ಗದಗ: ಗದಗ ತಾಲೂಕಿನ ಸೊರಟೂರ ಗ್ರಾಮದ ಬಳಿ ಸೆಪ್ಟೆಂಬರ್ 23ರಂದು ಸಂಭವಿಸಿದ ದುರ್ಘಟನೆಯಲ್ಲಿ ಗಾಯಗೊಂಡಿದ್ದ ಬೇಟಗೇರಿ ಠಾಣೆಯ ಎಎಸ್ಐ ಖಾಸೀಮ್ ಸಾಬ್ ಹರಿವಾಣ (ASI Khaseem Saab Harivana) ಅವರು ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಘಟನೆ ನಡೆದ ದಿನ, ಲಕ್ಷ್ಮೇಶ್ವರದಿಂದ ಗದಗ ಕಡೆಗೆ ಸಾಗುತ್ತಿದ್ದ ಪೊಲೀಸ್ ಜೀಪ್‌ಗೆ ಕತ್ತೆಕಿರುಬವೊಂದು ರಸ್ತೆ ದಾಟುವ ವೇಳೆ ಡಿಕ್ಕಿ ಹೊಡೆದ ಪರಿಣಾಮ ಜೀಪ್ ಪಲ್ಟಿಯಾಗಿತ್ತು. ಈ ಸಂದರ್ಭದಲ್ಲಿ ಕತ್ತೆಕಿರುಬ ಸ್ಥಳದಲ್ಲೇ ಮೃತಪಟ್ಟಿತ್ತು. ಜೀಪ್‌ನಲ್ಲಿ ಪ್ರಯಾಣಿಸುತ್ತಿದ್ದ ಮೂವರು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದರು.
ಲಕ್ಷ್ಮೇಶ್ವರದಲ್ಲಿ ನಡೆದ ಗಣೇಶ ವಿಸರ್ಜನೆ ಬಂದೋಬಸ್ತ ಮುಗಿಸಿಕೊಂಡು, ತಡರಾತ್ರಿ ಶಿರಹಟ್ಟಿ ಮಾರ್ಗವಾಗಿ ಗದಗನತ್ತ ಪೊಲೀಸ್ ಸಿಬ್ಬಂದಿಗಳು ತೆರಳುತ್ತಿದ್ದರು. ಈ ವೇಳೆ ಸಂಭವಿಸಿದ ಭೀಕರ ಅಪಘಾತದಲ್ಲಿ ASI ಹರಿವಾಣ ಗಂಭೀರವಾಗಿ ಗಾಯಗೊಂಡಿದ್ದರು. ತಲೆಗೆ ಗಂಭೀರ ಪೆಟ್ಟು ಬಿದ್ದಿದ್ದರಿಂದ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿತ್ತು. ಆದರೆ ದುರಾದೃಷ್ಟವಶಾತ್ ಚಿಕಿತ್ಸೆ ಫಲಿಸದೇ ಹರಿವಾಣ ಮೃತಪಟ್ಟಿದ್ದಾರೆ.
ಸದ್ಯ ಗಾಯಾಳುಗಳಾದ ವಾಯರ್‌ಲೆಸ್ ಪೋಲಿಸ್ ಇನ್ಸ್‌ಪೆಕ್ಟರ್ ಉಮೇಶಗೌಡ ಪಾಟೀಲ್ ಹಾಗೂ ಚಾಲಕ ಓಂನಾಥ್ ಸೇರಿದಂತೆ ಇನ್ನಿಬ್ಬರಿಗೆ ಚಿಕಿತ್ಸೆ ಮುಂದುವರಿದಿದೆ.
ಈ ಪ್ರಕರಣದ ಸಂಬಂಧ ಮುಳಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹರಿವಾಣ ಅವರ ನಿಧನಕ್ಕೆ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿವರ್ಗ ಕಂಬನಿ ಮಿಡಿದಿದ್ದಾರೆ.