ಗದಗ:
ಚಿಕ್ಕಟ್ಟಿ ಸಮೂಹ ಶಿಕ್ಷಣ ಸಂಸ್ಥೆಗಳು, ಗದಗ ಇವರ ಆಶ್ರಯದಲ್ಲಿ ದಿನಾಂಕ 9 ಜನವರಿ 2026, ಶುಕ್ರವಾರ ಮಧ್ಯಾಹ್ನ 1:30 ಗಂಟೆಗೆ ಚಿಕ್ಕಟ್ಟಿ ಸಭಾಭವನದಲ್ಲಿ ಪ್ರದರ್ಶನಗೊಳ್ಳಲಿರುವ ಖ್ಯಾತ ನಾಟಕ ‘ಕಾಲಚಕ್ರ’ ಈಗಾಗಲೇ ರಂಗಪ್ರೇಕ್ಷಕರಲ್ಲಿ ಅಪಾರ ಕುತೂಹಲ ಮೂಡಿಸಿದೆ. ಮರಾಠಿ ರಂಗಭೂಮಿಯ ಪ್ರಸಿದ್ಧ ನಾಟಕಕಾರ ಜಯವಂತ ದಳ್ವಿ ಅವರ ಕೃತಿಯನ್ನು ಹಿರಿಯ ರಂಗಕರ್ಮಿ ಎಚ್. ಕೆ. ಕರ್ಕೇರ ಅವರು ಕನ್ನಡಕ್ಕೆ ಅನುವಾದಿಸಿರುವ ಈ ನಾಟಕವನ್ನು, ರಂಗಾಯಣ ಕಲಬುರಗಿ ತಂಡದವರು ಪ್ರಸ್ತುತಪಡಿಸುತ್ತಿದ್ದಾರೆ.
ಮನೆಯ ಕಥೆಯಂತೆಯೇ ಬದುಕಿನ ಕಥೆ – ‘ಕಾಲಚಕ್ರ’
‘ಕಾಲಚಕ್ರ’ ನಾಟಕವು ಪ್ರತಿಯೊಂದು ಮನೆಯ ಕಥೆಯಂತೆ ಕಾಣುವ, ಆದರೆ ಪ್ರತಿಯೊಬ್ಬರ ಹೃದಯವನ್ನು ತಟ್ಟುವ ಭಾವಪೂರ್ಣ ಕಥನವಾಗಿದೆ.ವೃದ್ಧಾಪ್ಯದ ನೋವು, ಆರ್ಥಿಕ ಅಸುರಕ್ಷತೆ, ಮಕ್ಕಳ ಮೇಲಿನ ಅವಲಂಬನೆ, ಭವಿಷ್ಯದ ಅನಿಶ್ಚಿತತೆ, ಕುಟುಂಬದ ನಿರ್ಲಕ್ಷ್ಯ ಹಾಗೂ ಸಾಮಾಜಿಕ ಸಂಪರ್ಕಗಳ ಕೊರತೆಯಿಂದ ಹುಟ್ಟುವ ಒಂಟಿತನದ ವೇದನೆಯನ್ನು ಸೂಕ್ಷ್ಮವಾಗಿ ಅನಾವರಣಗೊಳಿಸುವ ಈ ನಾಟಕ, ಸಮಾಜಕ್ಕೆ ಅಗತ್ಯವಾದ ಅನೇಕ ಪ್ರಶ್ನೆಗಳನ್ನು ಮುಂದಿಡುತ್ತದೆ.
ಡಾ. ಸುಜಾತಾ ಜಂಗಮಶೆಟ್ಟಿ ಅವರ ಮಾತು
ರಂಗಾಯಣ ಕಲಬುರಗಿಯ ನಿರ್ದೇಶಕರಾದ ಡಾ. ಸುಜಾತಾ ಜಂಗಮಶೆಟ್ಟಿ ಅವರು,‘ಕಾಲಚಕ್ರ ನಾಟಕವು ಸರ್ವಕಾಲಕ್ಕೂ ಸಲ್ಲುವ ಕೃತಿ. ವೃದ್ಧಾಪ್ಯದ ಸೂಕ್ಷ್ಮ ಸಂವೇದನೆಗಳನ್ನು ಅತ್ಯಂತ ಸೊಗಸಾಗಿ ಚಿತ್ರಿಸಿರುವ ಈ ನಾಟಕ ಪ್ರೇಕ್ಷಕರ ಮನಸ್ಸನ್ನು ಆಳವಾಗಿ ಮುಟ್ಟುತ್ತದೆ. ನಾಟಕದಲ್ಲಿ ಕಲಬುರಗಿ ರೆಪರ್ಟರಿ ಕಲಾವಿದರು ಅಷ್ಟೇ ಮನೋಜ್ಞವಾಗಿ ಅಭಿನಯಿಸಿದ್ದಾರೆ. ಒಟ್ಟಾರೆ ನಾಟಕ ಪ್ರೇಕ್ಷಕರ ಮನಸೂರೆಗೊಳ್ಳುತ್ತದೆ.
ರಂಗಾಯಣ ಕಲಬುರಗಿಯ ಸಾಧನೆ
ರಂಗಾಯಣ ಕಲಬುರಗಿಯ ಆಡಳಿತಾಧಿಕಾರಿ ಶ್ರೀ ಸಿದ್ರಾಮ ಸಿಂಧೆ ಅವರು ಮಾತನಾಡಿ,ಕಲ್ಯಾಣ ಕರ್ನಾಟಕದ ಸಾಂಸ್ಕೃತಿಕ ಸೊಗಡನ್ನು ಜೀವಂತವಾಗಿರಿಸುವ ಉದ್ದೇಶದಿಂದ 2014ರಲ್ಲಿ ಸ್ಥಾಪಿತವಾದ ರಂಗಾಯಣ ಕಲಬುರಗಿ, ನಿರಂತರ ರಂಗಚಟುವಟಿಕೆಗಳ ಮೂಲಕ ಆರೋಗ್ಯಕರ ಸಮಾಜ ನಿರ್ಮಾಣದ ಕನಸನ್ನು ನನಸು ಮಾಡುತ್ತಿದೆ. ಡಾ. ಸುಜಾತಾ ಜಂಗಮಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಕಲಬುರಗಿ ರೆಪರ್ಟರಿ ಕಲಾವಿದರು ‘ಕಾಲಚಕ್ರ’ ನಾಟಕದ ಮೂಲಕ ಅಪಾರ ಮೆಚ್ಚುಗೆ ಗಳಿಸಿದ್ದಾರೆ ಎಂದು ತಿಳಿಸಿದ್ದಾರೆ.
ನಿರ್ದೇಶನದ ಶಿಲ್ಪಿ – ಹುಲಗಪ್ಪ ಕಟ್ಟಿಮನಿ
ಈ ನಾಟಕದ ನಿರ್ದೇಶಕ ಹಿರಿಯ ರಂಗಕರ್ಮಿ ಹುಲಗಪ್ಪ ಕಟ್ಟಿಮನಿ ಅವರು 1985ರಿಂದ ಕನ್ನಡ ರಂಗಭೂಮಿಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಮೈಸೂರು ರಂಗಾಯಣದಲ್ಲಿ 33 ವರ್ಷಗಳ ಸೇವೆ ನೀಡಿದ್ದಾರೆ. ಕಾರಾಗೃಹ ವಾಸಿಗಳಿಗೆ ರಂಗಭೂಮಿಯ ಮೂಲಕ ಮಾನಸಿಕ ಪರಿವರ್ತನೆ ತಂದುಕೊಟ್ಟ ಅಪೂರ್ವ ಸಾಧನೆಗಾಗಿ ರಾಜ್ಯ ಸರ್ಕಾರವು 2009ರಲ್ಲಿ ಸಾಕ್ಷ್ಯಚಿತ್ರ ನಿರ್ಮಿಸಿದೆ. 2012ರಲ್ಲಿ ಲಂಡನ್ ಬಿಬಿಸಿ ವಾಹಿನಿಯು ಮೈಸೂರು ಜೈಲಿಗೆ ಬಂದು ಸಾಕ್ಷ್ಯಚಿತ್ರ ನಿರ್ಮಿಸಿದೆ.
ನಾಟಕದ ಹೃದಯವಂತ ಕಥಾವಸ್ತು
ನಾಟಕದಲ್ಲಿ ವೃದ್ಧ ದಂಪತಿಗಳು ಹಾಗೂ ಅವರ ಇಬ್ಬರು ಗಂಡು ಮಕ್ಕಳು ತಂದೆ-ತಾಯಿಯನ್ನು ನಿರ್ಲಕ್ಷಿಸುವ ಘಟನೆಯ ಮೂಲಕ ಕಥೆ ಸಾಗುತ್ತದೆ. ವೃದ್ಧ ತಂದೆ ಪತ್ರಿಕೆಯಲ್ಲಿ ಪ್ರಕಟಣೆ ನೀಡುತ್ತಾನೆ –ಯಾರಿಗಾದರೂ ತಂದೆ-ತಾಯಿ ಇಲ್ಲದಿದ್ದರೆ ಈ ಮುದುಕರನ್ನು ದತ್ತು ತೆಗೆದುಕೊಳ್ಳಿ.ಈ ಘಟನೆಯಿಂದ ಮಕ್ಕಳ ಮನಸ್ಥಿತಿ ಬದಲಾಗುತ್ತದೆ.“ನಿನ್ನೆ ನೀವು ನಮ್ಮ ಮೇಲೆ ಅವಲಂಬಿತರಾಗಿದ್ದಿರಿ, ಇಂದು ನಾವು ನಿಮ್ಮ ಮೇಲೆ ಅವಲಂಬಿತರಾಗಿದ್ದೇವೆ – ಇದು ಕಾಲಚಕ್ರ”
ಎನ್ನುವ ತಂದೆಯ ಸಂಭಾಷಣೆ ಪ್ರೇಕ್ಷಕರ ಮನವನ್ನು ಆಳವಾಗಿ ತಟ್ಟುತ್ತದೆ.
ಪಾಲ್ಗೊಳ್ಳಲು ವಿನಂತಿ
ಈ ಭಾವಪೂರ್ಣ ನಾಟಕದ ಯಶಸ್ಸಿಗೆ ಚಿಕ್ಕಟ್ಟಿ ಸಂಸ್ಥೆಯ ಅಧ್ಯಕ್ಷ ಪ್ರೊ. ಎಸ್. ವೈ. ಚಿಕ್ಕಟ್ಟಿ, ಪ್ರಾಚಾರ್ಯ ಬಿಪಿನ್ ಎಸ್. ಚಿಕ್ಕಟ್ಟಿ ಹಾಗೂ ಉಪಪ್ರಾಚಾರ್ಯೆ ಶ್ರೀಮತಿ ಶೋಭಾ ಸ್ಥಾವರಮಠ ಅವರು ಗದಗದ ಜನತೆಯನ್ನು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದ್ದಾರೆ.
