ಲಕ್ಷ್ಮೇಶ್ವರ : “ನಿಜಶರಣ ಅಂಬಿಗರ ಚೌಡಯ್ಯನವರ ವಿಚಾರದಾರೆಗಳನ್ನು ನಮ್ಮ ಜೀವನದಲ್ಲೂ ಅಳವಡಿಸಿಕೊಳ್ಳಬೇಕಾಗಿದೆ ಎಂದು ಸಿ ಆರ್ ಪಿ ಸಂಪನ್ಮೂಲ ವ್ಯಕ್ತಿ ಶ್ರೀನಿವಾಸ ಮತ್ತೂರ ಕರೆ ನೀಡಿದರು.
ವರದಿ : ಪರಮೇಶ ಎಸ್ ಲಮಾಣಿ.
ಬುಧವಾರ ಪಟ್ಟಣದ ಸರ್ಕಾರಿ ಮಾದರಿ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆಯಲ್ಲಿ ಆಚರಿಸಲಾದ ನಿಜಶರಣ ಅಂಬಿಗರ ಚೌಡಯ್ಯ ಜಯಂತಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಶಾಲೆಯಲ್ಲಿ ಅದ್ದೂರಿಯಾಗಿ ಆಚರಿಸಲಾಗುತ್ತಿದ್ದು, ಅವರ ಚಿಂತನೆಗಳು ಅತ್ಯಂತ ಮೌಲ್ಯಯುತವಾಗಿದ್ದಂತವುಗಳಾಗಿದ್ದು ನಾವು ಅವನ್ನು ಒಮ್ಮೆ ತಿರುಗಿ ನೋಡಿ, ನಮ್ಮ ಜೀವನದಲ್ಲಿ ಬಳಸಿಕೊಂಡಲ್ಲಿ ಅದೇ ಒಂದು ಪ್ರಮುಖ ಆಚರಣೆಯಾಗುತ್ತದೆ ಎಂದರು.
ದೋಣಿ ನಡೆಸುವ ಕಾಯಕ ಮಾಡುತ್ತಿದ್ದ ಅಂಬಿಗರ ಚೌಡಯ್ಯ ತಮ್ಮ ವೃತ್ತಿಯನ್ನೇ ಕೈಲಾಸವೆಂದು ನಂಬಿದವರಾಗಿದ್ದರು. ಯಾವುದೇ ಕೆಲಸವನ್ನು ಶ್ರದ್ದೆಯಿಂದ ಮಾಡಿದ್ದಲ್ಲಿ ದೇವರನ್ನು ಕಾಣಬಹುದಾಗಿದೆ ಎಂಬುದನ್ನು ಅವರು ತೋರಿಸಿದ್ದಾರೆ. ಸಮಾಜದಲ್ಲಿರುವ ಮೇಲು, ಕೀಳು, ಮೂಢನಂಬಿಕೆ, ಡಂಭಾಚಾರಗಳನ್ನು ಯಾವುದೇ ಅಂಜು ಅಳುಕಿಲ್ಲದೆ ತಮ್ಮ ವಚನಗಳ ಮೂಲಕ ಟೀಕಿಸಿದ್ದಾರೆ, ಇದರಿಂದ ಅವರು ಸಮಾಜ ಸುಧಾರಣೆ ಮಾಡಲು ಸಹಕಾರಿಯಾಯಿತು ಎಂದರು.
ಅತಿಥಿ ಶಿಕ್ಷಕಿ ನೇತ್ರಾವತಿ ಕುಂಬಾರ ಮಾತನಾಡಿ 12ನೇ ಶತಮಾನದ ಅಂಬಿಗರ ಚೌಡಯ್ಯ ತಮ್ಮ ಕುಲ ಕಸಬನ್ನೆ ಮಾಡುತ್ತಾ ಸಮಾಜ ಸುಧಾರಕರಾದವರು. ಸಮಾಜದ ಕೆಟ್ಟ ಅನಿಷ್ಠ ಪದ್ದತಿಗಳ ವಿರುದ್ಧ ಧ್ವನಿ ಎತ್ತಿ ಸಾಮಾಜಿಕ ಹರಿಕಾರರಾಗಿ ಕ್ರಾಂತಿಯನ್ನುಂಟು ಮಾಡಿದವರು. ಅವರು ತಮ್ಮ ವಚನಗಳ ಮೂಲಕ ಸಮಾಜಕ್ಕೆ ಕೊಡುಗೆಯನ್ನು ನೀಡಿದ್ದಾರೆ. ಅವರನ್ನು ಸ್ಮರಿಸುವುದು ನಮ್ಮ ಕರ್ತವ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಶಾಲೆಯ ಪ್ರಧಾನ ಗುರುಗಳಾದ ಬಸವರಾಜ ಕುಂಬಾರ, ಶಿಕ್ಷಕರಾದ ಆರ್ ಕೆ ಉಪನಾಳ, ಗೀತಾ ಗುರಿಕಾರ, ಎನ್ ಟಿ ಸಿ ಯ ಪ್ರಶಿಕ್ಷಣಾರ್ಥಿಗಳು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
