ವರದಿ : ಪರಮೇಶ ಎಸ್ ಲಮಾಣಿ
ಲಕ್ಷ್ಮೇಶ್ವರ: ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ಅವರು ಮೆಕ್ಕೆಜೋಳ ಖರೀದಿ ಕೇಂದ್ರ ಪ್ರಾರಂಭಿಸುವ ಕುರಿತು ಸಿಎಂ ಸಿದ್ದರಾಮಯ್ಯನವರ ಜೊತೆ ಸುದೀರ್ಘವಾಗಿ ಚರ್ಚಿಸಿ ಮಾರ್ಕೆಟ್ ಫೆಡರೇಶನ್ ಜೊತೆ ಮಾತನಾಡಿ ಮುಂದಿನ ಎರಡು ಅಥವಾ ಮೂರು ದಿನಗಳಲ್ಲಿ ಜಿಲ್ಲಾಧಿಕಾರಿಗಳೇ ಬಂದು ಲಕ್ಷ್ಮೇಶ್ವರದಲ್ಲಿ ಕೇಂದ್ರ ಉದ್ಘಾಟಿಸಲಿದ್ದಾರೆ ಆದ್ದರಿಂದ ಉಪವಾಸ ಸತ್ಯಾಗ್ರಹವನ್ನು ಕೈ ಬಿಡಿ ಎಂದು ಅಪರ ಜಿಲ್ಲಾಧಿಕಾರಿ ಡಾ.ದುರಗೇಶ ರುದ್ರಾಕ್ಷಿ. ಉಪವಿಭಾಗಾಧಿಕಾರಿ ಗಂಗಪ್ಪ ಎಂ ಮತ್ತೆ ಉಪವಾಸ ಸತ್ಯಾಗ್ರಹ ಪ್ರಾರಂಬಿಸಿರುವ ಆದರಳ್ಳಿ ಗವಿಮಠದ ಡಾ.ಕುಮಾರ ಮಹಾರಾಜರ ಹಾಗೂ ಇತರರಿಗೆ ಮನವಿ ಮಾಡಿದರು.
ಪಟ್ಟಣದಲ್ಲಿ ಕಳೆದ ೧೫ ದಿನಗಳಿಂದ ಮೆಕ್ಕೆಜೋಳದ ಬೆಂಬಲ ಬೆಲೆ ಖರೀದಿ ಕೇಂದ್ರಕ್ಕಾಗಿ ಸಮಗ್ರ ರೈತರ ಒಕ್ಕೂಟ ಮತ್ತು ರೈತ ಸಂಘಟನೆಗಳು ನಡೆಸುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹ ಸರಕಾರದ ಯಾವುದೇ ಕ್ರಮವಾಗದಿರುವದನ್ನು ಪ್ರತಿಭಟಿಸಿ ಹೋರಾಟ ಮುಂದುವರೆದಿದ್ದು, ಆರಂಭದಲ್ಲಿ ೫-೬ ದಿನಗಳ ಕಾಲ ಆಮರಣ ಉಪವಾಸ ಕೈಗೊಂಡು ತೀವ್ರ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಕುಮಾರ ಮಹಾರಾಜರು ಶನಿವಾರದಿಂದ ಮತ್ತೆ ವೇದಿಕೆಯಲ್ಲಿ ಉಪವಾಸ ಸತ್ಯಾಗ್ರಹ ಕೈಗೊಂಡಿರುವದರಿಂದ ಸರಕಾರದ ಆತಂಕ ಎದುರಾಗಿದ್ದು ಈ ಹಿನ್ನಲೆಯಲ್ಲಿ ಶನಿವಾರ ಸಂಜೆ ಅಪರ ಜಿಲ್ಲಾಧಿಕಾರಿ ಮತ್ತು ಉಪವಿಭಾಗಾಧಿಕಾರಿಗಳು ಹೋರಾಟದ ಸ್ಥಳಕ್ಕೆ ಆಗಮಿಸಿ ಉಪವಾಸ ಸತ್ಯಾಗ್ರಹ ಕೈಬಿಡುವಂತೆ ಮನವಿ ಮಾಡಿದರು.
ಈ ವೇಳೆ ಅಧಿಕಾರಿಗಳ ಮಾತಿಗೆ ತೃಪ್ತರಾಗದ ರೈತರು ಕಳೆದ ೧೫ ದಿನಗಳಿಂದ ಅಧಿಕಾರಿಗಳ ಮಾತಿಗೆ ಕಟ್ಟುಬಿದ್ದು ಶಾಂತಿಯುತ ಮತ್ತು ಸಮಾಧಾನದಿಂದ ಹೋರಾಟ ನಡೆಸಿದ್ದೇವೆ, ಸರಕಾರದಿಂದ ಉತ್ತಮ ಸಂದೇಶ ಬರಬಹುದು ಎನ್ನುತ್ತಾ ಉತ್ತರಕ್ಕಾಗಿ ಕಾಯ್ದು ಸುಸ್ತಾಗಿದ್ದೇವೆ, ಸರಿಯಾದ ದಿನವನ್ನು ನಿಗದಿ ಪಡಿಸಿ, ಸೋಮವಾರದೊಳಗೆ ಪ್ರಾರಂಭವಾಗದಿದ್ದಲ್ಲಿ ಮಂಗಳವಾರದಿಂದ ಹೋರಾಟದ ಗತಿ ಬದಲಾಗಲಿದೆ, ಆದರೆ ಖರೀದಿ ಕೇಂದ್ರ ಪ್ರಾರಂಬವಾಗದ ಹೊರತು ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಪಟ್ಟು ಹಿಡಿದರು.
ಮಂಜುನಾಥ ಮಾಗಡಿ, ಪೂರ್ಣಾಜಿ ಖರಾಟೆ, ನಾಗರಾಜ ಚಿಂಚಲಿ ಮಾತನಾಡಿ ರೈತರ ಹೋರಾಟವನ್ನು ಹಗುರವಾಗಿ ಪರಿಗಣಿಸಬೇಡಿ, ನಿತ್ಯ ರೈತರು ಎತ್ತು ಚಕ್ಕಡಿ, ಗೋವಿನ ಜೋಳದ ತೆನೆಗಳೊಂದಿಗೆ ರಸ್ತೆ ತಡೆ ಮಾಡಿ ಬಂದ್ ಮಾಡುತ್ತಾ ಉಪವಾಸ ಸಾಯುತ್ತಿರುವ ಸುದ್ದಿ ಸಂಬಂಧಿಸಿದವರಿಗೆ ತಲುಪುತ್ತಿಲ್ಲವೆ ಎಂದು ಪ್ರಶ್ನಿಸಿದರು. ಸರಕಾರ ಕೂಡಲೇ ಖರೀದಿ ಕೇಂದ್ರ ಪ್ರಾರಂಭಿಸಲಿ ಜೊತೆಗೆ ಅತಿವೃಷ್ಟಿಯ ಹಾನಿ ಪರಿಹಾರವನ್ನು ಕೂಡಲೇ ರಾಜ್ಯದ ಬೊಕ್ಕಸದಿಂದ ನೀಡಲಿ, ಖರೀದಿ ಕೇಂದ್ರ ಇದೇ ವೇದಿಕೆಯಲ್ಲಿ ಪ್ರಾರಂಭವಾಗದ ಹೊರತು ಹೋರಾಟ ನಿಲ್ಲುವದಿಲ್ಲ ಎಂದು ಸ್ಪಷ್ಟಪಡಿಸಿದರು.
ಈ ವೇಳೆ ತಹಸೀಲ್ದಾರ ಧನಂಜಯ ಎಂ., ಕಂದಾಯ ಅಧಿಕಾರಿ ಎಂ.ಎ.ನಧಾಪ ಹಾಗೂ ಅಧಿಕಾರಿಗಳು, ನಿಂಗಪ್ಪ ಭಂಡಾರಿ, ಈರಣ್ಣ ಗದ್ದಿ, ವಿಶ್ವನಾಥ ತಾಮ್ರಗುಂಡಿ, ಜಗದೀಶಗೌಡ ಪಾಟೀಲ. ಮಂಜುನಾಥ ಉಪ್ಪಾರ, ಸೋಮಣ್ಣ ಡಾಣಗಲ್, ರಮೇಶ ಹಂಗನಕಟ್ಟಿ, ಸುರೇಶ ಹಟ್ಟಿ, ಶಿವಾನಂದ ಲಿಂಗಶೆಟ್ಟಿ, ಟಾಕಪ್ಪ ಸಾತಪೂತೆ, ನೀಲಪ್ಪ ಶರಸೂರಿ, ಪ್ರಕಾಶ ಮೇವುಂಡಿ, ಖಾನಸಾಬ ಸೂರಣಗಿ, ಜ್ಞಾನೋಬಾ ಬೋಮಲೆ, ಮಲ್ಲೇಶಪ್ಪ ವಡ್ಡರ, ಬಸವರಾಜ ಹಿರೇಮನಿ, ಭರಮಪ್ಪ ಶರಸೂರಿ, ದಾದಾಪೀರ ಮುಚ್ಚಾಲೆ ಸೇರಿದಂತೆ ನೂರಾರು ರೈತರು ಇದ್ದರು.
ಕೋಟ್ :
ವೇದಿಕೆಯಲ್ಲಿ ಉಪವಾಸ ಸತ್ಯಾಗ್ರಹ ಪ್ರಾರಂಭಿಸಿದ ಕೂಡಲೇ ಅಧಿಕಾರಿಗಳು ಸ್ಥಳಕ್ಕೆ ಓಡಿ ಬರುತ್ತಾರೆ, ಬರಿ ಭರವಸೆ ನೀಡಿ ಹೋಗುವದಾದರೆ ಬೇಡ, ಸೋಮವಾರ ಅಥವಾ ಮಂಗಳವಾರ ಖರೀದಿ ಕೇಂದ್ರ ಪ್ರಾರಂಭಿಸುವ ಕುರಿತು ನಿರ್ಧಿಷ್ಟ ವೇಳೆ ನಿರ್ಧರಿಸಿ ಅಂದರೆ ಹೋರಾಟ ಇದೇ ರೀತಿ ಇರುತ್ತದೆ, ಆದರೆ ಪ್ರಾರಂಭವಾಗದಿದ್ದಲ್ಲಿ ಹೋರಾಟ ಬೇರೆ ರೂಪ ಪಡೆದುಕೊಳ್ಳುತ್ತದೆ, ಮುಂದೆ ನಡೆಯುವ ಅಹಿತಕರ ಘಟನೆಗಳಿಗೆ ಜಿಲ್ಲಾ ಉಸ್ತುವಾರಿಗಳು, ಜಿಲ್ಲಾಧಿಕಾರಿಗಳು ನೇರ ಹೊಣೆಯಾಗುತ್ತಾರೆ, ಪ್ರಾಣಹೋದರೂ ಚಿಂತೆ ಇಲ್ಲ ಉಪವಾಸ ಸತ್ಯಾಗ್ರಹದಿಂದ ಹಿಂದೆ ಸರಿಯುವದಿಲ್ಲ.
ಡಾ.ಕುಮಾರ ಮಹಾರಾಜರು.
ಉಪವಾಸ ನಿರತ ಪರಮಪೂಜ್ಯರು.
