ಗದಗ:
ಗದಗ ಜಿಲ್ಲೆಯ ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ಮನೆ ಅಡಿಪಾಯ ಅಗೆಯುವ ವೇಳೆ ಪತ್ತೆಯಾದ ನಿಧಿ ಇದೀಗ ಕೇವಲ ಸ್ಥಳೀಯ ಸುದ್ದಿಯಲ್ಲದೆ, ರಾಜ್ಯಮಟ್ಟದ ಮಹತ್ವದ ವಿಚಾರವಾಗಿ ರೂಪುಗೊಂಡಿದೆ.
🖋ವರದಿ: ಮಹಲಿಂಗೇಶ ಹಿರೇಮಠ.ಗದಗ
ಲಕ್ಕುಂಡಿಯಲ್ಲಿ 470 ಗ್ರಾಂ ತೂಕದ ಚಿನ್ನಾಭರಣಗಳು ಪತ್ತೆಯಾಗಿರುವ ಮಾಹಿತಿ ತಿಳಿಯುತ್ತಿದ್ದಂತೆಯೇ, ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಕುರಿತು ಸ್ವತಃ ವಿಚಾರಿಸಿ ಸಂಪೂರ್ಣ ವರದಿ ಪಡೆದುಕೊಂಡಿದ್ದಾರೆ.
ನಿಧಿ ಪತ್ತೆಯಾದ ಸುದ್ದಿ ತಿಳಿದ ತಕ್ಷಣ ಜಿಲ್ಲಾಡಳಿತದೊಂದಿಗೆ ಸ್ಥಳಕ್ಕೆ ಭೇಟಿ ನೀಡಿದ್ದ ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಹಾಗೂ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಸಿದ್ಧಲಿಂಗೇಶ ಪಾಟೀಲರು, ಗದಗ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಪ್ರವಾಸೋದ್ಯಮ ಸಚಿವ ಹೆಚ್.ಕೆ. ಪಾಟೀಲರಿಗೆ ಸ್ಥಳದಿಂದಲೇ ಮಾಹಿತಿ ನೀಡಿದ್ದಾರೆ. ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪಕ್ಕದಲ್ಲೇ ಇದ್ದ ಸಚಿವ ಹೆಚ್.ಕೆ. ಪಾಟೀಲರು, ಲಕ್ಕುಂಡಿಯಲ್ಲಿ ನಿಧಿ ಪತ್ತೆಯಾದ ವಿಷಯವನ್ನು ಸಿಎಂಗೆ ವಿವರಿಸಿದ್ದಾರೆ.
ತಕ್ಷಣ ಅದೇ ಫೋನ ಮೂಲಕ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಿದ್ಧಲಿಂಗೇಶ ಪಾಟೀಲರೊಂದಿಗೆ ದೂರವಾಣಿ ಮೂಲಕ ಮಾತನಾಡಿ, ನಿಧಿ ಪತ್ತೆಯಾದ ಸಂಪೂರ್ಣ ವಿವರ ಪಡೆದುಕೊಂಡಿದ್ದಾರೆ. ಅಲ್ಲದೇ ಸ್ಥಳದಲ್ಲಿದ್ದ ಗದಗ ಎಸ್ಪಿ ರೋಹನ್ ಜಗದೀಶ್ ಹಾಗೂ ನಿಧಿ ಮಾಹಿತಿ ನೀಡಿದ್ದ ಗ್ರಾಮ ಪಂಚಾಯತ್ ಸದಸ್ಯೆಯೊಂದಿಗೆ ಕೂಡ ಮಾತನಾಡಿದ ಸಿಎಂ, ಪತ್ತೆಯಾದ ನಿಧಿಯನ್ನು ಸಂಪೂರ್ಣ ಸುರಕ್ಷಿತವಾಗಿ ಸರ್ಕಾರದ ವಶಕ್ಕೆ ತಲುಪಿಸುವಂತೆ ಸ್ಪಷ್ಟ ಸೂಚನೆ ನೀಡಿದ್ದಾರೆ.
ಈ ಸಂಭಾಷಣೆಯ ವೇಳೆ ಸಿಎಂ ಸಿದ್ದರಾಮಯ್ಯ ಅವರು, “ಪತ್ತೆಯಾದ ನಿಧಿಯನ್ನು ನಿಮ್ಮ ಹೆಚ್.ಕೆ. ಪಾಟೀಲರಿಗೇ ಕೊಟ್ಟು ಕಳಿಸಿ” ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ. ಈ ಸಂಪೂರ್ಣ ಮಾತುಕತೆಯನ್ನು ಗ್ರಾಮಸ್ಥರು ಕುತೂಹಲದಿಂದ ವೀಕ್ಷಿಸಿ ಸಂತೋಷ ವ್ಯಕ್ತಪಡಿಸುತ್ತಾ, ಸ್ಥಳೀಯರು ಮೊಬೈಲ್ನಲ್ಲಿ ಸೆರೆ ಹಿಡಿದಿದ್ದು, ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಡುತ್ತಿದೆ.
ಇತ್ತ, ಲಕ್ಕುಂಡಿ ಗ್ರಾಮದ ವಾರ್ಡ್ ನಂ.4ರಲ್ಲಿ ಗಂಗವ್ವ ಬಸವರಾಜ ರಿತ್ತಿ ಎಂಬುವರ ಮನೆಯ ಅಡಿಪಾಯ ಅಗೆಯುವ ವೇಳೆ ಪತ್ತೆಯಾದ ಈ ಚಿನ್ನಾಭರಣಗಳು ಯಾವ ಕಾಲಘಟ್ಟಕ್ಕೆ ಸೇರಿವೆ ಎಂಬುದು ಪುರಾತತ್ವ ಇಲಾಖೆಯ ತನಿಖೆಯ ನಂತರವೇ ಸ್ಪಷ್ಟವಾಗಲಿದೆ ಎಂದು ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸಿದ್ದು ಪಾಟೀಲ ತಿಳಿಸಿದ್ದಾರೆ.
ಐತಿಹಾಸಿಕ ಹಿನ್ನೆಲೆ ಹೊಂದಿರುವ ಲಕ್ಕುಂಡಿಯಲ್ಲಿ ನಿಧಿ ಪತ್ತೆಯಾಗಿರುವುದಕ್ಕಿಂತಲೂ, ಆ ವಿಚಾರವನ್ನು ಮುಖ್ಯಮಂತ್ರಿ ಸ್ವತಃ ಗಮನಿಸಿ, ಅಧಿಕಾರಿಗಳಿಂದ ನೇರವಾಗಿ ಮಾಹಿತಿ ಪಡೆದುಕೊಂಡಿರುವುದು ಈ ಪ್ರಕರಣಕ್ಕೆ ಇನ್ನಷ್ಟು ಮಹತ್ವ ಮತ್ತು ಸಾರ್ವಜನಿಕ ಕುತೂಹಲವನ್ನು ತಂದಿದೆ.
