ಟ ಹಾಗೂ ಶಿಕ್ಷಕಿಯರ ಪರಿಶ್ರಮದ ಸಾಕ್ಷಿಯಾಗಿದೆ. ವಿದ್ಯಾರ್ಥಿಗಳ ಯಶಸ್ಸಿನ ಹಿಂದೆ ಶಿಕ್ಷಕಿಯರ ಮಾರ್ಗದರ್ಶನ ಮತ್ತು ಪಾಲಕರ ಬೆಂಬಲ ಮಹತ್ವದ ಪಾತ್ರ ವಹಿಸಿದೆ ಎಂದು ಹೇಳಿದರು.
ಮುಂದುವರೆದು ಮಾತನಾಡಿದ ಅವರು, ಶಿಕ್ಷಣವೆಂದರೆ ಕೇವಲ ಪಠ್ಯಪುಸ್ತಕಗಳ ಜ್ಞಾನವಲ್ಲ; ಅದು ವ್ಯಕ್ತಿತ್ವ ವಿಕಾಸ, ಶಿಸ್ತಿನ ಅಭ್ಯಾಸ ಮತ್ತು ಮೌಲ್ಯಗಳ ಬೆಳವಣಿಗೆಯ ಮಾರ್ಗವಾಗಿದೆ. ವಿದ್ಯಾರ್ಥಿಗಳ ಕನಸುಗಳು ದೊಡ್ಡದಾಗಿರಲಿ, ಪರಿಶ್ರಮದಿಂದ ಮುಂದೆ ಸಾಗಲಿ. ನೀವು ಮುಂದಿನ ದೇಶದ ಭವಿಷ್ಯ; ನಿಮ್ಮ ಸಾಧನೆಗಳು ಸಮಾಜಕ್ಕೆ ದಾರಿದೀಪವಾಗಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಗೌರವ ಅತಿಥಿಗಳಾಗಿ ಆಗಮಿಸಿದ್ದ ಶ್ರೀ ಸುಧೀರ ಘೋರ್ಪಡೆ ಹಾಗೂ ಅವರ ಶ್ರೀಮತಿ ಕೋಕಿಲ ಎಸ್. ಘೋರ್ಪಡೆ ದಂಪತಿಗಳಿಗೆ ಹಾಗೂ ಚಿಕ್ಕಟ್ಟಿ ಗುರುಗಳ ಸಹೋದರನ ಮಗನಾದ, ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸುಭೇದಾರ್ ಶ್ರೀ ಭೀಮಪ್ಪ ವೈ. ಚಿಕ್ಕಟ್ಟಿ ಮತ್ತು ಅವರ ಶ್ರೀಮತಿ ಅಶ್ವಿನಿ ಬಿ. ಚಿಕ್ಕಟ್ಟಿ ದಂಪತಿಗಳಿಗೆ ಚಿಕ್ಕಟ್ಟಿ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಚಿಕ್ಕಟ್ಟಿ ಗುರುಗಳ ಸಹೋದರರಾದ ಶ್ರೀ ಯಲಗೊಂಡ ವೈ. ಚಿಕ್ಕಟ್ಟಿ, ಪ್ರಾಚಾರ್ಯರಾದ ಶ್ರೀ ವಿನಯ್ ಎಸ್. ಚಿಕ್ಕಟ್ಟಿ, ಪ್ರಾಚಾರ್ಯರಾದ ಡಾ. ಬಿಪಿನ್ ಎಸ್. ಚಿಕ್ಕಟ್ಟಿ, ಪ್ರಾಚಾರ್ಯರಾದ ಶ್ರೀಮತಿ ದೀಪಾ ಬಿ. ಚಿಕ್ಕಟ್ಟಿ, ಉಪಪ್ರಾಚಾರ್ಯರಾದ ಶ್ರೀಮತಿ ಶೋಭಾ ಎಸ್. ಸ್ಥಾವರಮಠ, ಮುಖ್ಯೋಪಾಧ್ಯಾಯನಿಯರಾದ ಶ್ರೀಮತಿ ಶೋಭಾ ಜೆ. ಭಟ್, ಶಿಕ್ಷಕಿಯರಾದ ಶ್ರೀಮತಿ ಪುಷ್ಪಲತಾ ಎಂ. ಬೆಲೇರಿ, ಶ್ರೀಮತಿ ರಿಯಾನ ಮುಲ್ಲಾ, ಶ್ರೀಮತಿ ಖೌಸರಬಾನು ಎಸ್. ಮಜ್ಜಗಿ, ಬೋಧಕ–ಬೋಧಕೇತರ ಸಿಬ್ಬಂದಿಯವರು ಹಾಗೂ ಪಾಲಕ–ಪೋಷಕ ವೃಂದದವರು ಉಪಸ್ಥಿತರಿದ್ದರು.
ಗೌರವ ಅತಿಥಿಗಳಾದ ಶ್ರೀ ಸುಧೀರ ಘೋರ್ಪಡೆ ಹಾಗೂ ಶ್ರೀಮತಿ ಕೋಕಿಲ ಎಸ್. ಘೋರ್ಪಡೆಯವರ ಕಿರು ಪರಿಚಯವನ್ನು ಶಿಕ್ಷಕಿಯರಾದ ಶ್ರೀಮತಿ ಸುಮನ್ ಆರ್. ಚಂದ್ರ ಹಾಗೂ ಶ್ರೀಮತಿ ದೀಪಾ ಉಗಲಾಟ ಅವರು ಮಾಡಿಕೊಟ್ಟರು.
ಕಾರ್ಯಕ್ರಮದ ಆರಂಭದಲ್ಲಿ ಮಕ್ಕಳ ನೃತ್ಯಗೀತೆ ಹಾಗೂ ಶಿಕ್ಷಕಿಯರ ನೃತ್ಯಗೀತೆಯಾದ ಶ್ರೀ ಗಣೇಶನ ಸ್ತುತಿಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಶಿಕ್ಷಕಿ ಶ್ರೀಮತಿ ಭಾರ್ಗವಿ ಜೋಗಿನ ಅವರು ಸ್ವಾಗತಿಸಿದರೆ, ಶಿಕ್ಷಕಿ ಕುಮಾರಿ ಶಾಹಿನ್ ಬೆಲ್ಪೇರ್ ಅವರು ವಂದನಾರ್ಪಣೆ ಸಲ್ಲಿಸಿದರು. ವಿನಯ್ ಚಿಕ್ಕಟ್ಟಿ ಐ.ಸಿ.ಎಸ್.ಇ ಶಾಲೆಯ ಎಂಟನೇ ತರಗತಿ ವಿದ್ಯಾರ್ಥಿನಿ ನಿವೇದಿತಾ ಎಸ್. ಪವಾಡಿಗೌಡ್ರು ಕಾರ್ಯಕ್ರಮವನ್ನು ನಿರೂಪಿಸಿದರು.
ವಿನಯ್ ಚಿಕ್ಕಟ್ಟಿ ಐ.ಸಿ.ಎಸ್.ಇ ಶಾಲೆಯ ಎಂಟನೇ ತರಗತಿಯ ವಿದ್ಯಾರ್ಥಿನಿಯರಾದ ಶ್ರಾವಣಿ ಬಿ. ಗುಗ್ಗರಿ, ವೈಷ್ಣವಿ ಎಂ. ದಾವಣಗೇರೆ, ತೇಜಶ್ವಿನಿ ವಾಯ್. ಮುಂಡರಗಿ ಹಾಗೂ ಮುಕ್ತಾ ಎಂ. ಸುಣಗಾರ ಅವರು ಮಕ್ಕಳ ಸಾಂಸ್ಕೃತಿಕ ನೃತ್ಯ ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದರು.
ಮಕ್ಕಳ ಮನಮುಟ್ಟುವ ನೃತ್ಯ ಪ್ರದರ್ಶನಗಳು ಪಾಲಕ–ಪೋಷಕರನ್ನೂ ಎದ್ದು ಕುಣಿಯುವಂತೆ ಮಾಡಿದ್ದು, ಸಮಾರಂಭಕ್ಕೆ ವಿಶೇಷ ಮೆರುಗು ನೀಡಿತು.
