ಗದಗ:
ನಗರದ ಬೆಟಗೇರಿ ಪ್ರದೇಶದಲ್ಲಿರುವ (ಹೆಲ್ತ ಕ್ಯಾಂಪ್) ಸರ್ಕಾರಿ ಆಯುರ್ವೇದ ಆಸ್ಪತ್ರೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಡಿ–ಗ್ರೂಪ್ ನೌಕರನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು ಬೆಳಿಗ್ಗೆ ಬೆಳಕಿಗೆ ಬಂದಿದೆ.
ಮೃತನನ್ನು ಮೈಲಾರಲಿಂಗೇಶ್ವರ ರಂಗಪ್ಪ (35) ಎಂದು ಗುರುತಿಸಲಾಗಿದ್ದು, ಅವರು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಚಿಕ್ಕಮುದುರೆ ಗ್ರಾಮದ ನಿವಾಸಿ ಆಗಿದ್ದಾರೆ. ಹಲವು ವರ್ಷಗಳಿಂದ ಗದಗದ ಸರ್ಕಾರಿ ಆಯುರ್ವೇದ ಆಸ್ಪತ್ರೆಯಲ್ಲಿ ಹೊರಗುತ್ತಿಗೆ ನೌಕರನಾಗಿ ಸೇವೆ ಸಲ್ಲಿಸುತ್ತಿದ್ದರು ಎನ್ನಲಾಗಿದೆ.
ಆಸ್ಪತ್ರೆಯಲ್ಲಿಯೇ ಮೈಲಾರಲಿಂಗೇಶ್ವರ ರಂಗಪ್ಪ ಆತ್ಮಹತ್ಯೆ ಮಾಡಿಕೊಂಡಿರುವುದು ಸಿಬ್ಬಂದಿಗೆ ಗಮನಕ್ಕೆ ಬಂದ ತಕ್ಷಣವೇ ವಿಷಯ ಪೊಲೀಸ್ ಇಲಾಖೆಗೆ ತಿಳಿಸಲಾಗಿದೆ. ಮಾಹಿತಿ ಪಡೆದ ತಕ್ಷಣ ಬೆಟಗೇರಿ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಆತ್ಮಹತ್ಯೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ವೈಯಕ್ತಿಕ ಸಮಸ್ಯೆಗಳೇ ಅಥವಾ ಉದ್ಯೋಗ ಸಂಬಂಧಿತ ಒತ್ತಡವೇ ಆತ್ಮಹತ್ಯೆಗೆ ಕಾರಣವೇ ಎಂಬುದರ ಬಗ್ಗೆ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಕೈಗೊಂಡಿದ್ದಾರೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಸಂಬಂಧಿಕರಿಗೆ ಮಾಹಿತಿ ನೀಡಲಾಗಿದೆ. ಈ ಘಟನೆ ಆಸ್ಪತ್ರೆ ಸಿಬ್ಬಂದಿ ಹಾಗೂ ಸ್ಥಳೀಯರಲ್ಲಿ ಆತಂಕ ಮೂಡಿಸಿದ್ದು, ಹೊರಗುತ್ತಿಗೆ ನೌಕರರ ಭದ್ರತೆ ಮತ್ತು ಮಾನಸಿಕ ಒತ್ತಡದ ಕುರಿತು ಚರ್ಚೆಗೆ ಕಾರಣವಾಗಿದೆ.
ಇನ್ನು ಇತ್ತೀಚೆಗೆ ಇದೇ ಆಸ್ಪತ್ರೆಯ ಅಧಿಕಾರಿವರ್ಗ ಔಷಧಿ ಟೆಂಡರ್ ನೀಡುವ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರದ ಆರೋಪದಡಿ ಸಾಕಷ್ಟು ಸುದ್ದಿಯಾಗಿತ್ತು. ಅದಾದ ಕೆಲವೇ ದಿನಗಳಲ್ಲಿ ಈ ಘಟನೆ ನಡೆದಿರುವದು ಹಲವು ಚರ್ಚೆಗಳಿಗೆ ಕಾರಣವಾಗಿದೆ.
ಘಟನೆ ಬೆಟಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದ್ದು, ಈ ಸಂಬಂಧ ತನಿಖೆ ಕೈಗೊಂಡಿದ್ದು ಮುಂದಿನ ತನಿಖೆ ಮುಂದುವರಿದಿದೆ.
