ಗದಗ : ಗದಗದಲ್ಲಿರುವ ಭಾರತೀಯ ವೈದ್ಯಕೀಯ ಸಂಘದ (ಐಎಂಎ) ರಕ್ತನಿಧಿ ಕಚೇರಿಯಲ್ಲಿ ನಡೆದ ಇತ್ತೀಚಿನ ಸ್ವಯಂಪ್ರೇರಿತ ರಕ್ತದಾನ ಶಿಬಿರದಲ್ಲಿ ವೈದ್ಯರು ಅಪರೂಪದ ಬಾಂಬೆ ಆರ್‌ಎಚ್–ನೆಗೆಟಿವ್ (Bombay Rh-Negative) ರಕ್ತದ ಗುಂಪನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಈ ಅಪರೂಪದ ಫಿನೋಟೈಪ್, ವೈದ್ಯಕೀಯ ಭಾಷೆಯಲ್ಲಿ ಎಚ್‌ಎಚ್ (HH Group) ಎಂದು ಕರೆಯಲ್ಪಡುತ್ತದೆ. ಸಾಮಾನ್ಯ ಬಾಂಬೆ ಆರ್‌ಎಚ್–ಪಾಸಿಟಿವ್‌ಗಿಂತಲೂ ಅಪರೂಪವಾಗಿರುವ ಈ ರಕ್ತ ಪ್ರಕಾರವು ಸುಮಾರು ಹತ್ತು ಸಾವಿರ ಜನರಲ್ಲಿ ಒಬ್ಬರಲ್ಲಿ ಮಾತ್ರ ಕಂಡುಬರುವುದಾಗಿ ವೈದ್ಯರು ತಿಳಿಸಿದ್ದಾರೆ.
ಮೊದಲಿಗೆ ಲ್ಯಾಬೊರೇಟರಿ ತಂತ್ರಜ್ಞರು ಸಾಮಾನ್ಯ ಪರೀಕ್ಷೆ ನಡೆಸಿದಾಗ, ಅದು ಎ, ಬಿ, ಎಬಿ ಅಥವಾ ಓ ಪಾಸಿಟಿವ್/ನೆಗೆಟಿವ್ ಯಾವ ಗುಂಪಿಗೂ ಸೇರದಿರುವುದು ಗೋಚರಿಸಿದಾಗ ಅಚ್ಚರಿ ವ್ಯಕ್ತವಾಯಿತು. ತಕ್ಷಣವೇ ಅವರು ರಕ್ತನಿಧಿ ಕಚೇರಿಯ ಅಧ್ಯಕ್ಷರಾದ ಡಾ. ರಾಜಶೇಖರ್ ಪವಾಡಶೆಟ್ಟರ್ ಹಾಗೂ ಡಾ. ಶ್ರೀಧರ್ ಕುರಡಗಿಗೆ ಮಾಹಿತಿ ನೀಡಿದರು. ಹೆಚ್ಚಿನ ಪರೀಕ್ಷೆಯ ನಂತರ ಅದು ಬಾಂಬೆ ಆರ್‌ಎಚ್–ನೆಗೆಟಿವ್ ಆಗಿರುವುದು ದೃಢಪಟ್ಟಿತು.
ಈ ವಿಶೇಷ ಪತ್ತೆಯ ಮಾಹಿತಿಯನ್ನು ಗದಗ ವೈದ್ಯರು ಬೆಂಗಳೂರಿನ ಅಪರೂಪದ ರಕ್ತ ಗುಂಪುಗಳಲ್ಲಿ ಪರಿಣತಿ ಹೊಂದಿರುವ ಸಂಕಲ್ಪ ಫೌಂಡೇಶನ್ ವೈದ್ಯರಿಗೆ ತಿಳಿಸಿದರು. ಬಳಿಕ ಐಎಂಎ ಗದಗ ತಂಡದ ಸಹಕಾರದಿಂದಲೇ ಈ ಅಮೂಲ್ಯ ರಕ್ತ ಘಟಕವನ್ನು ತಕ್ಷಣವೇ ಶೀತ ಸರಪಳಿ (cold chain box) ವ್ಯವಸ್ಥೆಯ ಮೂಲಕ ಸುರಕ್ಷಿತವಾಗಿ ಪ್ಯಾಕ್ ಮಾಡಿ, ಬೆಂಗಳೂರು ಮಾರ್ಗವಾಗಿ ಸೂರತ್‌ಗೆ ರವಾನೆ ಮಾಡಲಾಯಿತು.
ಡಾ. ಶ್ರೀಧರ್ ಕುರಡಗಿ ಅವರು, “ಇಂತಹ ಅಪರೂಪದ ರಕ್ತದ ಗುಂಪು ಪತ್ತೆಯಾಗಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿ. ಇದು ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರಗಳ ಅಗತ್ಯತೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಪ್ರಾದೇಶಿಕ ರಕ್ತನಿಧಿಗಳು ತಮ್ಮ ಜಿಲ್ಲೆಯಷ್ಟೇ ಅಲ್ಲದೆ, ರಾಜ್ಯಗಳಾಚೆಗೂ ಜೀವ ಉಳಿಸುವ ಕಾರ್ಯದಲ್ಲಿ ಮಹತ್ವದ ಪಾತ್ರವಹಿಸುತ್ತವೆ” ಎಂದು ಹೇಳಿದರು.
ರಕ್ತ ನಿಧಿ ಕಚೇರಿಯ ಅಧ್ಯಕ್ಷರಾದ ಡಾ. ರಾಜಶೇಖರ್ ಪವಾಡಶೆಟ್ಟರ್ ಅವರು, “ಗದಗದಲ್ಲಿ ಈ ಅಪರೂಪದ ಬಾಂಬೆ ರಕ್ತದ ಗುಂಪು ಪತ್ತೆಯಾಗಿರುವುದು ನಮಗೆ ಬಹು ಸಂತಸದ ಸಂಗತಿ. ಸ್ವಯಂಪ್ರೇರಿತ ರಕ್ತದಾನ ಶಿಬಿರಗಳು ನೀಡಬಹುದಾದ ಮಹತ್ವದ ಕೊಡುಗೆಗೆ ಇದು ಸ್ಪಷ್ಟ ಉದಾಹರಣೆ” ಎಂದರು.
ಅದೇ ವೇಳೆ, ಡಾ. ಪ್ಯಾರಾಲಿ ನೂರಾನಿ ಅವರು, “ಈ ಅಪರೂಪದ ಕಾರ್ಯದಲ್ಲಿ ಡಾ. ರಾಜಶೇಖರ್ ಪವಾಡಶೆಟ್ಟರ್, ಅಧ್ಯಕ್ಷ ಡಾ. ಶ್ರೀಧರ್ ಕುರಡಗಿ, ಕಾರ್ಯದರ್ಶಿ ಡಾ. ಅವಿನಾಶ್ ಓದುಗೌಡರ್, ವ್ಯವಸ್ಥಾಪಕ ಅನಿಲ್ ಹಾಗೂ ಸಂಪೂರ್ಣ ತಂಡವು ಹಗಲು ರಾತ್ರಿ ಶ್ರಮಿಸಿ ಜೀವ ಉಳಿಸುವ ಕಾರ್ಯಕ್ಕೆ ಕೊಡುಗೆ ನೀಡಿರುವುದು ಶ್ಲಾಘನೀಯ” ಎಂದು ಕೊಂಡಾಡಿದರು.
ಗಮನಾರ್ಹ ಸಂಗತಿ ಎಂದರೆ, ಈ ಬಾಂಬೆ ರಕ್ತ ಗುಂಪನ್ನು ಮೊದಲ ಬಾರಿಗೆ ಮುಂಬೈ (ಆಗ ಬಾಂಬೆ) ನಗರದ ಪ್ರಸಿದ್ಧ ವೈದ್ಯರಾದ ಡಾ. ವೈ. ಎಂ. ಭೆಂಡೆ ಅವರು 1952ರಲ್ಲಿ ಕೆಇಎಂ ಆಸ್ಪತ್ರೆಯ ರಕ್ತನಿಧಿಯಲ್ಲಿ ಪತ್ತೆ ಹಚ್ಚಿದ್ದರು. ಆ ವೇಳೆಗಿನ ವಿಶ್ಲೇಷಣೆಯಲ್ಲಿ, ಎ, ಬಿ ಅಥವಾ ಓ ಪ್ರತಿಜನಕಗಳ ನಿರ್ಮಾಣಕ್ಕೆ ಅಗತ್ಯವಾದ ಎಚ್ ಪ್ರತಿಜನಕವು ಇಲ್ಲದಿರುವುದು ಕಂಡುಬಂದಿತ್ತು. ಅದೇ ಕಾರಣಕ್ಕೆ ಅದನ್ನು ಬಾಂಬೆ ರಕ್ತ ಗುಂಪು ಎಂದು ಹೆಸರಿಸಲಾಯಿತು.
ಗದಗದಲ್ಲಿ ಇಂತಹ ಅಪರೂಪದ ರಕ್ತದ ಪತ್ತೆಯಾಗಿರುವುದು ಕೇವಲ ವೈದ್ಯಕೀಯ ಸಾಧನೆಯಷ್ಟೇ ಅಲ್ಲದೆ, ಜಿಲ್ಲೆಯಲ್ಲಿ ನಡೆಯುತ್ತಿರುವ ಸ್ವಯಂಪ್ರೇರಿತ ರಕ್ತದಾನ ಶಿಬಿರಗಳು ಜೀವ ಉಳಿಸುವ ಮೌಲ್ಯಯುತ ಕಾರ್ಯಕ್ಕೆ ನೀಡುತ್ತಿರುವ ಕೊಡುಗೆಗೆ ನಿದರ್ಶನವಾಗಿದೆ.