ಗದಗ (ಗಜೇಂದ್ರಗಡ):
ಗದಗ ಜಿಲ್ಲೆಯ ಗಜೇಂದ್ರಗಡ ತಾಲ್ಲೂಕಿನ ಉಣಚಗೇರಿ ಗ್ರಾಮದಲ್ಲಿ ಕೋಳಿ ಫಾರ್ಮ್ ವಿಚಾರವಾಗಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣಗೊಂಡ ಘಟನೆ ಮಂಗಳವಾರ ನಡೆದಿದೆ. ಕಳೆದ 15 ವರ್ಷಗಳಿಂದ ಗ್ರಾಮದ ಪಕ್ಕದಲ್ಲೇ ಕಾರ್ಯನಿರ್ವಹಿಸುತ್ತಿದ್ದ ಕೋಳಿ ಫಾರ್ಮ್ನಿಂದ ತೀವ್ರ ದುರ್ವಾಸನೆ ಹಾಗೂ ಅನಾರೋಗ್ಯ ಸಮಸ್ಯೆ ಉಂಟಾಗುತ್ತಿದೆ ಎಂದು ಆರೋಪಿಸಿ, ರೊಚ್ಚಿಗೆದ್ದ ಗ್ರಾಮಸ್ಥರು ಏಕಾಏಕಿ ಫಾರ್ಮ್ಗೆ ನುಗ್ಗಿ ನೂರಾರು ಕೋಳಿ ಹಾಗೂ ಟ್ರೇಗಟ್ಟಲೆ ಮೊಟ್ಟೆಗಳನ್ನು ಹೊತ್ತೊಯ್ದಿದ್ದಾರೆ.
ಕೋಳಿ ಫಾರ್ಮ್ ಸ್ಥಳಾಂತರಿಸುವಂತೆ ತಹಶಿಲ್ದಾರರು, ಪುರಸಭೆ ಅಧಿಕಾರಿಗಳು ಸೇರಿದಂತೆ ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಗ್ರಾಮಸ್ಥರು ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಳ್ಳಲಾಗಿರಲಿಲ್ಲ. ಇದರಿಂದ ಅಸಮಾಧಾನಗೊಂಡ ಗ್ರಾಮಸ್ಥರು, ಮಕ್ಕಳು, ಮಹಿಳೆಯರು, ಯುವಕರು ಸೇರಿ ನೂರಾರು ಸಂಖ್ಯೆಯಲ್ಲಿ ಜಮಾಯಿಸಿ ಫಾರ್ಮ್ಗೆ ನುಗ್ಗಿದ್ದಾರೆ.
ಘಟನೆಯ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿದರೂ, ಜನಸಾಗರದ ಎದುರು ಪರಿಸ್ಥಿತಿ ನಿಯಂತ್ರಣಕ್ಕೆ ತರುವಲ್ಲಿ ಅಸಹಾಯಕ ಸ್ಥಿತಿಗೆ ತಲುಪಿದ್ದು, ಕೇವಲ ಮುಖಪ್ರೇಕ್ಷಕರಾಗಿ ನಿಂತಿರುವುದು ಕಂಡುಬಂದಿತು. ಈ ವೇಳೆ ಲಕ್ಷಾಂತರ ರೂಪಾಯಿ ಮೌಲ್ಯದ ಕೋಳಿ ಹಾಗೂ ಮೊಟ್ಟೆಗಳನ್ನು ಗ್ರಾಮಸ್ಥರು ಕೊಂಡೊಯ್ದಿದ್ದಾರೆ ಎನ್ನಲಾಗಿದೆ.
ಉಣಚಗೇರಿ ಗ್ರಾಮಸ್ಥರು ಹಾಗೂ ಕೋಳಿ ಫಾರ್ಮ್ ಮಾಲೀಕರ ನಡುವೆ ಈ ಹಿಂದೆಯೂ ಹಲವು ಬಾರಿ ಸಂಘರ್ಷ ನಡೆದಿದ್ದು, ಈ ಸಂಬಂಧ ಗಜೇಂದ್ರಗಡ ತಹಶಿಲ್ದಾರರು ಹಾಗೂ ಪುರಸಭೆ ಅಧಿಕಾರಿಗಳ ಗಮನಕ್ಕೂ ವಿಷಯ ತರಲಾಗಿತ್ತು. ಅಲ್ಲದೆ, ಕೋರ್ಟ್ ಮೆಟ್ಟಿಲೇರಿದ ಪ್ರಯತ್ನವೂ ನಡೆದಿತ್ತು ಎನ್ನಲಾಗಿದೆ.
ಘಟನೆಯ ಬಳಿಕ ಗಜೇಂದ್ರಗಡ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಂದಿನ ಕ್ರಮ ಕುರಿತು ಪರಿಶೀಲನೆ ಮುಂದುವರಿದಿದೆ. ಕೋಳಿ ಫಾರ್ಮ್ ಮಾಲೀಕರು ಮತ್ತು ಗ್ರಾಮಸ್ಥರ ನಡುವಿನ ವಿವಾದ ಮುಂದಿನ ದಿನಗಳಲ್ಲಿ ಯಾವ ತಿರುವು ಪಡೆಯಲಿದೆ ಎಂಬುದು ಕಾದು ನೋಡಬೇಕಾಗಿದೆ.
ಕೋಳಿ ಫಾರ್ಮ್ನಲ್ಲಿ ಏನಾಯ್ತು? ಗ್ರಾಮಸ್ಥರು ಏಕಾಏಕಿ ನುಗ್ಗಿದ ಕಾರಣವೇನು?
461