ಬಾಗಲಕೋಟೆ: ಪಂಚಮಸಾಲಿ ಪೀಠದ ಪ್ರಥಮ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿಯವರನ್ನು ಪೀಠಾಧ್ಯಕ್ಷ ಸ್ಥಾನದಿಂದ ಉಚ್ಛಾಟಿಸುವ ಮಹತ್ವದ ನಿರ್ಧಾರವನ್ನು ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜ ಟ್ರಸ್ಟ್ ಕೈಗೊಂಡಿದೆ. ಈ ಬಗ್ಗೆ ಅಧಿಕೃತ ಮಾಹಿತಿ ನೀಡಿರುವ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ನೀಲಕಂಠ ಅಸೂಟಿ ಅವರು, ಟ್ರಸ್ಟ್‌ನ ಕಾರ್ಯಕಾರಿಣಿ ಸಭೆಯಲ್ಲಿ ಸಂಪೂರ್ಣ ಬಹುಮತದೊಂದಿಗೆ ನಿರ್ಣಯ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಅವರ ಪ್ರಕಾರ, ಸ್ವಾಮೀಜಿಗಳ ವಿರುದ್ಧ ಹಲವು ಗಂಭೀರ ಆರೋಪಗಳು ವರ್ಷಗಳಿಂದಲೇ ಕೇಳಿ ಬಂದಿದ್ದವು. ಅಕ್ರಮ ಆಸ್ತಿ ಗಳಿಕೆ, ಧಾರ್ಮಿಕ ಮೌಲ್ಯಗಳಿಗೆ ವಿರುದ್ಧ ಹೇಳಿಕೆಗಳು, ಸನ್ಯಾಸಿಗೆ ತಕ್ಕಂತಹ ಶಿಸ್ತು ಹಾಗೂ ಮೂಲಭೂತ ಲಕ್ಷಣಗಳ ಕೊರತೆ ಮುಂತಾದ ಕಾರಣಗಳಿಂದಾಗಿ ಉಚ್ಛಾಟನೆಗೆ ಒಮ್ಮತ ತೀರ್ಮಾನ ಕೈಗೊಳ್ಳಲಾಯಿತು. “ಸ್ವಾಮೀಜಿಗಳ ಬಗ್ಗೆ ಅನೇಕ ದೂರುಗಳು ಟ್ರಸ್ಟ್‌ಗೆ ಬಂದಿದ್ದರೂ ಅವರು ಪ್ರತಿಕ್ರಿಯಿಸಲಿಲ್ಲ. 2014 ರಲ್ಲಿಯೇ ನೋಟಿಸ್ ನೀಡಿದ್ದೆವು. ಆದರೆ ದೂರುಗಳ ವಿಚಾರದಲ್ಲಿ ಯಾವುದೇ ಬದಲಾವಣೆ ಆಗದೆ, ಸ್ವಾಮೀಜಿಗಳು ಸಮುದಾಯ ಒಗ್ಗೂಡಿಸುವ ಬದಲು ವಿಭಜನೆ ಮಾಡುವ ರೀತಿಯಲ್ಲಿ ವರ್ತಿಸುತ್ತಿದ್ದರು” ಎಂದು ಅಸೂಟಿ ಹೇಳಿದರು.
ಬಸವತತ್ವದ ಮೂಲ ತತ್ವಗಳಿಗೆ ವಿರುದ್ಧವಾಗಿ ವರ್ತಿಸಿದ ಆರೋಪವೂ ಈ ನಿರ್ಧಾರಕ್ಕೆ ಕಾರಣವಾಗಿದೆ. ಬಸವಣ್ಣನವರು ಲಿಂಗಾಯತ ಧರ್ಮವನ್ನು ಹಿಂದೂ ಧರ್ಮದ ಅನಿಷ್ಟ ಆಚರಣೆಗಳಿಗೆ ವಿರುದ್ಧವಾಗಿ ಸ್ಥಾಪಿಸಿದರೆ, ಇವರು ಹಿಂದೂ ಪದಗಳನ್ನು ಬಳಸಿ ಧರ್ಮದ ಮೂಲ ಅರ್ಥವನ್ನು ತಿರುಚುತ್ತಿದ್ದಾರೆ ಎಂದು ಮುಖಂಡರು ಸಭೆಯಲ್ಲಿ ಆರೋಪಿಸಿದರು. “ರಾಜಕೀಯ ಒತ್ತಡದಿಂದ ಹಿಂದೂ ಪದ ಬಳಕೆ ಮಾಡಬೇಕಾಯಿತು ಎಂದು ಸ್ವಾಮೀಜಿ ಹೇಳಿಕೊಳ್ಳುವಂತಾದರೂ, ಇದು ಬಸವತತ್ವಕ್ಕೆ ವಿರುದ್ಧ” ಎಂದು ಅಸೂಟಿ ಸ್ಪಷ್ಟಪಡಿಸಿದರು.
ರಾಜಕೀಯ ಅಂಶಗಳಿಗೂ ಸ್ಪಷ್ಟನೆ
ಸ್ವಾಮೀಜಿಯವರ ಉಚ್ಛಾಟನೆಗೆ ಕಾಶಪ್ಪನವರ ಬೆಂಬಲವಿಲ್ಲದ್ದೇ ಕಾರಣವೇ ಎಂಬ ಪ್ರಶ್ನೆಗೆ ಉತ್ತರ ನೀಡಿದ ಅಸೂಟಿ, “ರಾಜಕೀಯದಲ್ಲಿ ಗೆಲುವು-ಸೋಲು ಸಹಜ. ಪಾರ್ಟಿ ಪ್ರೋಗ್ರಾಂ ಆಧಾರಿತವಾಗಿ ನಡೆಯುತ್ತದೆ. ಕಾಶಪ್ಪನವರ ಸದಾ ಟ್ರಸ್ಟ್‌ಗೆ ಬೆಂಬಲಿಗಳಾಗಿದ್ದರು. ಕಾಶಪ್ಪನವರನ್ನು ಅಧ್ಯಕ್ಷರನ್ನಾಗಿ ಮಾಡಿರುವುದು ಕೂಡ ಪ್ರಭನ್ನ ಹುಣಸಿಕಟ್ಟಿ ಅವರ ನಿವೃತ್ತಿ ಬಯಕೆಯಿಂದಾಗಿ ಮಾತ್ರ. ಯಾವುದೇ ವೈಯಕ್ತಿಕ ಅಸಮಾಧಾನ ಇಲ್ಲ” ಎಂದರು.
ಹೊಸ ಪೀಠಾಧಿಪತಿ ನೇಮಕ ಶೀಘ್ರ
ಸ್ವಾಮೀಜಿಯವರ ಉಚ್ಛಾಟನೆಯ ಬೆನ್ನಲ್ಲೇ ಟ್ರಸ್ಟ್ ಪ್ರಸಾದ ನಿಲಯ ಆರಂಭಿಸುವ ನಿರ್ಧಾರವನ್ನು ಕೈಗೊಂಡಿದ್ದು, ಮಠದ ಕಾರ್ಯಚಟುವಟಿಕೆಗಳನ್ನು ಬಲಪಡಿಸಲು ಮುಂದಾಗಿದೆ. “ಇನ್ನು ಮುಂದೆ ಮಠಕ್ಕೂ, ಸ್ವಾಮೀಜಿಗೂ ಯಾವುದೇ ಸಂಬಂಧವಿಲ್ಲ. ಮಲಪ್ರಭಾ ದಂಡೆ ಮೇಲೆ ಸಿಸಿ ಪಾಟೀಲ ಅವರು ಹೊಸಮಠ ಕಟ್ಟಿಸಿಕೊಡ್ತಿವಿ ಅಂತ ಹೇಳಿದ್ದಾರೆ. ಕಟ್ಟಿಕೊಳ್ಳಿ. ಆದರೆ ನಾವು ಶೀಘ್ರದಲ್ಲೇ ಹೊಸ ಪೀಠಾಧಿಪತಿಯನ್ನು ನೇಮಿಸಲಾಗುವುದು” ಎಂದು ಅಸೂಟಿ ಹೇಳಿದರು.
ಸಭೆಯಲ್ಲಿ ಭಾಗವಹಿಸಿದ್ದ 30 ಮಂದಿ ಟ್ರಸ್ಟಿಗಳು ಒಮ್ಮತದ ನಿರ್ಣಯದ ಮೂಲಕ ಈ ಮಹತ್ವದ ತೀರ್ಮಾನಕ್ಕೆ ಮುದ್ರೆಯೊತ್ತಿದ್ದಾರೆ. “ಸ್ವಾಮೀಜಿಗೆ ಕಾರ್ ಸೇರಿದಂತೆ ಅನೇಕ ಸೌಲಭ್ಯಗಳನ್ನು ಒದಗಿಸಿದ್ದರೂ, ಅವರು ತೋರಿದ ವರ್ತನೆ ಸಮುದಾಯಕ್ಕೆ, ಧರ್ಮಕ್ಕೆ ವಿರುದ್ಧವಾಗಿತ್ತು. ತಪ್ಪು ಮಾಡಿದ್ವಿ ಎಂದು ಕೆಲವರು ಹೇಳಿಕೊಂಡರೂ, ಸಮುದಾಯದ ಹಿತಾಸಕ್ತಿ ಕಾಪಾಡಲು ಇದು ಅವಶ್ಯಕ ನಿರ್ಧಾರ” ಎಂದು ಮುಖಂಡರು ಅಭಿಪ್ರಾಯಪಟ್ಟಿದ್ದಾರೆ.
ಈ ಮೂಲಕ ಪಂಚಮಸಾಲಿ ಸಮುದಾಯದ ಇತಿಹಾಸದಲ್ಲಿ ಮೊದಲ ಬಾರಿಗೆ ಪೀಠದ ಜಗದ್ಗುರು ಉಚ್ಛಾಟನೆಗೊಳಗಾಗುವ ಘಟನೆ ದಾಖಲಾಗಿದೆ. ಸಮುದಾಯದಲ್ಲಿ ಈ ನಿರ್ಧಾರ ಭಾರೀ ಚರ್ಚೆಗೆ ಕಾರಣವಾಗಿದ್ದು, ಮುಂದಿನ ದಿನಗಳಲ್ಲಿ ಹೊಸ ನೇಮಕಾತಿಯತ್ತ ಎಲ್ಲರ ಗಮನ ಸೆಳೆಯುತ್ತಿದೆ.