ಗದಗ: ನಗರದ ಲಿಟಲ್ ಮಿಲೇನಿಯಮ್ ಬಿಪಿನ್ ಚಿಕ್ಕಟ್ಟಿ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ವಾರ್ಷಿಕ ಕ್ರೀಡಾಕೂಟಗಳು ವಿಜೃಂಭಣೆಯಿಂದ ನೆರವೇರಿದವು. ಕಾರ್ಯಕ್ರಮವನ್ನು ಪ್ರಾಚಾರ್ಯರಾದ ಪ್ರೊ. ಮೃತ್ಯುಂಜಯ ಉಮಾಪತಿ ಹಿರೇಮಠ ಅವರು ಉದ್ಘಾಟಿಸಿದರು.
ಉದ್ಘಾಟನಾ ಭಾಷಣದಲ್ಲಿ ಅವರು, “ಕ್ರೀಡೆ ದೇಹದ ಶಕ್ತಿಯನ್ನು ಮಾತ್ರವಲ್ಲ; ಮನಸ್ಸಿನ ಆತ್ಮಸ್ಥೈರ್ಯವನ್ನು ಹೆಚ್ಚಿಸುತ್ತದೆ” ಎಂದು ತಿಳಿಸಿದರು. ಕ್ರೀಡಾಕೂಟಗಳು ಮಕ್ಕಳಲ್ಲಿ ಅಪಾರ ಆಸಕ್ತಿಯನ್ನು ಮೂಡಿಸುತ್ತವೆ. ಆ ಆಸಕ್ತಿಯನ್ನು ಇಮ್ಮಡಿಗೊಳಿಸಲು ಆಟೋಟಗಳನ್ನು ಆಯೋಜಿಸಿರುವುದು ಶ್ಲಾಘನೀಯ ಎಂದು ಹೇಳಿದರು. ಶಿಕ್ಷಣದೊಂದಿಗೆ ಆಟೋಟಗಳಿಗೂ ಸಮಾನ ಮಹತ್ವ ನೀಡುತ್ತಿರುವುದು ಈ ಕಾರ್ಯಕ್ರಮದಿಂದ ಸ್ಪಷ್ಟವಾಗುತ್ತದೆ ಎಂದರು.
‘ನುಡಿಗಿಂತ ನಡೆ ಮುಖ್ಯ’ ಎಂಬ ನುಡಿಯಂತೆ ಪ್ರೊ. ಎಸ್. ವಾಯ್. ಚಿಕ್ಕಟ್ಟಿಯವರು ಮಾತನಾಡುವುದಕ್ಕಿಂತ ಮಾಡಿ ತೋರಿಸುವ ವ್ಯಕ್ತಿತ್ವ ಹೊಂದಿದ್ದಾರೆ. ಮಕ್ಕಳ ವ್ಯಕ್ತಿತ್ವ ವಿಕಾಸಕ್ಕಾಗಿ ಅವರು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದು, ಅವರ ಸಾಧನೆಗಳು ಅನನ್ಯ ಹಾಗೂ ಅನುಕರಣೀಯವಾಗಿವೆ ಎಂದು ಪ್ರಶಂಸಿಸಿದರು. ತಾವು ಪ್ರಾಚಾರ್ಯರಾಗಿ ಕಾರ್ಯನಿರ್ವಹಿಸಿದ ಬಳಿಕ ನಿವೃತ್ತಿಯ ನಂತರ ಅವಕಾಶ ದೊರೆತರೆ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸುವ ಆಸೆಯಿದೆ. ಶಿಕ್ಷಣದ ಬುನಾದಿ ಪ್ರಾಥಮಿಕ ಹಂತದಲ್ಲೇ ನಿರ್ಮಾಣವಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಕ್ರೀಡಾಕೂಟಗಳು ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವ ಮತ್ತು ನಾಯಕತ್ವ ಗುಣಗಳನ್ನು ಬೆಳೆಸುತ್ತವೆ. ಆದ್ದರಿಂದ ಪಾಠಗಳ ಜೊತೆಗೆ ಆಟಗಳಿಗೂ ಸಮಾನ ಅವಕಾಶ ಕಲ್ಪಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಪ್ರೊ. ಎಸ್. ವಾಯ್. ಚಿಕ್ಕಟ್ಟಿಯವರು ಮಾತನಾಡಿ, ಕ್ರೀಡಾಕೂಟಗಳ ಮೂಲಕ ವಿದ್ಯಾರ್ಥಿಗಳು ಗೆಲುವಿನ ಉತ್ಸಾಹವನ್ನೂ ಸೋಲಿನ ಪಾಠವನ್ನೂ ಸಮಾನವಾಗಿ ಸ್ವೀಕರಿಸಲು ಕಲಿಯುತ್ತಾರೆ ಎಂದರು. ಗೆಲುವಿನಲ್ಲಿ ವಿನಯ ಮತ್ತು ಸೋಲಿನಲ್ಲಿ ಧೈರ್ಯ ಇವೇ ಕ್ರೀಡಾ ಮನೋಭಾವದ ನಿಜವಾದ ಅರ್ಥ ಎಂದು ಹೇಳಿದರು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಓದಿನ ಜೊತೆಗೆ ಕ್ರೀಡೆಯೂ ಪ್ರಮುಖ ಪಾತ್ರ ವಹಿಸುತ್ತಿದೆ. ಆರೋಗ್ಯವಂತ ದೇಹದಲ್ಲೇ ಆರೋಗ್ಯವಂತ ಮನಸ್ಸು ವಾಸಿಸುವುದು. ತರಗತಿಯಲ್ಲಿ ಜ್ಞಾನವನ್ನು ಗಳಿಸುವ ಮಕ್ಕಳು ಮೈದಾನದಲ್ಲಿ ಜೀವನದ ಮೌಲ್ಯಗಳನ್ನು ಕಲಿಯುತ್ತಾರೆ. ಆಟೋಟಗಳ ಮೂಲಕ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ವಿದ್ಯಾರ್ಥಿಗಳಿಗೆ ಸೂಕ್ತ ವೇದಿಕೆ ಕಲ್ಪಿಸಲಾಗಿದೆ. ಸಮಭಾವದಿಂದ ಆಟವಾಡಿ ಶ್ರೇಷ್ಠತೆಯನ್ನು ತೋರಿಸಬೇಕು ಎಂದು ಕರೆ ನೀಡಿದರು.
ಉದ್ಘಾಟಕರಾಗಿ ಆಗಮಿಸಿದ ಪ್ರಾಚಾರ್ಯರಾದ ಪ್ರೊ. ಮೃತ್ಯುಂಜಯ ಉಮಾಪತಿ ಹಿರೇಮಠ ಅವರ ಸಾಧನಾ ಹಾದಿಯ ಕಿರುಪರಿಚಯವನ್ನು ಉಪಮುಖ್ಯೋಪಾಧ್ಯಾಯನಿಯರಾದ ಶ್ರೀಮತಿ ರಿಯಾನಾ ಮುಲ್ಲಾ ಅವರು ವಾಚಿಸಿದರು.
ಈ ಸಂದರ್ಭದಲ್ಲಿ ಪ್ರಾಚಾರ್ಯರಾದ ಪ್ರೊ. ಮೃತ್ಯುಂಜಯ ಉಮಾಪತಿ ಹಿರೇಮಠ ಹಾಗೂ ಶ್ರೀಮತಿ ಸುಮಾ ಮೃತ್ಯುಂಜಯ ಹಿರೇಮಠ ದಂಪತಿಗಳನ್ನು ಚಿಕ್ಕಟ್ಟಿ ಶಿಕ್ಷಣ ಸಮೂಹ ಸಂಸ್ಥೆಗಳ ವತಿಯಿಂದ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರಾಚಾರ್ಯರಾದ ಡಾ|| ಬಿಪಿನ್ ಎಸ್. ಚಿಕ್ಕಟ್ಟಿ, ಪ್ರಾಚಾರ್ಯರಾದ ಶ್ರೀಮತಿ ದೀಪಾ ಬಿ. ಚಿಕ್ಕಟ್ಟಿ, ಉಪಪ್ರಾಚಾರ್ಯರಾದ ಶ್ರೀಮತಿ ಶೋಭಾ ಸ್ಥಾವರಮಠ, ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ಪಾಲಕ-ಪೋಷಕ ವೃಂದದವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಸ್ವಾಗತವನ್ನು ಶ್ರೀಮತಿ ಅಕ್ಷತಾ ಎಸ್. ಖೋಡೆ ಅವರು ನೆರವೇರಿಸಿದರು. ಕುಮಾರಿ ಶ್ರೇಯಾ ಆರ್. ಡೊಳ್ಳಿನ ನಿರೂಪಣೆಯೊಂದಿಗೆ ವಂದನಾರ್ಪಣೆ ಗೈಯಲಾಯಿತು. ಕ್ರೀಡಾಕೂಟದಲ್ಲಿ ಮಕ್ಕಳು ಮಾತ್ರವಲ್ಲ, ಪಾಲಕರೂ ಸಹ ಉತ್ಸಾಹದಿಂದ ಆಟೋಟಗಳಲ್ಲಿ ಭಾಗವಹಿಸಿ ಸಂಭ್ರಮಿಸಿದರು.
