ಗದಗ:
ಗದಗ ಜಿಲ್ಲಾ ನ್ಯಾಯಾಲಯಕ್ಕೆ ಆತ್ಮಾಹುತಿ ಬಾಂಬ್ ದಾಳಿ ನಡೆಸುವುದಾಗಿ ಬೆದರಿಕೆ ಸಂದೇಶವೊಂದು ಬಂದಿದೆ. ಗದಗ ಜಿಲ್ಲಾ ನ್ಯಾಯಾಧೀಶರ ಅಧಿಕೃತ ಇಮೇಲ್ ವಿಳಾಸಕ್ಕೆ ಈ ಬೆದರಿಕೆ ಸಂದೇಶ ಬಂದಿದ್ದು, ಮಧ್ಯಾಹ್ನ 1:55ರ ಸುಮಾರಿಗೆ ಆತ್ಮಾಹುತಿ ದಾಳಿಯ ಮೂಲಕ ಸ್ಫೋಟ ನಡೆಸುವುದಾಗಿ ಸಂದೇಶದಲ್ಲಿ ಉಲ್ಲೇಖಿಸಲಾಗಿದೆ.
🖋ವರದಿ;ಮಹಲಿಂಗೇಶ ಹಿರೇಮಠ.ಗದಗ
‘ವಿಕ್ರಂರಾಜಗುರುಔಟ್ ಲುಕ್ ಎಕ್ಸಪ್ರೆಸ್’ ಎಂಬ ಖಾತೆಯಿಂದ ಈ ಇಮೇಲ್ ಸಂದೇಶ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.
ಸಂದೇಶದ ಗಂಭೀರತೆಯನ್ನು ಪರಿಗಣಿಸಿದ ನ್ಯಾಯಾಲಯ ಆಡಳಿತವು ತಕ್ಷಣವೇ ಎಚ್ಚರಿಕೆ ಕ್ರಮಗಳನ್ನು ಕೈಗೊಂಡಿತು.
ಈ ಹಿನ್ನೆಲೆಯಲ್ಲಿ ಗ್ರಾಮೀಣ ಪೊಲೀಸ ಠಾಣೆ ಸಿಬ್ಬಂದಿ, ಸ್ಥಳಕ್ಕಾಗಿಮಿಸಿ ಎಚ್ಚರಿಕೆ ಕ್ರಮಗಳನ್ನ ಕೈಗೊಂಡಿದ್ದಾರೆ. ಅಲ್ಲದೇ ಕೋರ್ಟ್ನಲ್ಲಿದ್ದ ನ್ಯಾಯಾಧೀಶರು, ಸಿಬ್ಬಂದಿ ಹಾಗೂ ವಕೀಲರನ್ನು ಸುರಕ್ಷತಾ ದೃಷ್ಟಿಯಿಂದ ಹೊರಗೆ ಕರೆತಂದು, ನ್ಯಾಯಾಲಯದ ಕಲಾಪವನ್ನು ತಾತ್ಕಾಲಿಕವಾಗಿ ಮುಂದೂಡಲಾಯಿತು.
ನ್ಯಾಯಾಲಯ ಆವರಣ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಭದ್ರತೆಯನ್ನು ಹೆಚ್ಚಿಸಲಾಯಿತು. ಮಾಹಿತಿ ಪಡೆದ ತಕ್ಷಣ ಸ್ಥಳಕ್ಕೆ ಶ್ವಾನದಳ ಹಾಗೂ ಬಾಂಬ್ ಶೋಧನಾ ತಂಡ ಆಗಮಿಸಿ, ನ್ಯಾಯಾಲಯ ಆವರಣವನ್ನು ಸಂಪೂರ್ಣವಾಗಿ ಪರಿಶೀಲನೆ ನಡೆಸಿತು.
ಯಾವುದೇ ಸ್ಫೋಟಕ ವಸ್ತು ಪತ್ತೆಯಾಗದಿದ್ದರೂ, ಮುನ್ನೆಚ್ಚರಿಕೆ ಕ್ರಮವಾಗಿ ಸಂಪೂರ್ಣ ತಪಾಸಣೆ ನಡೆಸಲಾಯಿತು.
ಘಟನೆಯ ಮಾಹಿತಿ ಪಡೆದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ರೋಹನ್ ಜಗದೀಶ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರಕರಣದ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆದು, ಭದ್ರತಾ ವ್ಯವಸ್ಥೆ ಹಾಗೂ ತನಿಖಾ ಕ್ರಮಗಳ ಬಗ್ಗೆ ಸೂಚನೆಗಳನ್ನು ನೀಡಿದರು.
ಈ ಸಂಬಂಧ ಪೊಲೀಸರು ಇಮೇಲ್ ಕಳುಹಿಸಿದ ಖಾತೆಯ ಮೂಲ ಪತ್ತೆಹಚ್ಚಲು ತನಿಖೆ ಆರಂಭಿಸಿದ್ದು, ಸೈಬರ್ ತಜ್ಞರ ಸಹಾಯದೊಂದಿಗೆ ಪ್ರಕರಣದ ಎಲ್ಲ ಆಯಾಮಗಳನ್ನು ಪರಿಶೀಲಿಸಲಾಗುತ್ತಿದೆ. ಸಾರ್ವಜನಿಕರು ಆತಂಕಗೊಳ್ಳಬೇಕಾಗಿಲ್ಲ ಎಂದು ಪೊಲೀಸ್ ಇಲಾಖೆ ಮನವಿ ಮಾಡಿದ್ದು, ಯಾವುದೇ ಅನುಮಾನಾಸ್ಪದ ಮಾಹಿತಿ ಕಂಡುಬಂದಲ್ಲಿ ತಕ್ಷಣ ಪೊಲೀಸರಿಗೆ ತಿಳಿಸುವಂತೆ ಸೂಚಿಸಲಾಗಿದೆ.
