ಒಂದು ಕಡೆ ಸರ್ಕಾರದ ಯೋಜನೆಗಳು “ನಿರ್ದಿಷ್ಟ ಕಾಲಮಿತಿಯಲ್ಲಿ ಫಲಾನುಭವಿಗಳಿಗೆ ತಲುಪಬೇಕು” ಎಂದು ಭಾಷಣ ಬಿಗಿಯುವ ಅಧಿಕಾರಿಗಳು, ಮತ್ತೊಂದೆಡೆ ತಾವೇ ಕರೆದ ಸಭೆಗೆ ಬರಲು ಗಂಟೆಗಟ್ಟಲೆ ವಿಳಂಬ ಮಾಡುವ ಉಡಾಫೆ! ಗದಗ ಜಿಲ್ಲೆಯ ಮುಂಡರಗಿ ತಾಲೂಕು ಪಂಚಾಯಿತಿಯಲ್ಲಿ ಇಂದು ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಸಾಕ್ಷಿಯೊಂದು ಸಿಕ್ಕಿದೆ.
ಗದಗ ಜಿಲ್ಲೆ ಮುಂಡರಗಿ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಇಂದು ಸಂಜೆ 4:00 ಗಂಟೆಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಪ್ರಗತಿ ಪರಿಶೀಲನಾ ಸಭೆಯನ್ನು (SCP-TSP) ಏರ್ಪಡಿಸಲಾಗಿತ್ತು. ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ತಾಲೂಕಿನ ಎಲ್ಲಾ ಇಲಾಖಾ ಅಧಿಕಾರಿಗಳಿಗೆ “ಸಭೆಗೆ ತಪ್ಪದೇ ಹಾಜರಾಗಿ” ಎಂದು ಅಧಿಕೃತ ಸಂದೇಶ ರವಾನಿಸಲಾಗಿತ್ತು.
ಸಮಾಜ ಕಲ್ಯಾಣ ಇಲಾಖೆಯ ಆದೇಶದಂತೆ ವಿವಿಧ ಇಲಾಖೆಯ ಅಧಿಕಾರಿಗಳು ತಮ್ಮೆಲ್ಲಾ ಕೆಲಸ ಕಾರ್ಯಗಳನ್ನು ಬದಿಗಿಟ್ಟು ಸಂಜೆ 4:00 ಗಂಟೆಗೇ ಸಭಾಭವನಕ್ಕೆ ಬಂದು ಹಾಜರಾಗಿದ್ದಾರೆ. ಆದರೆ ಸಭೆ ನಡೆಸಬೇಕಾದ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು (EO) ಮತ್ತು ಸಭೆಯ ಆಯೋಜಕರಾದ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳೇ ನಾಪತ್ತೆ!
ಗಡಿಯಾರದಲ್ಲಿ ಸಮಯ 4:44 ದಾಟಿದರೂ ಮುಖ್ಯ ಅಧಿಕಾರಿಗಳ ಸುಳಿವೇ ಇಲ್ಲ. ಕಾಯುವ ಪರಿಸ್ಥಿತಿ ನಿರ್ಮಾಣವಾಗಿದ್ದು ಸಭೆಗೆ ಬಂದಿದ್ದ ಅಧಿಕಾರಿಗಳಿಗೆ.
ಶಿಸ್ತಿನ ಪಾಠ ಎಲ್ಲಿಗೆ ಬಂತು?: ಪ್ರಗತಿ ಪರಿಶೀಲನಾ ಸಭೆಯಲ್ಲಿ “ಸಮಯಕ್ಕೆ ಸರಿಯಾಗಿ ಫಲಾನುಭವಿಗಳಿಗೆ ಸೌಲಭ್ಯ ನೀಡಿ” ಎಂದು ಅಧಿಕಾರಿಗಳು ಪಾಠ ಮಾಡುತ್ತಾರೆ. ಆದರೆ ಸ್ವತಃ ಸಭೆಯ ಸಮಯ ಪಾಲಿಸದಿರುವುದು ದೊಡ್ಡ ವಿಪರ್ಯಾಸ.
ಅಧಿಕಾರಿಗಳ ಆಕ್ರೋಶ: ದೂರದ ಊರುಗಳಿಂದ ಬಂದ ಅಧಿಕಾರಿಗಳು, ಹಿರಿಯ ಅಧಿಕಾರಿಗಳ ಈ ನಡೆಗೆ ಒಳಗೊಳಗೇ ಹಿಡಿಶಾಪ ಹಾಕುತ್ತಾ ಸಭಾಂಗಣದಲ್ಲಿ ಕುಳಿತಿರುವ ದೃಶ್ಯ ಕಂಡುಬಂದಿದೆ.
ಪ್ರಮುಖ ಯೋಜನೆಗಳ ಸಭೆಯನ್ನೇ ಇಷ್ಟು ಹಗುರವಾಗಿ ಪರಿಗಣಿಸಿದರೆ, ಇನ್ನು ಸಾಮಾನ್ಯ ಜನರ ಕೆಲಸಗಳು ಇವರಿಂದ ಎಷ್ಟು ಬೇಗ ಆಗಬಹುದು? ಸಭೆಯ ಸಮಯ ಪ್ರಜ್ಞೆ ಇಲ್ಲದ ಇಂತಹ ಅಧಿಕಾರಿಗಳ ವಿರುದ್ಧ ಜಿಲ್ಲಾಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವರೇ? ಕಾದು ನೋಡಬೇಕಿದೆ.
