ಗದಗ:
ಬಸ್ ನಿಲುಗಡೆ ವಿಚಾರವಾಗಿ ಕೆಎಸ್ಆರ್ಟಿಸಿ ಸಂಸ್ಥೆಯ ಮಹಿಳಾ ಕಂಡಕ್ಟರ್ ಮೇಲೆ ವಿದ್ಯಾರ್ಥಿಗಳ ಪೋಷಕರು ಹಲ್ಲೆ ನಡೆಸಿದ ಘಟನೆ ಗದಗ–ಮುಂಡರಗಿ ರಸ್ತೆಯ ಪಾಪನಾಶಿ ಟೋಲ್ ಸಮೀಪ ನಡೆದಿದೆ.
ಈ ಘಟನೆ ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಗದಗ ಸಾರಿಗೆ ಘಟಕಕ್ಕೆ ಸೇರಿದ ಕೆಎಸ್ಆರ್ಟಿಸಿ ಬಸ್ (ಸಂಖ್ಯೆ: KA-26-F-852) ಬೆಳಿಗ್ಗೆ ಸುಮಾರು 9:30ರ ವೇಳೆಗೆ ಗದಗ ನಗರದಿಂದ ಕದಾಂಪುರ ಮಾರ್ಗವಾಗಿ ಶಿಂಗಟರಾಯನಕೇರಿ ಗ್ರಾಮಕ್ಕೆ ತೆರಳುತ್ತಿತ್ತು ಎಂದು ತಿಳಿದುಬಂದಿದೆ.
ಈ ವೇಳೆ ಪಾಪನಾಶಿ ಟೋಲ್ ಬಳಿ ಒಂದಿಷ್ಟು ವಿದ್ಯಾರ್ಥಿಗಳು ಬಸ್ ಹತ್ತಿದ್ದಾರೆ. ಆದರೆ, ಆ ಸ್ಥಳದಲ್ಲಿ ಬಸ್ ನಿಲುಗಡೆಗೆ ಅಧಿಕೃತ ಅನುಮತಿ ಇಲ್ಲದ ಕಾರಣ, ಮಹಿಳಾ ಕಂಡಕ್ಟರ್ ಅವರು ವಿದ್ಯಾರ್ಥಿನಿಯರನ್ನು ಬಸ್ನಿಂದ ಇಳಿಸಲು ಸೂಚಿಸಿ, ಬಸ್ ಮುಂದಕ್ಕೆ ಚಲಾಯಿಸುವಂತೆ ಚಾಲಕನಿಗೆ ಸೂಚಿಸಿದ್ದಾರೆ.
ಈ ವಿಷಯ ತಿಳಿದ ವಿದ್ಯಾರ್ಥಿಗಳ ಪೋಷಕರು ಬಸ್ನ್ನು ಬೆನ್ನಟ್ಟಿ ಬಂದು, ಪಾಪನಾಶಿ ಟೋಲ್ ಬಳಿ ಅಡ್ಡಗಟ್ಟಿ ನಿಲ್ಲಿಸಿ, ಬಸ್ನಲ್ಲಿದ್ದ ಮಹಿಳಾ ಕಂಡಕ್ಟರ್ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಅವರ ಮೊಬೈಲ್ ಕಸಿದುಕೊಂಡು, ಅಲ್ಲದೇ ಅವರ ಕಪಾಳಕ್ಕೆ ಹೊಡೆದು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಜೊತೆಗೆ ಹಲ್ಲೆ ನಡೆಸಿರುವ ದೃಶ್ಯಗಳು ಸಹ ಬಸ್ ನಲ್ಲಿದ್ದವರ ಮೊಬೈಲ್ ನಲ್ಲಿ ಸೆರೆಯಾಗಿವೆ.
ಘಟನೆಯ ನಂತರ ಮಹಿಳಾ ಕಂಡಕ್ಟರ್ ಅವರು ಗದಗ ಶಹರ ಪೊಲೀಸ್ ಠಾಣೆಗೆ ದೂರು ನೀಡಲು ಮುಂದಾಗಿದ್ದು, ಪ್ರಕರಣ ದಾಖಲಿಸಿಕೊಳ್ಳುವ ಪ್ರಕ್ರಿಯೆ ನಡೆಯುತ್ತಿದೆ. ಹಲ್ಲೆ ನಡೆಸಿದ ಆರೋಪಿಗಳನ್ನು ಬಂಧಿಸಲು ಶಹರ ಪೊಲೀಸರು ಬಲೆ ಬೀಸಿದ್ದಾರೆ.
ಈ ಘಟನೆ ಗದಗ ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದ್ದು, ಸರ್ಕಾರಿ ಸಾರಿಗೆ ಸಂಸ್ಥೆಯ ಮಹಿಳಾ ಸಿಬ್ಬಂದಿಯ ಮೇಲೆ ನಡೆದ ಹಲ್ಲೆ ಖಂಡನೀಯವಾಗಿದ್ದು, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕ ವಲಯದಿಂದ ಒತ್ತಾಯ ಕೇಳಿಬರುತ್ತಿದೆ.
