ಲಕ್ಷ್ಮೇಶ್ವರ(ಗದಗ): ಪಟ್ಟಣದಲ್ಲಿ ಕಳೆದ ೧೫ ದಿನಗಳಿಂದ ಮೆಕ್ಕೆಜೋಳದ ಬೆಂಬಲ ಬೆಲೆ ಖರೀದಿ ಕೇಂದ್ರಕ್ಕಾಗಿ ಸಮಗ್ರ ರೈತರ ಒಕ್ಕೂಟ ಮತ್ತು ರೈತ ಸಂಘಟನೆಗಳು ನಡೆಸುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹ ಸರಕಾರದ ಯಾವುದೇ ಕ್ರಮವಾಗದಿರುವದನ್ನು ಖಂಡಿಸಿ ಶನಿವಾರ ರಾತ್ರಿ ವೇದಿಕೆಯಿಂದ ರಸ್ತೆಗೆ ಇಳಿದು ಡಾ.ಕುಮಾರ ಮಹಾರಾಜ ನೇತೃತ್ವದಲ್ಲಿ ಭಜನೆ ಮಾಡುವ ಮುಖಾಂತರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ವರದಿ: ಪರಮೇಶ ಎಸ್ ಲಮಾಣಿ
ತಡರಾತ್ರಿ ಕರ್ನಾಟಕ ಸರಕಾರದ ಮುಖ್ಯ ಕಾರ್ಯದರ್ಶಿ ಆದೇಶದ ಪ್ರಕಾರ ಶಾಲಿನಿ ರಜನೀಶ್ ಅವರು ಸೋಮವಾರದಿಂದ ಖರೀದಿ ಕೇಂದ್ರ ಆರಂಭಿಸುವಂತೆ ನೀಡಿದ ಆದೇಶ ಪತ್ರವನ್ನು ಲಕ್ಷ್ಮೇಶ್ವರ ತಹಶೀಲ್ದಾರ್ ಧನಂಜಯ ಮುಖಾಂತರ ತಲುಪಿಸಿದರು. ಆದರೆ ಆದೇಶ ಪತ್ರದಲ್ಲಿ ಲಕ್ಷ್ಮೇಶ್ವರ ತಾಲೂಕಿನಲ್ಲಿ ಖರೀದಿ ಕೇಂದ್ರಗಳ ಹೆಸರು ನಮೂದಿಸದಿರುವದನ್ನು ಗಮನಿಸಿದ ಪೂಜ್ಯರು ಹಾಗೂ ಪ್ರತಿಭಟನಾನಿರತರು ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡು ರಾತ್ರಿಯೆ ಶಿಗ್ಲಿ ನಾಕಾದಲ್ಲಿ ಪಾಳಾ-ಬದಾಮಿ ರಸ್ತೆ ಬಂದ್ ಮಾಡಿ ರಸ್ತೆಯಲ್ಲಿಯೇ ಪ್ರತಿಭಟನಾ ನಿರತರು ಭಜನೆ ಮಾಡಲು ಮುಂದಾದರು.
ನಂತರ ಮಧ್ಯರಾತ್ರಿ ಗದಗ ಜಿಲ್ಲೆಯ ಅಪರ ಜಿಲ್ಲಾಧಿಕಾರಿ ದುರುಗೇಶ ರುದ್ರಾಕ್ಷಿ ಮತ್ತು ಉಪವಿಭಾಗಾಧಿಕಾರಿ ಗಂಗಪ್ಪ ಎಂ. ಹಾಗೂ ತಹಸೀಲ್ದಾರ್ ಧನಂಜಯ, ಡಿಎಸ್ಪಿ ಖಾರ್ದಿ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಉಪವಾಸ ನಿರತ ಶ್ರೀಗಳ ಹಾಗೂ ರೈತರ ಮನವೊಲಿಸಲು ಪ್ರಯತ್ನಿಸಿದರು.
ಇದಕ್ಕೂ ಬಗ್ಗದ ಪ್ರತಿಭಟನಾಕಾರರು ಖರೀದಿ ಕೇಂದ್ರ ಆರಂಭ ಮಾಡುತ್ತೇವೆ ಎನ್ನುವ ಲಿಖಿತ ಆದೇಶವನ್ನು ನೀಡಿದರೆ ಮಾತ್ರ ರಸ್ತೆಯಿಂದ ಹೋಗುತ್ತೇವೆ ಇಲ್ಲದಿದ್ದರೆ ಪ್ರತಿಭಟನೆ ಇಲ್ಲಿಯೇ ಮುಂದುವರೆಯುತ್ತದೆ ಎಂದು ಪಟ್ಟುಹಿಡಿದರು. ರೈತರ ಪ್ರತಿಭಟನೆಗೆ ಮಣಿದು ಅಧಿಕಾರಿಗಳು ಲಕ್ಷ್ಮೇಶ್ವರ ತಹಶೀಲ್ದಾರ ಧನಂಜಯ ಇವರಿಂದ ಲಿಖಿತ ಪತ್ರ ನೀಡಿದ ನಂತರ ಅಹೋರಾತ್ರಿ ಧರಣಿಯ 16ನೇ ದಿನದ ಬೆಳಗಿನ ಜಾವ 05:00 ಘಂಟೆಗೆ ರಸ್ತೆತಡೆ ತೆರವುಗೊಳಿಸಲಾಯಿತು.
ಇದು ನಮ್ಮ ಗೆಲುವು ಅಲ್ಲ ನಾಡಿನ ರೈತರ ಗೆಲುವು ಮೆಕ್ಕೆಜೋಳ ಬೆಳೆದ ರೈತರ ಕಣ್ಣಿರಿನ ಪ್ರತಿಫಲ ಇದಾಗಿದೆ ಸರ್ಕಾರಕ್ಕೆ ನಮ್ಮ ಹೋರಾಟದ ವೇದಿಕೆಯಿಂದ ಹಾಗೂ ನಾಡಿನ ರೈತರಿಂದ ಧನ್ಯವಾದಗಳು ಎಂದು ಡಾ.ಕುಮಾರ ಮಹಾರಾಜ ಮತ್ತು ಮಂಜುನಾಥ ಮಾಗಡಿ ಹೇಳಿದರು.
ಈ ವೇಳೆ ತಹಸೀಲ್ದಾರ ಧನಂಜಯ ಎಂ., ಕಂದಾಯ ಅಧಿಕಾರಿ ಎಂ.ಎ.ನಧಾಪ ಹಾಗೂ ಅಧಿಕಾರಿಗಳು, ಕುಂದಗೋಳದ ಬಸವಣಜ್ಜಾರು, ಶ್ರೀಗಳು ಮಂಜುನಾಥ ಮಾಗಡಿ, ನಾಗರಾಜ ಚಿಂಚಲಿ, ಸುರೇಶ ಹಟ್ಟಿ, ಶಿವಾನಂದ ಲಿಂಗಶೆಟ್ಟಿ, ಚಂದ್ರು ಮಾಗಡಿ, ಪ್ರಕಾಶ ಕೊಂಚಿಗೇರಿಮಠ, ಟಾಕಪ್ಪ ಸಾತಪೂತೆ, ನೀಲಪ್ಪ ಶರಸೂರಿ, ಪ್ರಕಾಶ ಮೇವುಂಡಿ, ಖಾನಸಾಬ ಸೂರಣಗಿ, ಜ್ಞಾನೋಬಾ ಬೋಮಲೆ, ಮಲ್ಲೇಶಪ್ಪ ವಡ್ಡರ, ಬಸವರಾಜ ಹಿರೇಮನಿ, ಭರಮಪ್ಪ ಶರಸೂರಿ, ದಾದಾಪೀರ ಮುಚ್ಚಾಲೆ ಸೇರಿದಂತೆ ನೂರಾರು ರೈತರು ಇದ್ದರು.
