ಮುಂಡರಗಿ ಎಂಬ ಊರು ಒಮ್ಮೆ ಹಿಂದುಳಿದ ಪ್ರದೇಶ, ಬರದ ನಾಡು ಎಂಬ ನಾಮಧೇಯದೊಂದಿಗೆ ಗುರುತಿಸಿಕೊಂಡಿದ್ದ ಕಾಲವೊಂದಿತ್ತು. ಆದರೆ ಅದೇ ಮುಂಡರಗಿಯಲ್ಲಿ ಶಿಕ್ಷಣ, ಅನ್ನ, ಆಶ್ರಯ ಹಾಗೂ ಅರಿವಿನ ಬೆಳಕು ಚೆಲ್ಲಿದ ಸಂಸ್ಥೆಯೊಂದು ಶತಮಾನ ಪೂರೈಸಿ ಇಂದು ಇಡೀ ನಾಡಿನ ಗಮನ ಸೆಳೆಯುತ್ತಿದೆ. ಅದು ಜಗದ್ಗುರು ಅನ್ನದಾನೀಶ್ವರ ವಿದ್ಯಾ ಸಮಿತಿ. ನೂರು ವರ್ಷಗಳ ಸೇವಾ ಪಯಣದ ಸಂಭ್ರಮಕ್ಕೆ ಸಜ್ಜಾಗಿರುವ ಈ ಸಂಸ್ಥೆ, ಈ ಭಾಗದ ಶಿಕ್ಷಣ ಪ್ರೇಮಿಗಳಿಗೆ ಅಭಿಮಾನ ಹಾಗೂ ಹೆಮ್ಮೆಯ ಸಂಕೇತವಾಗಿ ಪರಿಣಮಿಸಿದೆ.
ಯಾವುದೇ ಫಲಾಪೇಕ್ಷೆಯಿಲ್ಲದೆ, ಸ್ವಾತಂತ್ರ್ಯ ಪೂರ್ವದಲ್ಲಿಯೇ ಶಿಕ್ಷಣವನ್ನು ಧ್ಯೇಯವನ್ನಾಗಿ ಮಾಡಿಕೊಂಡು ಆರಂಭಗೊಂಡ ಈ ಸಂಸ್ಥೆ, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅನ್ನ, ಅಕ್ಷರ, ಆಸರೆ ಹಾಗೂ ಅರಿವು ನೀಡುವ ಮಹತ್ತರ ಕೈಂಕರ್ಯದಲ್ಲಿ ತೊಡಗಿಕೊಂಡಿದೆ. 1912ರಲ್ಲಿ ಶ್ರೀ ಸಂಸ್ಥಾನಮಠದ ಪೂಜ್ಯರ ದೂರದೃಷ್ಟಿಯಿಂದ ಸಂಸ್ಕೃತ ಪಾಠಶಾಲೆ ಹಾಗೂ ಉಚಿತ ಪ್ರಸಾದ ನಿಲಯ ಸ್ಥಾಪನೆಯಾಗಿ, ಬಡ ಹಾಗೂ ಗ್ರಾಮೀಣ ವಿದ್ಯಾರ್ಥಿಗಳಿಗೆ ಶಿಕ್ಷಣದ ದಾರಿ ಸುಗಮವಾಯಿತು.
1924ರಲ್ಲಿ ಕೇವಲ 12 ವಿದ್ಯಾರ್ಥಿಗಳೊಂದಿಗೆ ಆರಂಭವಾದ ನ್ಯೂ ಇಂಗ್ಲೀಷ್ ಶಾಲೆ, ಈ ಭಾಗದ ಶಿಕ್ಷಣ ಕ್ರಾಂತಿಯ ಮೊದಲ ಹೆಜ್ಜೆಯಾಯಿತು. 9ನೇ ಪೀಠಾಧೀಶರಾದ ವೆಂಕಟಾಪೂರ ಅಜ್ಜನವರು ಶಿಕ್ಷಣ ಅಭಿವೃದ್ಧಿಗಾಗಿ ತೋರಿದ ಶ್ರಮ ಅನನ್ಯವಾದುದು. ಅವರ ಜೊತೆ ಶಿಕ್ಷಣ ಪ್ರೇಮಿಗಳಾದ ಕೊಪ್ಪಳದ ವೀರಭದ್ರಪ್ಪನವರು, ಭೂದಾನಿಗಳಾದ ಇಲ್ಲೂರು ವಾಸಪ್ಪನವರು ಹಾಗೂ ಶ್ರೀಮಠದ ಭಕ್ತ ಸಮೂಹದ ಸಹಕಾರದಿಂದ 1969ರಲ್ಲಿ ಈ ಶಿಕ್ಷಣ ಸಂಸ್ಥೆಯನ್ನು ಪ್ರಸ್ತುತ ಪೀಠಾಧೀಶರಾದ ಅನ್ನದಾನೀಶ್ವರ ಜಗದ್ಗುರುಗಳ ಸನ್ನಿಧಿಗೆ ಸಮರ್ಪಿಸಲಾಯಿತು.
ಸಂಸ್ಥೆಯ ವತಿಯಿಂದ 1948ರಲ್ಲಿ ಮೊದಲ ಪ್ರೌಢಶಾಲೆ ಆರಂಭವಾಯಿತು. ವೆಂಕಟಾಪೂರ ಅಜ್ಜನವರ ಆರ್ಥಿಕ ಸಹಾಯದಿಂದ ನಿರ್ಮಾಣಗೊಂಡ ಈ ಶಾಲೆಗೆ ಅಂದಿನ ಮುಖ್ಯಮಂತ್ರಿಗಳಾದ ಎಸ್. ನಿಜಲಿಂಗಪ್ಪನವರು ಅಡಿಗಲ್ಲು ಹಾಕಿದ್ದು ಇತಿಹಾಸದ ಮಹತ್ವದ ಘಟ್ಟ. 1958ರಲ್ಲಿ ಪೂರ್ಣಗೊಂಡ ಕಟ್ಟಡವನ್ನು ಅಂದಿನ ರಾಜ್ಯಪಾಲರಾದ ಜಯಚಾಮರಾಜೇಂದ್ರ ಒಡೆಯರ್ ಉದ್ಘಾಟಿಸಿದ್ದು, ಸಂಸ್ಥೆಯ ಗೌರವವನ್ನು ಇನ್ನಷ್ಟು ಹೆಚ್ಚಿಸಿತು.
1969ರಿಂದ ಇಂದಿನವರೆಗೆ ಸಂಸ್ಥೆಯಡಿ 33 ಅಂಗ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದ್ದು, ಎಲ್ಲವೂ ಗ್ರಾಮೀಣ ವಿದ್ಯಾರ್ಥಿಗಳನ್ನೇ ಕೇಂದ್ರವಾಗಿಟ್ಟುಕೊಂಡು ಸೇವಾ ಕಾರ್ಯದಲ್ಲಿ ತೊಡಗಿರುವುದು ಈ ಸಂಸ್ಥೆಯ ವೈಶಿಷ್ಟ್ಯ. ಗ್ರಾಮೀಣ ಜನತೆಯ ಬಗ್ಗೆ ಇರುವ ಅಪಾರ ಕಾಳಜಿ ಹಾಗೂ ಸಾಮಾಜಿಕ ಬದ್ಧತೆಯೇ ಈ ಸಂಸ್ಥೆಯ ಶಕ್ತಿಯಾಗಿದೆ.
ಪ್ರಸ್ತುತ ಪೂಜ್ಯರಾದ ಅನ್ನದಾನೀಶ್ವರ ಜಗದ್ಗುರುಗಳು ಕೇವಲ ಶಿಕ್ಷಣ ಕ್ಷೇತ್ರದಲ್ಲಷ್ಟೇ ಅಲ್ಲ, ಸಾಹಿತ್ಯ, ಸಂಸ್ಕೃತಿ ಹಾಗೂ ಚಿಂತನೆಯಲ್ಲಿಯೂ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. 160ಕ್ಕೂ ಹೆಚ್ಚು ವಿವಿಧ ಪ್ರಕಾರದ ಸಾಹಿತ್ಯ ರಚನೆ, 275ಕ್ಕೂ ಹೆಚ್ಚು ಗ್ರಂಥಗಳ ಮುದ್ರಣಕ್ಕೆ ಸಹಕಾರ, ನಾಡಿನ ಜನಪ್ರಿಯ ಪತ್ರಿಕೆಗಳಲ್ಲಿ ಚಿಂತನ–ಮಂಥನ ಲೇಖನಗಳ ಮೂಲಕ ಸಮಾಜವನ್ನು ತಿದ್ದಿ ತೀಡುವ ಕಾರ್ಯ — ಇವೆಲ್ಲವೂ ಅವರ ಬಹುಮುಖ ಸೇವೆಯ ಉದಾಹರಣೆಗಳಾಗಿವೆ.
85ನೇ ವಯಸ್ಸಿನಲ್ಲಿಯೂ ಸದಾಕ್ರಿಯಾಶೀಲರಾಗಿರುವ ಪೂಜ್ಯರು, 5 ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳಿಗೆ ಚಿನ್ನದ ಪದಕ ವಿತರಿಸುವ ಮೂಲಕ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ವಿಜಯಪುರದ ಅಕ್ಕಮಹಾದೇವಿ ವಿಶ್ವವಿದ್ಯಾಲಯದಲ್ಲಿ ಶ್ರೀ ಜಗದ್ಗುರು ಅನ್ನದಾನೀಶ್ವರ ಶರಣ ಸಾಹಿತ್ಯ ಅಧ್ಯಯನ ಪೀಠಕ್ಕೆ 27 ಲಕ್ಷ ರೂಪಾಯಿ ದೇಣಿಗೆ ನೀಡಿರುವುದು ಅವರ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಕೊಡುಗೆಯ ಮಹತ್ವವನ್ನು ಸಾರುತ್ತದೆ.
ಕಲೆ, ಸಾಹಿತ್ಯ, ಕ್ರೀಡೆಗಳ ಉತ್ತೇಜನಕ್ಕಾಗಿ ಶ್ರೀಮಠದ ಕೋಟ್ಯಾಂತರ ಮೌಲ್ಯದ ಜಮೀನುಗಳನ್ನು ದಾನವಾಗಿ ನೀಡಿ, ಅನೇಕ ಸಂಘ–ಸಂಸ್ಥೆಗಳಿಗೆ ಸ್ವಂತ ಸೂರಿನ ವ್ಯವಸ್ಥೆ ಕಲ್ಪಿಸಿರುವುದು ಸಮಾಜಮುಖಿ ಚಿಂತನೆಯ ಪ್ರತಿಬಿಂಬ. ಕರ್ನಾಟಕ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್, ಹಂಪಿ ವಿಶ್ವವಿದ್ಯಾಲಯದಿಂದ ನಾಡೋಜ ಪ್ರಶಸ್ತಿ ಪಡೆದು, ಎರಡು ವಿಶ್ವವಿದ್ಯಾಲಯಗಳ ಗೌರವಕ್ಕೂ ಪಾತ್ರರಾಗಿರುವುದು ಅವರ ಸೇವೆಗೆ ದೊರೆತ ಯೋಗ್ಯ ಮಾನ್ಯತೆ.
ಪ್ರತಿದಿನವೂ ಪೂಜೆ, ಅಧ್ಯಯನ, ಬರವಣಿಗೆ ಹಾಗೂ ಓದನ್ನು ನಿಲ್ಲಿಸದ ಪೂಜ್ಯರು, ದಿನದ 16 ಗಂಟೆಗಳಿಗೂ ಹೆಚ್ಚು ಕಾಲ ಕಾರ್ಯನಿರ್ವಹಿಸುವ ಮೂಲಕ ಯುವಪೀಳಿಗೆಗೆ ಸ್ಫೂರ್ತಿಯಾಗಿದ್ದಾರೆ. ‘ಕಾಯಕವೇ ಕೈಲಾಸ’ ಎಂಬ ತತ್ವವನ್ನು ಜೀವನದಲ್ಲಿ ಅಳವಡಿಸಿಕೊಂಡು, ಸದಾ ಸಮಾಜಮುಖಿಯಾಗಿ ಚಿಂತಿಸುವ ಅವರು ನಾಡಿನ ಮಠಾಧೀಶರಿಗೆ ಮಾದರಿಯಾಗಿದ್ದಾರೆ.
ಇಂತಹ ಮಹಾನ್ ಚೇತನ, ಇಂತಹ ಶ್ರೇಷ್ಠ ಪರಂಪರೆ ನಮ್ಮ ನಡುವೆ ಇರುವುದೇ ನಮ್ಮೆಲ್ಲರ ಸೌಭಾಗ್ಯ. ನೂರು ವರ್ಷಗಳ ಹೆಜ್ಜೆ ಗುರುತುಗಳನ್ನು ಹೆಮ್ಮೆಯಿಂದ ಹೊತ್ತು, ಮುಂದಿನ ಶತಮಾನಕ್ಕೂ ಶಿಕ್ಷಣ–ಸೇವೆಯ ಬೆಳಕು ಚೆಲ್ಲಲು ಸಜ್ಜಾಗಿರುವ ಜಗದ್ಗುರು ಅನ್ನದಾನೀಶ್ವರ ವಿದ್ಯಾ ಸಮಿತಿ, ನಿಜಾರ್ಥದಲ್ಲಿ ಗ್ರಾಮೀಣ ಭಾರತದ ಆಶಾಕಿರಣವಾಗಿದೆ.
