ಗದಗ:
ಗದಗ ಜಿಲ್ಲೆಯ ರೋಣ ತಾಲೂಕಿನ ಬೆಳವಣಿಕಿ ಮತ್ತು ಹಡಗಲಿ ಗ್ರಾಮಗಳ ಮಧ್ಯೆ ಮಿಸೇನ್ ಕೇರಿ ಹಳ್ಳದಲ್ಲಿ ಸಂಭವಿಸಿದ ದುರ್ಘಟನೆ ಗ್ರಾಮಾಂತರ ಪ್ರದೇಶದಲ್ಲಿ ದುಃಖದ ಛಾಯೆ ಹರಡಿದೆ.
ಮಾಹಿತಿಯ ಪ್ರಕಾರ, ಬೆಳವಣಕಿ ಪ್ರಾಥಮಿಕ ಆರೋಗ್ಯ ಕೇಂದ್ರದ ಮೂವರು ಸಿಬ್ಬಂದಿಗಳು ಹಡಗಲಿ ಗ್ರಾಮದಲ್ಲಿ ಆಯೋಜಿಸಿದ್ದ ಆರೋಗ್ಯ ಶಿಬಿರ ಮುಗಿಸಿ ಬೈಕ್‌ನಲ್ಲಿ ವಾಪಸ್ಸಾಗುತ್ತಿದ್ದರು. ಇದೇ ವೇಳೆ ಉಕ್ಕಿ ಹರಿಯುತ್ತಿದ್ದ ಮಿಸೇನ್ ಕೇರಿ ಹಳ್ಳ ದಾಟಲು ಪ್ರಯತ್ನಿಸಿದಾಗ ನೀರಿನ ಪ್ರವಾಹಕ್ಕೆ ಸಿಲುಕಿ ಬೈಕ್ ಸಮೇತ ಮೂವರೂ ಕೊಚ್ಚಿ ಹೋಗಿದ್ದಾರೆ.
ಈ ಘಟನೆಯಲ್ಲಿ ಸಿಬ್ಬಂದಿಗಳಾದ ಬಸವರಾಜ ಕಡಪಟ್ಟಿ ಮತ್ತು ವೀರಸಂಗಯ್ಯ ಹಿರೇಮಠ ಹಳ್ಳದ ಬಳಿ ಇರುವ ಜಾಲಿಗಿಡದಲ್ಲಿ ಸಿಲುಕಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇಬ್ಬರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಅವರಿಗೆ ತಕ್ಷಣವೇ ಬೆಳವಣಕಿ ಪಿಎಚ್ಸಿಯಲ್ಲಿ ಚಿಕಿತ್ಸೆ ನೀಡಲಾಗಿದೆ.
ಆದರೆ, ಸಿಬ್ಬಂದಿ ಬಸಮ್ಮ (ಮಹಿಳೆ) ಅವರನ್ನು ಪ್ರವಾಹದ ನೀರು ಕೊಚ್ಚಿಕೊಂಡು ಹೋಗಿದ್ದು, ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಗ್ರಾಮಸ್ಥರು, ಪೊಲೀಸರು ಮತ್ತು ಸ್ಥಳೀಯರು ಸೇರಿ ತೀವ್ರ ಶೋಧ ಕಾರ್ಯ ಮುಂದುವರಿಸಿದ್ದಾರೆ.
ಇತ್ತೀಚೆಗೆ ಸುರಿದ ಭಾರೀ ಮಳೆಯಿಂದಾಗಿ ಮಿಸೇನ್ ಕೇರಿ ಹಳ್ಳ ತುಂಬಿ ಹರಿಯುತ್ತಿರುವುದರಿಂದ ಈ ದುರ್ಘಟನೆ ಸಂಭವಿಸಿದ್ದು, ಗ್ರಾಮದಾದ್ಯಂತ ದುಃಖದ ವಾತಾವರಣ ಆವರಿಸಿದೆ.
ರೋಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಜರುಗಿದ್ದು, ನಾಪತ್ತೆಯಾದ ಸಿಬ್ಬಂದಿಗಾಗಿ ಶೋಧಕಾರ್ಯ ಮುಂದುವರಿದಿದೆ.