ಗದಗ: ರಾಜ್ಯ ಸರ್ಕಾರ ಕೈಗೆತ್ತಿಕೊಂಡಿರುವ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆ (ಜನಗಣತಿ) ಕುರಿತು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆ-ವಿವಾದಗಳು ಜೋರಾಗುತ್ತಿವೆ. ವಿಶೇಷವಾಗಿ ಇದನ್ನು “ಜಾತಿ ಜನಗಣತಿ” ಎಂಬ ರೂಪಕ್ಕೆ ತಂದು ಸರ್ಕಾರ ರಾಜಕೀಯ ಲಾಭ ಪಡೆಯಲು ಯತ್ನಿಸುತ್ತಿದೆ ಎಂಬ ಆರೋಪಗಳು ತೀವ್ರಗೊಳ್ಳುತ್ತಿವೆ.
ಈ ಪೈಕಿ ಗದಗ ಜಿಲ್ಲೆಯ ನರಗುಂದ ಕ್ಷೇತ್ರದ ಶಾಸಕರು ಹಾಗೂ ಮಾಜಿ ಸಚಿವರಾದ ಸಿ.ಸಿ. ಪಾಟೀಲ ಅವರು, ಸರ್ಕಾರದ ಮೇಲೆ ತೀವ್ರ ಆರೋಪಗಳನ್ನು ಹೊರಿಸಿದ್ದಾರೆ.
ಈ ಕುರಿತು ಗದಗನಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು, “ಈ ಸರ್ಕಾರ ಜಾತಿ ಗಣತಿಯಲ್ಲಿ ಬೇಕಾದ್ದನ್ನು ತಿದ್ದುಪಡಿ ಮಾಡುವಂತಹ ಪ್ರವೃತ್ತಿ ಹೊಂದಿದೆ. ಗಣತಿ ನಡೆಸುವ ಅಧಿಕಾರಿಗಳು ಪ್ರಾಮಾಣಿಕವಾಗಿ ವರದಿ ಮಾಡುವ ಬದಲು, ಸರ್ಕಾರದ ಒತ್ತಡಕ್ಕೆ ಒಳಗಾಗುವ ಸಾಧ್ಯತೆ ಇದೆ. ಆದ್ದರಿಂದ ಜನತೆ ಎಚ್ಚರಿಕೆಯಿಂದ ವರ್ತಿಸಬೇಕು” ಎಂದು ಕರೆ ನೀಡಿದ್ದಾರೆ.
ಗಣತಿಯಲ್ಲಿ ಬಳಸುವ ಸಾಧನಗಳ ಬಗ್ಗೆ ಸಹ ಗಂಭೀರ ಶಂಕೆ ವ್ಯಕ್ತಪಡಿಸಿದ್ದಾರೆ. “ಗಣತಿ ವೇಳೆ ಅಧಿಕಾರಿಗಳು ಸಿಸ್ಪೆನ್ಸಿಲ್ (ಪೆನ್ಸಿಲ್) ಬಳಸಿ ಬರೆದು ಹೋಗಬಾರದು. ಏಕೆಂದರೆ ಪೆನ್ಸಿಲ್‌ನಲ್ಲಿ ಬರೆದದ್ದನ್ನು ಸುಲಭವಾಗಿ ಅಳಿಸಿ ತಿದ್ದುಪಡಿ ಮಾಡುವ ಅವಕಾಶವಿದೆ. ಅಧಿಕಾರಿಗಳು ಪೆನ್ನಿನಿಂದಲೇ ಬರೆಯುವಂತೆ ಒತ್ತಾಯಿಸಬೇಕು. ಇಲ್ಲದಿದ್ದರೆ ಬಳಿಕ ಆ ಅಂಕಿ-ಅಂಶಗಳಲ್ಲಿ ಸರ್ಕಾರಕ್ಕೆ ಅನುಕೂಲವಾಗುವಂತೆ ಬದಲಾವಣೆ ಮಾಡುವ ಸಾಧ್ಯತೆ ಹೆಚ್ಚು” ಎಂದು ಎಚ್ಚರಿಕೆ ನೀಡಿದ್ದಾರೆ.
ಅಷ್ಟೇ ಅಲ್ಲದೆ, ಸಮಾಜದ ಒಳಗಿನ ಅಂತರವನ್ನೇ ಸೃಷ್ಟಿಸಲು ಸರ್ಕಾರ ಸಂಚು ರೂಪಿಸಿದೆ ಎಂದು ಪಾಟೀಲರು ಆರೋಪಿಸಿದರು. “ಗಣತಿ ಅಧಿಕಾರಿಗಳು ಮನೆಗಳಿಗೆ ಭೇಟಿ ನೀಡುವಾಗ ಪುರುಷರು ಅಥವಾ ಮುಖ್ಯಸ್ಥರು ಇಲ್ಲದ ಸಂದರ್ಭದಲ್ಲಿ, ಮಹಿಳೆಯರಿಗೆ ತಪ್ಪಾಗಿ ಪ್ರಶ್ನೆಗಳನ್ನು ಕೇಳಿ ‘ವೀರಶೈವ, ಲಿಂಗಾಯತ, ಪಂಚಮಸಾಲಿ’ ಅಂತ ಕೇಳಿ, ಸಬ್ ಕಾಸ್ಟ್ ಇನ್ನೇನೋ ಬರೆದುಕೊಳ್ಳುವಂಥ ಪ್ರಯತ್ನ ನಡೆಯಬಹುದು. ಇದರಿಂದ ಸಮಾಜದಲ್ಲಿ ಹೊಸ ಗೊಂದಲ, ಭಿನ್ನಾಭಿಪ್ರಾಯ ಹುಟ್ಟಿಸುವ ಕಾರ್ಯ ಸರ್ಕಾರದಿಂದ ನಡೆಯುತ್ತಿದೆ. ಈ ಸರ್ಕಾರ ಯಾವ ಮಟ್ಟಕ್ಕಾದರೂ ಹೋಗಿ ಹಿಂದೂ ಸಮಾಜವನ್ನು ಒಡೆಯಲು ಹೊರಟಿದೆ. ವಿಶೇಷವಾಗಿ ವೀರಶೈವ ಸಮಾಜದ ಏಕತೆಯನ್ನು ಮುರಿಯುವ ಉದ್ದೇಶವಿದೆ” ಎಂದು ಅವರು ಆರೋಪಿಸಿದರು.
“ಗಣತಿ ಅಧಿಕಾರಿಗಳು ಮನೆಗೆ ಬಂದಾಗ ನಿಮ್ಮ ಹೇಳಿಕೆಯನ್ನೇ ದಾಖಲಿಸುವಂತೆ ಖಚಿತಪಡಿಸಿಕೊಳ್ಳಿ. ಪೆನ್ನಿನಿಂದ ಮಾತ್ರ ಬರೆಯುವಂತೆ ಹೇಳಿ. ನಮ್ಮ ಸಮಾಜದ ಬಗ್ಗೆ ತಪ್ಪು, ತಿರುವುಮಾಡಿದ ಅಂಕಿಅಂಶಗಳು ಸರ್ಕಾರಕ್ಕೆ ಸಿಗದಂತೆ ಜಾಗರೂಕರಾಗಿರಿ. ಸರ್ಕಾರದ ಪ್ರೇರಣೆಯಿಂದ ಬಂದಿರುವ ಅಧಿಕಾರಿಗಳ ಪ್ರಶ್ನೆಗಳಿಗೆ ಎಚ್ಚರಿಕೆಯಿಂದ ಉತ್ತರಿಸಿ. ಇಲ್ಲದಿದ್ದರೆ ನಮ್ಮ ಭವಿಷ್ಯವನ್ನು ತೀರ್ಮಾನಿಸುವ ಅಂಕಿ-ಅಂಶಗಳಲ್ಲಿ ಗಂಭೀರ ತೊಂದರೆಗಳು ಉಂಟಾಗುವ ಅಪಾಯವಿದೆ” ಎಂದು ಅವರು ಎಚ್ಚರಿಕೆ ನೀಡಿದರು.
ಒಟ್ಟಾರೆ ಸರ್ಕಾರವು ಸಮೀಕ್ಷೆಯನ್ನು ಸಂಪೂರ್ಣ ಪಾರದರ್ಶಕವಾಗಿ ನಡೆಸಲಾಗುತ್ತಿದೆ ಎಂದು ಹೇಳಿಕೊಂಡಿರುವುದಾದರೂ, ವಿರೋಧ ಪಕ್ಷದ ನಾಯಕರು ಹಾಗೂ ಸಮಾಜದ ಕೆಲವು ಮುಖಂಡರು ಸರ್ಕಾರದ ಉದ್ದೇಶಗಳ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿರುವುದು ಗಮನಾರ್ಹವಾಗಿದ್ದು, ಇದು ಮುಂದೆ ಯಾವ ಹಂತಕ್ಕೆ ತಲುಪುತ್ತೋ ಕಾದು ನೋಡಬೇಕಾಗಿದೆ.