ಗದಗ:
ವೀರಶೈವ-ಲಿಂಗಾಯತ ಸಮಾಜದಲ್ಲಿ ಮೂಡಿರುವ ಭಕ್ತರ ಗೊಂದಲ ನಿವಾರಣೆಗೆ ಇದೇ 19ರಂದು ಶುಕ್ರವಾರ ಹುಬ್ಬಳ್ಳಿಯಲ್ಲಿ “ವೀರಶೈವ-ಲಿಂಗಾಯತ ಏಕತಾ ಸಮಾವೇಶ” ನಡೆಯಲಿದೆ. ಈ ಸಮಾವೇಶವನ್ನು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ಆಯೋಜಿಸಿದ್ದು, ಪಂಚಪೀಠಗಳು ಹಾಗೂ ರಾಜ್ಯದ ಪ್ರಮುಖ ಮಠಾಧೀಶರು ಇದಕ್ಕೆ ಧ್ವನಿಗೂಡಿಸಲಿದ್ದಾರೆ ಎಂದು ರಂಭಾಪುರಿ ಪೀಠದ ಶ್ರೀ ಜಗದ್ಗುರು ವೀರಸೋಮೆಶ್ವರ ಶ್ರೀಗಳು ಹೇಳಿದರು.
ಗದಗನಲ್ಲಿ ಮಾಧ್ಯಮಗಳೆದುರು ಮಾತನಾಡಿದ ರಂಭಾಪುರಿ ಶ್ರೀಗಳು, “ವೀರಶೈವ-ಲಿಂಗಾಯತ ಏಕತೆಯೇ ಸಮಾಜದ ಶಕ್ತಿ. ಮಹಾಸಭೆಯ ಧ್ವನಿಗೆ ಪಂಚಪೀಠಗಳು ಮತ್ತು ಎಲ್ಲಾ ಮಠಾಧೀಶರು ಸಹಕರಿಸಬೇಕು. ಇಂಥ ಸಂದರ್ಭದಲ್ಲಿ ವೈಯಕ್ತಿಕ ಒಡಕು, ವೈಮನಸ್ಸು ಇದ್ದರೂ ಅದನ್ನು ವೈಯಕ್ತಿಕ ಮಟ್ಟಕ್ಕೆ ಮಾತ್ರ ಸೀಮಿತಗೊಳಿಸುವುದು ಸಮಾಜದ ಒಳಿತಿಗೆ ಅವಶ್ಯಕ. ಪೀಠಗಳು ಹಾಗೂ ಮಠಾಧೀಶರ ಅಭಿಪ್ರಾಯವೂ ಅದೇ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಅಲ್ಲದೆ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ಕುರಿತು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡು, “ಈ ಸಮೀಕ್ಷೆಗೆ ನಮ್ಮ ಸ್ವಾಗತ ಇದೆ. ಆದರೆ ಸಮೀಕ್ಷೆಯಿಂದ ಧರ್ಮ, ಜಾತಿ ವ್ಯವಸ್ಥೆಗೆ ಯಾವುದೇ ತೊಂದರೆ ಉಂಟಾಗಬಾರದು. ಸರ್ಕಾರ ಈಗಾಗಲೇ ಹಿಂದುಳಿದ ಆಯೋಗದ ಪಟ್ಟಿಯಲ್ಲಿ ಅನೇಕ ಜಾತಿಗಳನ್ನು ಪ್ರಕಟಿಸಿದೆ. ಇಷ್ಟೊಂದು ಜಾತಿಗಳು ಇವೆ ಎನ್ನುವುದು ಹಿಂದೆಂದೂ ಕೇಳಿರಲಿಲ್ಲ. ಇಷ್ಟು ಸಂಖ್ಯೆಯಲ್ಲಿರುವ ಜಾತಿಗಳಿಗೆ ಸರ್ಕಾರ ಹೇಗೆ ನ್ಯಾಯ ಒದಗಿಸುತ್ತದೆ ಎಂಬುದು ಜನರ ಪ್ರಶ್ನೆ” ಎಂದರು.
“ಸಮೀಕ್ಷೆ ಮೂಲಕ ಹಿಂದುಳಿದ ಜಾತಿಗಳ ಪುನರುತ್ಥಾನಗೊಳಿಸಲು ಒಳ್ಳೆಯ ಬೆಳವಣಿಗೆ ಆಗಬಹುದು. ಆದರೆ ಧರ್ಮ ಮತ್ತು ಜಾತಿ ವ್ಯವಸ್ಥೆಯಿಂದ ಸಮಾಜದ ಶಾಂತಿ ಕದಡಬಾರದು. ಸಾಮರಸ್ಯದ ದಾರಿಯಲ್ಲೇ ಕೆಲಸ ಆಗಬೇಕು. ವಿಂಗಡನೆ ನಡೆಯಬಾರದು. ಜನರ ಮನಸ್ಸು ಈಗಾಗಲೇ ಧರ್ಮ, ಜಾತಿ ಒತ್ತಡದಿಂದ ನಲುಗಿದೆ. ಶಾಂತಿ, ನೆಮ್ಮದಿ ಕಾಪಾಡುವುದು ಮುಖ್ಯ” ಎಂದು ಶ್ರೀಗಳು ಹೇಳಿದರು.