Home » News » ಲಕ್ಕುಂಡಿ ನಿಧಿ ಪತ್ತೆ: ವಿಜಯನಗರ ಕಾಲದ ಚಿನ್ನವೋ? 300 ವರ್ಷ ಹಳೆಯ ಚಿನ್ನದ ಬಗ್ಗೆ ತಜ್ಞರ ಅನುಮಾನ..! ಡಿಸಿ ಕಚೇರಿಯಲ್ಲಿ ತಡರಾತ್ರಿ ತನಕ ಪರಿಶೀಲನೆ..!

ಲಕ್ಕುಂಡಿ ನಿಧಿ ಪತ್ತೆ: ವಿಜಯನಗರ ಕಾಲದ ಚಿನ್ನವೋ? 300 ವರ್ಷ ಹಳೆಯ ಚಿನ್ನದ ಬಗ್ಗೆ ತಜ್ಞರ ಅನುಮಾನ..! ಡಿಸಿ ಕಚೇರಿಯಲ್ಲಿ ತಡರಾತ್ರಿ ತನಕ ಪರಿಶೀಲನೆ..!

by CityXPress
0 comments

ಗದಗ:
ಗದಗ ಜಿಲ್ಲೆಯ ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ಇತ್ತೀಚೆಗೆ ಪತ್ತೆಯಾಗಿರುವ ನಿಧಿ ಪ್ರಕರಣ ರಾಜ್ಯದ ಪುರಾತತ್ವ ವಲಯದಲ್ಲಿ ತೀವ್ರ ಕುತೂಹಲ ಹಾಗೂ ಚರ್ಚೆಗೆ ಕಾರಣವಾಗಿದೆ. ಪತ್ತೆಯಾದ ಚಿನ್ನವು ಸುಮಾರು 300 ವರ್ಷಗಳ ಹಿಂದಿನದ್ದಾಗಿರಬಹುದು ಎಂಬ ಅಭಿಪ್ರಾಯವನ್ನು ಪುರಾತತ್ವ ತಜ್ಞರು ವ್ಯಕ್ತಪಡಿಸಿದ್ದಾರೆ.

🖋ವರದಿ:ಮಹಲಿಂಗೇಶ ಹಿರೇಮಠ. ಗದಗ


ನಿಧಿ ಪತ್ತೆಯಾದ ಹಿನ್ನೆಲೆ, ನಿನ್ನೆ ತಡರಾತ್ರಿ ತನಕ ಗದಗ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪರಿಶೀಲನಾ ಕಾರ್ಯ ನಡೆಯಿತು. ಈ ಪರಿಶೀಲನೆಯನ್ನು ಭಾರತೀಯ ಪುರಾತತ್ವ ಇಲಾಖೆ (ASI) ಹಾಗೂ ರಾಜ್ಯ ಪುರಾತತ್ವ ಇಲಾಖೆಗಳ ತಜ್ಞರೊಂದಿಗೆ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಅವರ ನೇತೃತ್ವದಲ್ಲಿ ನಡೆಸಲಾಯಿತು.


ಅಧಿಕಾರಿಗಳ ಸಮ್ಮುಖದಲ್ಲೇ ಖಜಾನೆಯಲ್ಲಿದ್ದ ಚಿನ್ನವನ್ನು ಹೊರತೆಗೆದು, ಪ್ರತಿಯೊಂದು ಚಿನ್ನಾಭರಣವನ್ನು ಪ್ರತ್ಯೇಕವಾಗಿ ವಿಂಗಡಿಸಿ ಸೂಕ್ಷ್ಮವಾಗಿ ಪರಿಶೀಲನೆ ನಡೆಸಲಾಯಿತು. ಚಿನ್ನಾಭರಣಗಳ ವಿನ್ಯಾಸ, ತೂಕ, ಲೋಹದ ಗುಣಮಟ್ಟ ಹಾಗೂ ತಯಾರಿಕೆಯ ಶೈಲಿಯನ್ನು ಅಧ್ಯಯನ ಮಾಡಿದ ತಜ್ಞರು, ಈ ನಿಧಿ ವಿಜಯನಗರ ರಾಜರ ಆಳ್ವಿಕೆ ಕಾಲಕ್ಕೆ ಸೇರಿದದ್ದಾಗಿರಬಹುದೆಂಬ ಪ್ರಾಥಮಿಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

banner


ಪರಿಶೀಲನೆ ವೇಳೆ ಪತ್ತೆಯಾದ ಚಿನ್ನವು ಸಾಮಾನ್ಯ ವಾಣಿಜ್ಯ ಚಿನ್ನಕ್ಕಿಂತ ಭಿನ್ನವಾಗಿದ್ದು, ಪುರಾತನ ಕಾಲದ ರಾಜಕೀಯ–ಸಾಂಸ್ಕೃತಿಕ ಹಿನ್ನೆಲೆಯನ್ನು ಪ್ರತಿಬಿಂಬಿಸುವ ಲಕ್ಷಣಗಳನ್ನು ಹೊಂದಿದೆ ಎನ್ನಲಾಗಿದೆ. ವಿಶೇಷವಾಗಿ ಚಿನ್ನಾಭರಣಗಳ ಆಕಾರ, ಕುಶಲತೆ ಮತ್ತು ಬಳಕೆಯ ವಿಧಾನಗಳು ಪುರಾತತ್ವದ ದೃಷ್ಟಿಯಿಂದ ಮಹತ್ವ ಪಡೆದಿವೆ.


ನಿಧಿ ಕುರಿತು ಅಂತಿಮ ಹಾಗೂ ಸ್ಪಷ್ಟ ಅಭಿಪ್ರಾಯವನ್ನು ತಜ್ಞರು ನೀಡಲು ಇನ್ನೂ ಮೂರು ದಿನಗಳ ಕಾಲಾವಕಾಶ ಬೇಕಾಗಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಯೋಗಾಲಯ ಪರೀಕ್ಷೆಗಳು ಹಾಗೂ ದಾಖಲೆ ಅಧ್ಯಯನದ ಬಳಿಕ ಚಿನ್ನದ ನಿಖರ ಕಾಲಘಟ್ಟವನ್ನು ದೃಢಪಡಿಸಲಾಗುವುದು.


ಐತಿಹಾಸಿಕ ಮಹತ್ವ ಹೊಂದಿರುವ ಲಕ್ಕುಂಡಿ ಗ್ರಾಮ ಈಗಾಗಲೇ ತನ್ನ ಶಿಲ್ಪಕಲೆ, ದೇವಾಲಯಗಳು ಹಾಗೂ ಸಂಸ್ಕೃತಿಯ ಮೂಲಕ ಹೆಸರುವಾಸಿಯಾಗಿದ್ದು, ಇದೀಗ ನಿಧಿ ಪತ್ತೆಯ ಮೂಲಕ ಮತ್ತೊಮ್ಮೆ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆಯುತ್ತಿದೆ. ಈ ನಿಧಿಯ ಅಂತಿಮ ವರದಿ ಹೊರಬಿದ್ದ ಬಳಿಕ, ಲಕ್ಕುಂಡಿಯ ಪುರಾತತ್ವ ಮಹತ್ವ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Website designed by Dreamweb
error: Content is protected by Dreamweb