ಗದಗ: ರಾಜ್ಯಾದ್ಯಂತ ಜಾತಿ ಗಣತಿ ಸಮೀಕ್ಷೆ ಪ್ರಾರಂಭಗೊಂಡಿದ್ದು, ಶಿಕ್ಷಕರನ್ನೇ ಈ ಮಹತ್ತರ ಕಾರ್ಯಕ್ಕೆ ನಿಯೋಜಿಸಲಾಗಿದೆ. ಆದರೆ, ಈ ಸಮೀಕ್ಷೆಯಲ್ಲಿ ತೊಡಗಿರುವ ಶಿಕ್ಷಕರು ಅನೇಕ ತಾಂತ್ರಿಕ ಸವಾಲುಗಳನ್ನು ಎದುರಿಸುತ್ತಿದ್ದು, ಅವರ ಕೆಲಸ ನುಂಗಲಾರದ ಬಿಸಿತುಪ್ಪವಾಗಿ ಪರಿಣಮಿಸಿದೆ. ಇತ್ತ ಗದಗ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ಅವರು “ಜನಗಣತಿ ಕಾರ್ಯವನ್ನು ಸಮರ್ಪಕವಾಗಿ ಮಾಡದಿದ್ದರೆ ಅಮಾನತ್ತು ಮಾಡುತ್ತೇನೆ” ಎಂಬ ಖಡಕ್ ಎಚ್ಚರಿಕೆ ನೀಡಿದ್ದು, ಶಿಕ್ಷಕರಲ್ಲಿ ಆತಂಕವನ್ನು ಉಂಟುಮಾಡಿದೆ.
ವರದಿ: ಮಹಲಿಂಗೇಶ್ ಹಿರೇಮಠ.ಗದಗ.
ಡಿಸಿಯಿಂದ ಖಡಕ್ ಎಚ್ಚರಿಕೆ
ನಿನ್ನೆ ಸಂಜೆ ನಡೆದ ಗಣತಿದಾರರ ಗ್ರೂಪ್ ಕಾಲ್ನಲ್ಲಿ ಡಿಸಿ ಸಿ.ಎನ್. ಶ್ರೀಧರ ಕಿಡಿಕಾರಿದ್ದು, “ಮೊದಲ ಎರಡು ದಿನಗಳಲ್ಲಿ ನಮ್ಮ ಜಿಲ್ಲೆ ಮುಂಚಿತ ಸ್ಥಾನದಲ್ಲಿತ್ತು. ಆದರೆ ಇಂದು 5ನೇ-6ನೇ ಸ್ಥಾನಕ್ಕೆ ಬಿದ್ದಿದೆ. ಕೆಲವರು ಸೋಂಬೇರಿಗಳಂತೆ ವರ್ತಿಸುತ್ತಿದ್ದಾರೆ. ಒಬ್ಬೊಬ್ಬರಿಗೆ 80-90 ಮನೆಗಳ ಸಮೀಕ್ಷೆ ನೀಡಲಾಗಿದೆ. ನಾಲ್ಕು ದಿನಗಳಲ್ಲಿ ಕಾರ್ಯ ಮುಗಿಸದಿದ್ದರೆ ಸಸ್ಪೆಂಡ್ ಮಾಡುವೆ” ಎಂದು ಎಚ್ಚರಿಸಿದ್ದಾರೆ.
ಇದೇ ವೇಳೆ, “ಹೆಚ್ಚಿನ ಕೆಲಸ ಕೇಳಲ್ಲ, ಕೊಡಲ್ಲ. ಆದರೆ ನೀಡಿದ ಕಾರ್ಯವನ್ನು ಶಿಸ್ತುಬದ್ಧವಾಗಿ ಮಾಡಿ. ಇಂದು 60 ಜನ ಲಾಗಿನ್ ಆಗಿಲ್ಲ, 150 ಜನ ಮಾತ್ರ ಲಾಗಿನ್ ಆಗಿದ್ದಾರೆ. ಬೆಳಗ್ಗೆ 9 ರೊಳಗೆ ಎಲ್ಲ ಸಿಬ್ಬಂದಿಯೂ ಲಾಗಿನ್ ಆಗಿ ಕನಿಷ್ಠ ಎರಡು ಮನೆಗಳ ಸಮೀಕ್ಷೆ ಪೂರ್ಣಗೊಳಿಸಬೇಕು. ಸರ್ಕಾರಕ್ಕೆ ನಾವು ಎರಡು ದಿನ ಮುಂಚಿತವಾಗಿ ಕಾರ್ಯ ಮುಗಿಸುತ್ತೇವೆ ಎಂದು ಮಾತು ಕೊಟ್ಟಿದ್ದೇವೆ. ಸಮಸ್ಯೆ ಇದ್ದರೆ ಹೇಳಿ, ನಾನು ಪರಿಹಾರ ಮಾಡುತ್ತೇನೆ. ಆದರೆ ಕೆಲಸಕ್ಕೆ ದ್ರೋಹ ಮಾಡಿದ್ರೆ ಕ್ರಮ ತಪ್ಪದು. ನೆಪ ಹೇಳಿದರೆ ಕೇಳಲ್ಲ. ಅಗತ್ಯವಿದ್ದರೆ 284 ಅಡಿಯಲ್ಲಿ ಕ್ರಮಕ್ಕೆ ಶಿಫಾರಸು ಮಾಡುತ್ತೇನೆ” ಎಂದು ಡಿಸಿ ಎಚ್ಚರಿಕೆ ನೀಡಿದ್ದಾರೆ.
ಶಿಕ್ಷಕರ ಆಕ್ರೋಶ: “ಸಮಸ್ಯೆ ಪರಿಹರಿಸದೇ ಒತ್ತಡ ಹೇಗೆ?”
ಆದರೆ, ಗಣತಿದಾರ ಶಿಕ್ಷಕರ ಅಳಲು ಬೇರೆ. ಸಮೀಕ್ಷೆಯಲ್ಲಿ ಹಲವು ತಾಂತ್ರಿಕ ತೊಂದರೆಗಳು ದಿನದಿಂದ ದಿನಕ್ಕೆ ಎದುರಾಗುತ್ತಿವೆ. ಮೊಬೈಲ್ ಆ್ಯಪ್ ಕೆಲಸ ಮಾಡದೇ, OTP ಸಮಸ್ಯೆ, ಆಧಾರ್ ದೃಢೀಕರಣದ ತೊಂದರೆ, ಗಂಟೆಗಳ ಕಾಲ ಮಾಹಿತಿ ತುಂಬಿದ ನಂತರ “Upload not success” ತೋರಿಸುವಂತಹ ಗೊಂದಲಗಳು ಶಿಕ್ಷಕರನ್ನು ಹತಾಶರಾಗಿಸುತ್ತಿವೆ.
ಶಿಕ್ಷಕರು ಕಳವಳ ವ್ಯಕ್ತಪಡಿಸುತ್ತಾ, “ಸರ್ವರ್ ಹಾಗೂ ಆ್ಯಪ್ ಸಮಸ್ಯೆ ಇಲ್ಲದಿದ್ದರೆ ಸಮೀಕ್ಷೆ ಸುಗಮವಾಗಿ ಸಾಗುತ್ತಿತ್ತು. ಆದರೆ ತಾಂತ್ರಿಕ ತೊಂದರೆಗಳ ನಡುವೆ ಗುರಿ (ಟಾರ್ಗೆಟ್) ನಿಗದಿಪಡಿಸಿ ಒತ್ತಡ ಹಾಕುವುದು ನ್ಯಾಯವಲ್ಲ. ನಾವು ಶ್ರಮಿಸುತ್ತಿದ್ದರೂ ಸಮಸ್ಯೆ ನಮ್ಮ ಕೈಯಲ್ಲಿಲ್ಲ. ಇಂತಹ ಸಂದರ್ಭದಲ್ಲಿ ಅಮಾನತ್ತು ಬ್ರಹ್ಮಾಸ್ತ್ರ ಬೀಸುವುದು ಶಿಕ್ಷಕರಿಗೆ ಮಾನಸಿಕ ಹಿಂಸೆ” ಎಂದು ಪ್ರಶ್ನಿಸುತ್ತಿದ್ದಾರೆ.
ಶಿಕ್ಷಕರಿಗೆ ಆಗುತ್ತಿರುವ ಸಮೀಕ್ಷೆಯ ಪ್ರಮುಖ ಸವಾಲುಗಳು
ಮನೆಗಳ ಸರಿಯಾದ ಜೋಡಣೆ ಇಲ್ಲ.
ಯುಎಚ್‌ಐಡಿ ಮೂಲಕ ಮನೆ ಪತ್ತೆಹಚ್ಚುವಲ್ಲಿ ತೊಂದರೆ.
ನೆಟ್ವರ್ಕ್ ಹಾಗೂ ಆನ್‌ಲೈನ್ ಸಮಸ್ಯೆ.
OTP ಸಮಸ್ಯೆ ನಿರಂತರ.
ಪ್ರತಿಯೊಂದು ಮನೆಯ 60 ಕಡ್ಡಾಯ ಪ್ರಶ್ನೆಗಳ ಒತ್ತಡ.
ಕಾರ್ಯನಿರ್ವಹಿಸುವ ಸ್ಥಳ ಬಿಟ್ಟು ಬೇರೆ ಊರಿಗೆ ನಿಯೋಜನೆ.
ಆಧಾರ್ EKYC ಸಮಸ್ಯೆಗಳು.
ವಿಳಾಸಪಟ್ಟಿ ಒದಗಿಸದೇ ಇರುವ ತೊಂದರೆ.
ಸದಸ್ಯರ ಸೇರ್ಪಡೆ/ತೆಗೆದುಹಾಕುವ ಆಯ್ಕೆ ಇಲ್ಲ.
ಹೊಸ APP ಇನ್ಸ್ಟಾಲ್ ಮಾಡಿದ ನಂತರ ಹಳೆಯ ಸಮೀಕ್ಷೆಗಳು ಶೂನ್ಯವಾಗುವುದು.
ದಿನಕ್ಕೆ 5-6 ಗಂಟೆಗಳ ಮೊಬೈಲ್ ಬಳಕೆಯಿಂದ ಕಣ್ಣಿಗೆ ತೊಂದರೆ, ಮಾನಸಿಕ ಹಿಂಸೆ.
ತಾಂತ್ರಿಕ ಜ್ಞಾನ ಕೊರತೆ ಇರುವ ಶಿಕ್ಷಕರಿಗೆ ಕಷ್ಟ.
ಮಹಿಳಾ ಶಿಕ್ಷಕರಿಗೆ ಭದ್ರತಾ ಮತ್ತು ಮುಜುಗರದ ಸಮಸ್ಯೆ.
ಅನಾರೋಗ್ಯ, ವಯಸ್ಸಾದ ಶಿಕ್ಷಕರಿಗೆ ತೊಂದರೆ.
ಮನೆ ಹಂಚಿಕೆ ಸಮಾನವಾಗದೇ ಕೆಲವರಿಗೆ ಹೆಚ್ಚುವರಿ ಹೊರೆ.
ಒಟ್ಟಾರೆ ಪರಿಸ್ಥಿತಿ
ಒಂದೆಡೆ ಶಿಕ್ಷಕರು ತಾಂತ್ರಿಕ ತೊಂದರೆಗಳಿಂದ ನರಳಾಡುತ್ತಿದ್ದು, ಮತ್ತೊಂದೆಡೆ ಜಿಲ್ಲಾಧಿಕಾರಿಗಳಿಂದ ಅಮಾನತ್ತಿನ ಬ್ರಹ್ಮಾಸ್ತ್ರ ಬೀಳುತ್ತಿರುವ ಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ತಕ್ಷಣವೇ ತಾಂತ್ರಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡರೆ ಮಾತ್ರ ಸಮೀಕ್ಷಾ ಕಾರ್ಯ ಸುಗಮವಾಗಲಿದೆ ಎಂಬ ಅಭಿಪ್ರಾಯ ತಜ್ಞರಿಂದ ವ್ಯಕ್ತವಾಗಿದೆ.