ಮುಂಡರಗಿ: ಶಿಕ್ಷಣ, ಅನ್ನದಾನ ಹಾಗೂ ಸೇವೆಯ ಮೂಲಕ ಗ್ರಾಮೀಣ ಭಾಗದಲ್ಲಿ ಬೆಳಕಿನ ದೀಪವಾಗಿ ನಿಂತಿರುವ ಶ್ರೀ ಜಗದ್ಗುರು ಅನ್ನದಾನೀಶ್ವರ ವಿದ್ಯಾ ಸಮಿತಿ ನೂರು ವರ್ಷಗಳನ್ನು ಪೂರೈಸಿ, ಭವ್ಯ ಶತಮಾನೋತ್ಸವ ಸಂಭ್ರಮಕ್ಕೆ ಸಕಲ ಸಿದ್ಧತೆಗಳನ್ನು ಕೈಗೊಂಡಿದೆ.
🖋ವರದಿ: ಮಹಲಿಂಗೇಶ ಹಿರೇಮಠ.ಗದಗ
ಸ್ವಾತಂತ್ರ್ಯ ಪೂರ್ವದಲ್ಲಿಯೇ ಆರಂಭಗೊಂಡ ಈ ಸಂಸ್ಥೆಯ ಶತಮಾನೋತ್ಸವ ಕಾರ್ಯಕ್ರಮಗಳು ಇದೇ ಜನವರಿ 17 ಹಾಗೂ 18 (ಶನಿವಾರ ಮತ್ತು ರವಿವಾರ) ರಂದು ಮುಂಡರಗಿಯಲ್ಲಿ ವಿಜೃಂಭಣೆಯಿಂದ ಜರುಗಲಿವೆ.
ಬರದ ನಾಡು, ಹಿಂದುಳಿದ ಪ್ರದೇಶವೆಂದು ಗುರುತಿಸಿಕೊಂಡಿದ್ದ ಮುಂಡರಗಿಯಲ್ಲಿ, ಯಾವುದೇ ಫಲಾಪೇಕ್ಷೆಯಿಲ್ಲದೆ ಶಿಕ್ಷಣವನ್ನು ಧ್ಯೇಯವನ್ನಾಗಿ ಮಾಡಿಕೊಂಡು ಈ ಸಂಸ್ಥೆ ಆರಂಭವಾದುದು ಇತಿಹಾಸದ ಮಹತ್ವದ ಅಧ್ಯಾಯವಾಗಿದೆ. 1912 ರಲ್ಲಿ ಶ್ರೀ ಸಂಸ್ಥಾನಮಠದ ಪೂಜ್ಯರಿಂದ ಆರಂಭಗೊಂಡ ಸಂಸ್ಕೃತ ಪಾಠಶಾಲೆ ಹಾಗೂ ಉಚಿತ ಪ್ರಸಾದ ನಿಲಯದಿಂದ ಹಿಡಿದು, ಇಂದು 33 ಅಂಗ ಸಂಸ್ಥೆಗಳವರೆಗೆ ವಿಸ್ತರಿಸಿರುವ ಈ ಶಿಕ್ಷಣ ಯಾತ್ರೆ, ಗ್ರಾಮೀಣ ವಿದ್ಯಾರ್ಥಿಗಳಿಗೆ ಅನ್ನ, ಅಕ್ಷರ, ಆಸರೆ ಹಾಗೂ ಅರಿವು ನೀಡುವ ಮಹತ್ತರ ಸೇವೆಯಾಗಿ ಬೆಳೆದಿದೆ.
ಶತಮಾನೋತ್ಸವದ ಅಂಗವಾಗಿ ಶ್ರೀ ಜಗದ್ಗುರು ಅನ್ನದಾನೀಶ್ವರ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ ನೂತನ ಕಟ್ಟಡದ ಲೋಕಾರ್ಪಣೆ, ವಿಜ್ಞಾನ ವಸ್ತು ಪ್ರದರ್ಶನ, ಸಂಸ್ಮರಣ ಗ್ರಂಥದ ಬಿಡುಗಡೆ, ಹಾಗೂ ಸಾಧಕರಿಗೆ ಮತ್ತು ದಾನಿಗಳಿಗೆ ಸನ್ಮಾನ ಸಮಾರಂಭ ಆಯೋಜಿಸಲಾಗಿದೆ.
ಕಾರ್ಯಕ್ರಮವು ಬೆಳಗ್ಗೆ 10.30 ಗಂಟೆಗೆ ಆರಂಭವಾಗಲಿದ್ದು, ಶ್ರೀ ಜಗದ್ಗುರು ಅನ್ನದಾನೀಶ್ವರ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ ಆವರಣ, ಮುಂಡರಗಿಯಲ್ಲಿ ನಡೆಯಲಿದೆ. ಈ ಸಮಾರಂಭದ ಕೇಂದ್ರಬಿಂದು ಶ್ರೀಮಠದ ಪಿಠಾಧೀಪತಿಗಳಾದ ಶ್ರೀ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳ ದಿವ್ಯ ಸಾನ್ನಿಧ್ಯ ಹಾಗೂ ಶ್ರೀಮಠದ ಉತ್ತರಾಧಿಕಾರಿಗಳಾದ ಶ್ರೀ ಮನಿಪ್ರ ಮಲ್ಲಿಕಾರ್ಜುನ ಮಹಸ್ವಾಮಿಗಳ ನೇತೃತ್ವದಲ್ಲಿ ಮತ್ತು ಶ್ರೀಮಠದ ಭಕ್ತಸಮೂಹದ ಸಹಕಾರದಲ್ಲಿ ಅದ್ಧೂರಿಯಿಂದ ಜರುಗುತ್ತಿದೆ.
ವಿಶೇಷವಾಗಿ, ಈ ವಿದ್ಯಾಸಂಸ್ಥೆಯಲ್ಲಿ ಕಲಿತ ಎಲ್ಲ ಹಳೆಯ ವಿದ್ಯಾರ್ಥಿಗಳು (Alumni) ಈ ಐತಿಹಾಸಿಕ ಶತಮಾನೋತ್ಸವ ಸಮಾರಂಭದಲ್ಲಿ ಭಾಗವಹಿಸಿ, ತಮ್ಮ ಶಿಕ್ಷಣದ ನೆಲೆಯನ್ನು ಹಾಗೂ ಶಿಕ್ಷಣ ಪಡೆಯಲು ಕಾರಣೀಭೂತರಾದ ಪೂಜ್ಯ ಗುರುಗಳನ್ನ ಸ್ಮರಿಸುವದರೊಂದಿಗೆ, ಸಂಸ್ಥೆಯ ಶತಮಾನೋತ್ಸವಕ್ಕೆ ಸಾಕ್ಷಿಯಾಗಬೇಕೆಂದು ಸಮಾರಂಭದ ಆಯೋಜಕ ಸಮಿತಿ ಹೃದಯಪೂರ್ವಕವಾಗಿ ವಿನಂತಿಸಿದೆ.
ಶಿಕ್ಷಣ ಕ್ಷೇತ್ರದಲ್ಲಿ ಅನನ್ಯ ಸೇವೆ ಸಲ್ಲಿಸಿರುವ ಈ ಸಂಸ್ಥೆಯ ಶತಮಾನೋತ್ಸವವು ಕೇವಲ ಕಾರ್ಯಕ್ರಮವಲ್ಲ; ಅದು ಗ್ರಾಮೀಣ ಭಾರತದ ಶೈಕ್ಷಣಿಕ ಚಳವಳಿಯ ಸಂಭ್ರಮವಾಗಿದೆ. ನೂರಾರು ಶಿಕ್ಷಕರು, ಸಾವಿರಾರು ವಿದ್ಯಾರ್ಥಿಗಳ ಬದುಕಿಗೆ ದಿಕ್ಕು ತೋರಿದ ಸಂಸ್ಥೆಯ ನೂರು ವರ್ಷದ ಸಾಧನೆಯನ್ನು ಸ್ಮರಿಸುವ ಈ ಐತಿಹಾಸಿಕ ಕ್ಷಣಕ್ಕೆ, ನಾಡಿನ ಶಿಕ್ಷಣ ಪ್ರೇಮಿಗಳು, ಹಳೆಯ ವಿದ್ಯಾರ್ಥಿಗಳು, ದಾನಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಲಾಗಿದೆ.
ಸರ್ವರಿಗೂ ಆದರದ ಸ್ವಾಗತ ಎಂದು ಶತಮಾನೋತ್ಸವ ಸಮಿತಿಯ ಪದಾಧಿಕಾರಿಗಳು ತಿಳಿಸಿದ್ದಾರೆ.
