Home » News » ಗದಗ ನಗರದಲ್ಲಿ ಹಾಲಕೆರೆ ಅನ್ನದಾನೇಶ್ವರ ಪದವಿ ಪೂರ್ವ ಮಹಾವಿದ್ಯಾಲಯ ಹಾಗೂ ಆನಂದಾಶ್ರಮದ ಅದ್ಧೂರಿ ಲೋಕಾರ್ಪಣೆ..

ಗದಗ ನಗರದಲ್ಲಿ ಹಾಲಕೆರೆ ಅನ್ನದಾನೇಶ್ವರ ಪದವಿ ಪೂರ್ವ ಮಹಾವಿದ್ಯಾಲಯ ಹಾಗೂ ಆನಂದಾಶ್ರಮದ ಅದ್ಧೂರಿ ಲೋಕಾರ್ಪಣೆ..

by CityXPress
0 comments

ಗದಗ:
ನಗರದ ಹಾತಲಗೇರಿ ನಾಕಾ ಹತ್ತಿರ ನಿರ್ಮಾಣಗೊಂಡಿರುವ ಶ್ರೀ ಅನ್ನದಾನೇಶ್ವರ ಪದವಿಪೂರ್ವ ಮಹಾವಿದ್ಯಾಲಯ ಹಾಗೂ ಆನಂದಾಶ್ರಮ ನೂತನ ಕಟ್ಟಡಗಳ ಲೋಕಾರ್ಪಣೆ ಸಮಾರಂಭ ಇಂದು ಅದ್ಧೂರಿಯಾಗಿ, ಅರ್ಥಪೂರ್ಣವಾಗಿ ಹಾಗೂ ಧಾರ್ಮಿಕ–ಸಾಮಾಜಿಕ ಸಮ್ಮಿಲನದ ವಾತಾವರಣದಲ್ಲಿ ನೆರವೇರಿತು.

ವರದಿ: ಮಹಲಿಂಗೇಶ‌ ಹಿರೇಮಠ.ಗದಗ

ಈ ಮಹತ್ವದ ಕಾರ್ಯಕ್ರಮದಲ್ಲಿ ಮುಂಡರಗಿ ಸಂಸ್ಥಾನಮಠದ ಶ್ರೀ ಜ.ನಾಡೋಜ ಅನ್ನದಾನೀಶ್ವರ ಮಹಾಸ್ವಾಮಿಗಳು, ಸುತ್ತೂರಿನ ಶ್ರೀ ಜ.ಶಿವರಾತ್ರಿ ದೆಶಿಕೇಂದ್ರ ಮಹಾಸ್ವಾಮಿಗಳು ಸೇರಿದಂತೆ ಅನೇಕ ಮಠಾಧೀಶರು, ಧಾರ್ಮಿಕ ನಾಯಕರು ಹಾಗೂ ಗಣ್ಯಮಾನ್ಯರು ಹಾಜರಿದ್ದರು.

ನಂತರ ನಡೆದ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದ ರಾಜ್ಯದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಮಾತನಾಡಿ,“ಸರ್ಕಾರ ಕೈಗೊಳ್ಳದ ಅನೇಕ ಸಾಮಾಜಿಕ–ಶೈಕ್ಷಣಿಕ ಜವಾಬ್ದಾರಿಗಳನ್ನು ಮಠಗಳು ಭಕ್ತಾಧಿಗಳ ಜೊತೆ ಸೇರಿ ನಿರ್ವಹಿಸುತ್ತಿವೆ. ಅನ್ನದಾನೇಶ್ವರ ಮಠವು ಅನ್ನ, ಅರಿವು ಮತ್ತು ಆಶ್ರಯದ ಮೂಲಕ ಬಡಮಕ್ಕಳ ಭವಿಷ್ಯ ರೂಪಿಸುವ ಮಹೋನ್ನತ ಕಾರ್ಯ ನಿರ್ವಹಿಸುತ್ತಿದೆ. ಶ್ರೀಮಠದ ಹಿರಿಯ ಶ್ರೀಗಳು ಸ್ವಾತಂತ್ರ್ಯ ಪೂರ್ವದಲ್ಲಿಯೇ ಪ್ರಾರಂಭಿಸಿದ ಶಿಕ್ಷಣ ಸೇವೆ, ಅವರ ದೂರದೃಷ್ಟಿಗೆ ಸಾಕ್ಷಿಯಾಗಿದೆ,” ಎಂದರು.

banner

ರಾಜ್ಯದಲ್ಲಿ ನಡೆಯುವ ಪರೀಕ್ಷೆಗಳ ಸುಧಾರಣೆ ಕುರಿತು ಮಾತನಾಡಿದ ಅವರು, ತ್ರಿ-ಎಕ್ಸಾಂ ಪಾಲಿಸಿ ಜಾರಿಗೊಂಡ ಬಳಿಕ ಒಂದು ಲಕ್ಷ 16 ಸಾವಿರ ವಿದ್ಯಾರ್ಥಿಗಳು 2ನೇ ಹಾಗೂ 3ನೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ತಮ್ಮ ಶಿಕ್ಷಣವನ್ನು ಮುಂದುವರಿಸಿರುವುದು ಅವರ ಆತ್ಮಾಭಿಮಾನವನ್ನು ಕಾಪಾಡಿದೆ ಎಂದು ಹೇಳಿದರು.

ಜ್ಞಾನವೇ ಶಾಶ್ವತ ಸಂಪತ್ತು

ಮೈಸೂರಿನ ಸುತ್ತೂರು ಮಠದ ಶ್ರೀ ಶಿವರಾತ್ರಿ ದೆಶಿಕೇಂದ್ರ ಸ್ವಾಮೀಜಿ ಆಶೀರ್ವಚನ ನೀಡುತ್ತಾ,
“ಹಣ, ಆಸ್ತಿ, ಸಂಪತ್ತು—ಎಲ್ಲವೂ ನಶ್ವರ. ಶಾಶ್ವತವಾಗಿ ಉಳಿಯುವ ಏಕೈಕ ಸಂಪತ್ತು ಜ್ಞಾನ. ರಾಜ್ಯದ ಅನೇಕ ಮಹನೀಯರು ಮಠಗಳಲ್ಲಿಯೇ ವಿದ್ಯಾಭ್ಯಾಸ ಪಡೆದು ತಮ್ಮ ಬದುಕನ್ನು ರೂಪಿಸಿಕೊಂಡಿದ್ದಾರೆ,” ಎಂದು ಹೇಳಿದರು.

ಸಮಾನ ಶಿಕ್ಷಣ ಅಗತ್ಯ

ಸಂಸದ ಗೋವಿಂದ ಕಾರಜೋಳ ಮಾತನಾಡಿ,
“ಬಡವರ ಮಕ್ಕಳು ರಾಷ್ಟ್ರ ಮಟ್ಟದಲ್ಲಿ ಸ್ಪರ್ಧಿಸಲು ಸಮಾನ ಶಿಕ್ಷಣ ನೀತಿ ದೇಶದಾದ್ಯಂತ ಜಾರಿಯಾಗಬೇಕು. 12ನೇ ಶತಮಾನದಿಂದಲೇ ಮೇಲು-ಕೀಳು ಭಾವನೆಗಳನ್ನು ಮಠಾಧೀಶರು ಶಿಕ್ಷಣದ ಮೂಲಕ ತೊಡೆದು ಹಾಕಿದ್ದಾರೆ. ಇದು ಸರ್ಕಾರಗಳ ಸಾಧನೆ ಅಲ್ಲ, ಮಠಾಧೀಶರ ಕೊಡುಗೆ,” ಎಂದು ಅಭಿಪ್ರಾಯಪಟ್ಟರು.

ಗುಣಮಟ್ಟದ ಶಿಕ್ಷಣದ ಮೇಲೆ ಒತ್ತಡ

ಸಮಾರಂಭದ ಅಧ್ಯಕ್ಷತೆ ವಹಿಸಿದ ರೋಣ ಶಾಸಕ ಜಿ.ಎಸ್. ಪಾಟೀಲ,
“ಉತ್ತರ ಕರ್ನಾಟಕದಲ್ಲಿ ಶತಮಾನಗಳಿಂದಲೇ ಶಿಕ್ಷಣ ಸಂಸ್ಥೆಗಳು ಭಕ್ತರ ಸಹಕಾರದಲ್ಲಿ ಬೆಳೆಯುತ್ತಾ ಬಂದಿವೆ. ಅನೇಕ ಶಿಕ್ಷಕರು ನಿವೃತ್ತಿ ಹೊಂದಿರುವುದರಿಂದ ಹುದ್ದೆಗಳು ಖಾಲಿ ಇದ್ದರೂ ಗುಣಮಟ್ಟ ಕುಸಿಯದಂತೆ ಮಠಗಳು ಸ್ವತಃ ಸಂಬಳ ನೀಡಿ ಸಂಸ್ಥೆಗಳನ್ನು ನಡೆಸುತ್ತಿರುವುದು ಶ್ಲಾಘನೀಯ. ಹೀಗಾಗಿ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ವೇಗ ಪಡೆಯಬೇಕು,” ಎಂದು ಶಿಕ್ಷಣ ಸಚಿವರನ್ನು ಮನವಿ ಮಾಡಿದರು.

ಮಣಕವಾಡದ ಶ್ರೀ ಅಭಿನವ ಮೃತ್ಯುಂಜಯ ಸ್ವಾಮೀಜಿ‌ ಮಾತನಾಡಿ, “ಹತ್ತಾರು ವರ್ಷಗಳಲ್ಲಿ ಮಾಡಬೇಕಾದ ಕಾರ್ಯವನ್ನು ಮುಪ್ಪಿನ ಬಸವಲಿಂಗ ಶ್ರೀಗಳು ನಾಲ್ಕು ವರ್ಷಗಳಲ್ಲಿ ಪೂರ್ಣಗೊಳಿಸಿದ್ದು ಅವರ ಶಿಕ್ಷಣದ ಕಾಳಜಿಗೆ ಹಿಡಿದ ಕೈಗನ್ನಡಿ. ಆ ಮೂಲಕ ಗುರುಗಳ ಮಾರ್ಗದರ್ಶನವನ್ನ ಸಾರ್ಥಕಗೊಳಿಸಿದ್ದಾರೆ ಎಂದರು.

ಶ್ರೀಮಠದ ಪೂಜ್ಯ ಮುಪ್ಪಿನ ಬಸವಲಿಂಗ ಶ್ರೀಗಳು ಮಾತನಾಡಿ, “ಶಾಲಾ–ಕಾಲೇಜುಗಳು ಕೇವಲ ವಿದ್ಯಾಭ್ಯಾಸ ನೀಡುವುದಲ್ಲ. ಮೌಲ್ಯಯುತ, ಸಂಸ್ಕಾರಯುತ ಹಾಗೂ ಸುಸಂಸ್ಕೃತ ಶಿಕ್ಷಣ ನೀಡುವುದು ನಮ್ಮ ಸಂಸ್ಥೆಯ ಉದ್ದೇಶವಾಗಿದ್ದು, ಶ್ರೀಮಠದ ಭಕ್ತರು ಹಾಗೂ ಸಂಸ್ಥೆಯ ಸಿಬ್ಬಂದಿ ವರ್ಗದವರು ತಮ್ಮ ಕುಟುಂಬವನ್ನೇ ಮರೆತು ಸಂಸ್ಥೆಯ ಶ್ರೇಯೋಭಿವೃದ್ಧಿಗೋಸ್ಕರ ದುಡಿದ ಪರಿಣಾಮವೇ ಇಂದು ನಗರದಲ್ಲಿ ಇಂಥಹ ಸಂಸ್ಥೆ ನಿರ್ಮಾಣವಾಗಲು ಸಾಧ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಒಳಬಳ್ಳಾರಿಯ ಶ್ರೀಗಳು,ಪೂಜ್ಯ ಕಲ್ಲಯ್ಯಜ್ಜನವರು, ಎ.ಬಿ. ಪಾಟೀಲ ಗುರೂಜಿ, ನಿಡಗುಂದಿಕೊಪ್ಪ, ನಾಗಲಾಪುರ, ಕೊಟ್ಟೂರು, ಬೂದುಗುಂಪದ ಶ್ರೀಗಳು, ಮಾಜಿ ಶಾಸಕ ಅಮರೇಗೌಡ ಬಯ್ಯಾಪುರ, ಉಮೇಶಗೌಡ ಪಾಟೀಲ, ಸಿದ್ದು ಪಾಟೀಲ, ಅನಿಲಕುಮಾರ ಅಬ್ಬಿಗೇರಿ ಸೇರಿದಂತೆ ಹಾಲಕೆರೆಯ ಶಾಖಾಮಠಗಳ ಸದ್ಭಕ್ತರು, ಶಾಲಾ–ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ನರೇಗಲ್ಲ ಕಾಲೇಜಿನ ಪ್ರಾಚಾರ್ಯರಾದ ವೈ.ಸಿ. ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು.ಕಾಲೇಜು ವಿದ್ಯಾರ್ಥಿಗಳು ಪ್ರಾರ್ಥನೆ ಸಲ್ಲಿಸಿದರು. ಸಂಗಮೇಶ ಪಾಟೀಲ ಹಾಗೂ ನಾರಾಯಣ ಹಿರೇಕೊಳಚಿ ಅವರ ತಂಡ ಮನಮೋಹಕ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.

ಎಸ್.ಎನ್. ಹೊಲಗೇರಿ ಮತ್ತು ಎಫ್.ಎನ್. ಹುಡೇದ ಸಮಾರಂಭ ನಿರೂಪಿಸಿ ವಂದಿಸಿದರು.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Website designed by Dreamweb
error: Content is protected by Dreamweb