ಗದಗ: ಭಾರತವು ಸಾರ್ವಭೌಮ, ಸಮಾಜವಾದಿ, ಧರ್ಮನಿರಪೇಕ್ಷ ಹಾಗೂ ಪ್ರಜಾಪ್ರಭುತ್ವ ಗಣರಾಜ್ಯವಾಗಿ ರೂಪುಗೊಂಡ ಐತಿಹಾಸಿಕ ದಿನವೇ ಗಣರಾಜ್ಯೋತ್ಸವ ಎಂದು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಪ್ರೊ. ಎಸ್. ವೈ. ಚಿಕ್ಕಟ್ಟಿ ಹೇಳಿದರು.
ನಗರದ ಚಿಕ್ಕಟ್ಟಿ ಶಾಲಾ–ಕಾಲೇಜುಗಳಲ್ಲಿ ಜರುಗಿದ ೭೭ನೇ ಗಣರಾಜ್ಯೋತ್ಸವ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು, ೧೯೫೦ರ ಜನವರಿ ೨೬ರಂದು ನಮ್ಮ ದೇಶಕ್ಕೆ ಸ್ವಂತ ಸಂವಿಧಾನ ಜಾರಿಯಾದ ದಿನವನ್ನು ಗೌರವ ಮತ್ತು ಹೆಮ್ಮೆಯಿಂದ ಸ್ಮರಿಸುವ ದಿನ ಇದಾಗಿದೆ ಎಂದರು. ಡಾ. ಬಿ.ಆರ್. ಅಂಬೇಡ್ಕರ್ ಅವರ ನೇತೃತ್ವದಲ್ಲಿ ರಚಿಸಲಾದ ಸಂವಿಧಾನವು ಪ್ರತಿಯೊಬ್ಬ ನಾಗರಿಕನಿಗೂ ಸ್ವಾತಂತ್ರ್ಯ, ಸಮಾನತೆ, ನ್ಯಾಯ ಮತ್ತು ಸಹೋದರತ್ವದ ಭರವಸೆಯನ್ನು ನೀಡುವುದರ ಜೊತೆಗೆ ನಮ್ಮ ಕರ್ತವ್ಯಗಳನ್ನು ನೆನಪಿಸುತ್ತದೆ ಎಂದು ಹೇಳಿದರು. ದೇಶದ ಪ್ರಗತಿಯಲ್ಲಿ ಪ್ರತಿಯೊಬ್ಬ ನಾಗರಿಕನ ಪಾತ್ರ ಮಹತ್ವದಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಕುಮಾರಿ ಪ್ರೀತಿ ಯಳವತ್ತಿ ಅವರು ಧ್ವಜಾರೋಹಣ ನೆರವೇರಿಸಿದ್ದು ವಿಶೇಷವಾಗಿತ್ತು. ಧ್ವಜಾರೋಹಣದ ಬಳಿಕ ಮಾತನಾಡಿದ ಅವರು, ಈ ಗೌರವದ ಅವಕಾಶ ದೊರೆತಿರುವುದು ನನಗೆ ಅಪಾರ ಸಂತಸ ಮತ್ತು ಹೆಮ್ಮೆಯನ್ನು ತಂದಿದೆ. ಮುಂದಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಿ ಕಾಲೇಜಿಗೆ ಕೀರ್ತಿ ತರುವೆ ಎಂದು ತಿಳಿಸಿದರು.
ಗಣರಾಜ್ಯೋತ್ಸವದ ಅಂಗವಾಗಿ ಮಾತನಾಡಿದ ಕನ್ನಡ ಉಪನ್ಯಾಸಕ ಶ್ರೀ ಶ್ರೀಶೈಲ ಬಡಿಗೇರ, ಇಂದಿನ ವಿದ್ಯಾರ್ಥಿಗಳೇ ದೇಶದ ಭವಿಷ್ಯವಾಗಿದ್ದು, ಶಿಸ್ತು, ಶ್ರಮ, ದೇಶಪ್ರೇಮ ಮತ್ತು ಮೌಲ್ಯಾಧಾರಿತ ಬದುಕು ಭಾರತವನ್ನು ಬಲಿಷ್ಠಗೊಳಿಸುತ್ತದೆ ಎಂದು ಹೇಳಿದರು. ವಿದ್ಯಾಭ್ಯಾಸದ ಜೊತೆಗೆ ಮಾನವೀಯತೆ, ಸತ್ಯ ಹಾಗೂ ಸೇವಾಭಾವವನ್ನು ಅಳವಡಿಸಿಕೊಂಡಾಗ ಮಾತ್ರ ರಾಷ್ಟ್ರದ ಏಕತೆ ಮತ್ತು ಅಖಂಡತೆ ಕಾಪಾಡಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಸಮಾರಂಭದಲ್ಲಿ ಉಪಪ್ರಾಚಾರ್ಯರಾದ ಶ್ರೀಮತಿ ಶೋಭಾ ಸ್ಥಾವರಮಠ, ಮುಖ್ಯೋಪಾಧ್ಯಾಯನಿಯರಾದ ಶ್ರೀಮತಿ ಶೋಭಾ ಭಟ್, ಶ್ರೀಮತಿ ಪುಷ್ಪಲತಾ ಬೆಲೇರಿ, ಶ್ರೀಮತಿ ರೀಯಾನಾ ಮುಲ್ಲಾ ಸೇರಿದಂತೆ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.
