ಶಿರಹಟ್ಟಿಯಲ್ಲಿ ಲೋಕಾಯುಕ್ತ ದಾಳಿ – 2.17 ಕೋಟಿ ಅನುದಾನದ ದುರುಪಯೋಗ ಪ್ರಕರಣದಲ್ಲಿ ದಾಖಲೆಗಳು ವಶ
ಶಿರಹಟ್ಟಿ:
ಶಿರಹಟ್ಟಿ ತಾಲ್ಲೂಕಿನಲ್ಲಿ ಭ್ರಷ್ಟಾಚಾರದ ಗಂಭೀರ ಆರೋಪಗಳು ಬೆಳಕಿಗೆ ಬಂದ ಹಿನ್ನಲೆಯಲ್ಲಿ ಲೋಕಾಯುಕ್ತ ಪೊಲೀಸರು ಮಂಗಳವಾರ ಬೆಳಿಗ್ಗೆ ಅಚ್ಚರಿ ದಾಳಿ ನಡೆಸಿ, ಹಿರಿಯ ಪಶು ವೈದ್ಯಾಧಿಕಾರಿ ಡಾ. ನಿಂಗಪ್ಪ ಓಲೇಕಾರ ಅವರ ಮನೆ ಹಾಗೂ ಕಚೇರಿಗಳಲ್ಲಿ ಪರಿಶೀಲನೆ ನಡೆಸಿದ್ದಾರೆ. ದಾಳಿಯ ಸಂದರ್ಭದಲ್ಲಿ ಅಧಿಕಾರಿಗಳು ಮಹತ್ವದ ಹಲವು ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
ತಾಲ್ಲೂಕು ಪಂಚಾಯಿತಿಗೆ 2023–24ನೇ ಸಾಲಿನ ರಾಜ್ಯ ಹಣಕಾಸು ಆಯೋಗದ ನಿರ್ಬಂಧಿತ ಅನುದಾನದ ಅಡಿಯಲ್ಲಿ ಒಟ್ಟು ₹2 ಕೋಟಿ 17 ಲಕ್ಷ ಮಂಜೂರಾಗಿದ್ದು, ಅದರಲ್ಲಿ ಸುಮಾರು ₹1 ಕೋಟಿ 97 ಲಕ್ಷ ಮೊತ್ತದ ದುರ್ಬಳಕೆ ನಡೆದಿರುವುದಾಗಿ ಲೋಕಾಯುಕ್ತ ಇಲಾಖೆಗೆ ದೊರೆತ ದೂರುಗಳ ಪ್ರಕಾರ ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ವಿರುದ್ಧ ದಾಳಿ ನಡೆಸಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿ, ಶಿರಹಟ್ಟಿ ತಾಲೂಕು ಪಂಚಾಯಿತಿ ಪ್ರಭಾರ ಇಒ ಆಗಿ ಪೂರ್ವದಲ್ಲಿ ಸೇವೆ ಸಲ್ಲಿಸಿದ್ದ ಡಾ. ನಿಂಗಪ್ಪ ಓಲೆಕಾರ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗದ ಕಿರಿಯ ಇಂಜಿನಿಯರ್ ಆರಿಫ್ ಹಿರೇಹಾಳ (ಪ್ರಸ್ತುತ ಧಾರವಾಡದಲ್ಲಿ ಸಹಾಯಕ ಇಂಜಿನಿಯರ್), ಗುತ್ತಿಗೆದಾರರು ಗಂಗಪ್ಪ ಬಸವಣ್ಣೆಪ್ಪ ತಡಹಾಳ ಹಾಗೂ ವಿಜಯನಗರದ ಪ್ರದೀಪ್ ಕುಮಾರ್ ಹಿರೇಮಠ ವಿರುದ್ಧ ಗದಗ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಈಗಾಗಲೇ ಪ್ರಕರಣ ದಾಖಲಾಗಿತ್ತು.
ಲೋಕಾಯುಕ್ತ ಪೊಲೀಸ್ ಎಸ್‌ಪಿ ಎಸ್.ಟಿ. ಸಿದ್ದಲಿಂಗಪ್ಪ ಅವರ ನಿರ್ದೇಶನದಲ್ಲಿ, ಗದಗ ಲೋಕಾಯುಕ್ತ ಡಿವೈಎಸ್ಪಿ ವಿಜಯ ಬಿರಾದಾರ, ಇನ್ಸ್‌ಪೆಕ್ಟರ್‌ಗಳಾದ ಪರಮೇಶ್ವರ್ ಜಿ. ಕವಟಗಿ, ಎಸ್.ಎಸ್. ತೇಲಿ, ಸಿಬ್ಬಂದಿಗಳಾದ ಎಂ.ಎಂ. ಅಯ್ಯನಗೌಡ, ವಿ.ಎಸ್. ದೀಪಾಲಿ, ಜೊತೆಗೆ ಧಾರವಾಡ–ಬೆಳಗಾವಿ ಲೋಕಾಯುಕ್ತ ತಂಡಗಳು ದಾಳಿಯಲ್ಲಿ ಪಾಲ್ಗೊಂಡವು. ದಾಳಿಯ ವೇಳೆ ಅನುದಾನ ಸಂಬಂಧಿತ ಕಡತಗಳು, ಬಿಲ್‌ಗಳು ಮತ್ತು ಅಧಿಕೃತ ದಾಖಲೆಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಅನುದಾನದ ದುರುಪಯೋಗದ ಆರೋಪಗಳು ಗಂಭೀರ ಸ್ವರೂಪದ್ದಾಗಿರುವುದರಿಂದ ಲೋಕಾಯುಕ್ತ ಪೊಲೀಸರು ಸಂಪೂರ್ಣ ತನಿಖೆಗೆ ಕೈ ಹಾಕಿದ್ದು, ಶೀಘ್ರದಲ್ಲೇ ಆರೋಪಗಳ ನಿಜಾಸ್ತಿ ಹೊರಬರುವ ನಿರೀಕ್ಷೆ ವ್ಯಕ್ತವಾಗಿದೆ. ತಾಲ್ಲೂಕಿನ ಸಾರ್ವಜನಿಕರು ಈ ಬೆಳವಣಿಗೆಗೆ ಬೆಂಬಲ ವ್ಯಕ್ತಪಡಿಸಿದ್ದು, ಸರಕಾರಿ ಅನುದಾನದ ದುರುಪಯೋಗಕ್ಕೆ ವಿರುದ್ಧವಾಗಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
