ಗದಗ: ಗದಗ ತಾಲೂಕಿನ ಹರ್ಲಾಪೂರ ಗ್ರಾಮದ ಬಳಿ ಇಂದು ಸಂಜೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ದುರ್ಮರಣ ಹೊಂದಿರುವ ದಾರುಣ ಘಟನೆ ಜರುಗಿದೆ.
ಗೋವಾ ಸರ್ಕಾರಿ ಬಸ್ ಹಾಗೂ ಕಾರಿನ ನಡುವೆ ಸಂಭವಿಸಿದ ಈ ಅಪಘಾತವು ಮೂವರನ್ನ ಬಲಿತೆಗೆದುಕೊಂಡಿದೆ.
ಮಾಹಿತಿ ಪ್ರಕಾರ, ಗದಗದಿಂದ ಗಂಗಾವತಿ ಕಡೆಗೆ ತೆರಳುತ್ತಿದ್ದ ಗೋವಾ ಸರ್ಕಾರಿ ಬಸ್ಗೆ, ಹೊಸಪೇಟೆಯಿಂದ ಗದಗದ ಕಡೆಗೆ ಬರುತ್ತಿದ್ದ ಕಾರು ಎದುರಿನಿಂದ ಬಂದು ಭೀಕರವಾಗಿ ಡಿಕ್ಕಿಯಾಗಿದೆ. ಪ್ರಥಮವಾಗಿ ಕಾರು ನಿಯಂತ್ರಣ ತಪ್ಪಿ ಡಿವೈಡರ್ಗೆ ಡಿಕ್ಕಿ ಹೊಡೆದ ಬಳಿಕ, ಎದುರು ಬರುತ್ತಿದ್ದ ಬಸ್ಗೆ ಗುದ್ದಿದೆ.

ಅಪಘಾತದ ರಭಸಕ್ಕೆ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿ ಕಣ್ಣಿಗೆ ಕಟ್ಟುವಂತಿಲ್ಲದ ಸ್ಥಿತಿಗೆ ತಲುಪಿದೆ. ಕಾರಿನೊಳಗೆ ಪ್ರಯಾಣಿಸುತ್ತಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಸ್ಥಳಕ್ಕೆ ತಕ್ಷಣವೇ ಗದಗ ಗ್ರಾಮೀಣ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತರು ಅರ್ಜುನ್ ನೆಲ್ಲೂರು(29)ರವಿ ನೆಲ್ಲೂರು(40), ಈರಣ್ಣ ಉಪ್ಪಾರ(32) ಎಂದು ಗುರುತಿಸಲಾಗಿದೆ. ಇನ್ನು ಅರ್ಜುನ್ ಹಾಗೂ ಈರಣ್ಣ ಪೊಲೀಸ್ ಪೇದೆಗಳಾಗಿದ್ದು, ಅರ್ಜುನ್ ಹಾವೇರಿ ಜಿಲ್ಲೆಯ ಕಂಟ್ರೋಲ್ ರೂಮ್ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರೆ, ಈರಣ್ಣ ಉಪ್ಪಾರ ಕೊಪ್ಪಳ ಜಿಲ್ಲೆಯ ಕಂಟ್ರೋಲ್ ರೂಂನಲ್ಲಿ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದನು.ಇನ್ನೋರ್ವ ರವಿ ಅರ್ಜನನ ಸಹೋದರ ಸಂಬಂಧಿಯಾಗಿದ್ದಾನೆ.
ಅರ್ಜುನ್ ಹಾಗೂ ರವಿ ಹಾವೇರಿ ಜಿಲ್ಲೆ ಶಿಗ್ಗಾಂವ ತಾಲೂಕಿನ ಹುನಗುಂದ ಗ್ರಾಮದ ನಿವಾಸಿಗಳಾಗಿದ್ದರೆ, ಈರಣ್ಣ ಕೊಪ್ಪಳ ಜಿಲ್ಲೆಯ ಕುಕನೂರ ತಾಲೂಕಿನ ಇಟಗಿ ಗ್ರಾಮದ ನಿವಾಸಿಯಾಗಿದ್ದಾನೆ.
ಅಪಘಾತದ ತೀವ್ರತೆಯಿಂದ ಕಾರು ನುಜ್ಜಗುಜ್ಜಾಗಿದ್ದು, ಘಟನೆಯ ಸುದ್ದಿ ತಿಳಿದು ಅಪಘಾತದ ಸ್ಥಳಕ್ಕೆ ಗ್ರಾಮಸ್ಥರು ಕೂಡ ಬಂದು ಪೊಲೀಸರಿಗೆ ಸಹಕಾರ ನೀಡಿದರು.ಮೃತದೇಹಗಳನ್ನು ಗದಗ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಗಿದೆ.
ಈ ಅಪಘಾತದಿಂದಾಗಿ ಕೆಲಕಾಲ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತು. ನಂತರ ವಾಹನಗಳನ್ನು ತೆರವುಗೊಳಿಸಿದ ಬಳಿಕ ಸಂಚಾರ ಮರುಸ್ಥಾಪನೆಗೊಂಡಿದೆ. ಘಟನೆ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತರ ಕುಟುಂಬದವರು ಆಘಾತಕ್ಕೊಳಗಾಗಿದ್ದು, ಗದಗ-ಹಾವೇರಿ ಅಂಚಿನಲ್ಲಿ ಭೀಕರ ಅಪಘಾತದಿಂದ ಮೂವರು ಯುವಕರ ಸಾವಿನ ಸುದ್ದಿ ದುಃಖದ ನೆರಳನ್ನು ಹರಡಿದೆ.
–