ಗದಗ:(ಮುಂಡರಗಿ) ಜಿಲ್ಲೆಯ ಮುಂಡರಗಿ ತಾಲೂಕಿನ ಕಕ್ಕೂರು ತಾಂಡ ಗ್ರಾಮದಲ್ಲಿ ಎಸ್‌ಇಪಿ–ಟಿಎಸ್‌ಪಿ (SEP-TSP) ಯೋಜನೆ ಅಡಿ ಆರಂಭಗೊಂಡ ಕಾಮಗಾರಿಗಳಲ್ಲಿ ತೀವ್ರ ನಿರ್ಲಕ್ಷ್ಯ ತೋರಿರುವ ಹಿನ್ನೆಲೆಯಲ್ಲಿ, ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿ ಕೆಆರ್‌ಡಿಎಲ್ (KRDL) ಇಲಾಖೆಯ ಸಿಬ್ಬಂದಿಯನ್ನು ದೇವಸ್ಥಾನದಲ್ಲಿ ಕೂಡಿ ಹಾಕಿದ ಘಟನೆ ಸೋಮವಾರ ಬೆಳಕಿಗೆ ಬಂದಿದೆ.
2017-18 ಹಾಗೂ 2018-19ನೇ ಸಾಲಿನಲ್ಲಿ ಆದರ್ಶ ಗ್ರಾಮ ಯೋಜನೆ ಅಡಿ ಸುಮಾರು 40 ಲಕ್ಷ ರೂಪಾಯಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಆಗಿತ್ತು. ಇದರಡಿ ಸಿಸಿ ರಸ್ತೆ ನಿರ್ಮಾಣ, ಶೌಚಾಲಯಗಳ ನಿರ್ಮಾಣ, ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ಇತರ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಯೋಜನೆ ರೂಪಿಸಲಾಗಿತ್ತು. ಆದರೆ ಸುಮಾರು ಎಂಟು ವರ್ಷ ಕಳೆದರೂ ಈ ಕಾಮಗಾರಿಗಳು ಅರ್ಧಕ್ಕೆ ನಿಂತು, ಇಂದಿಗೂ ಅಪೂರ್ಣವಾಗಿವೆ.
ಗ್ರಾಮದಲ್ಲಿ ಮೂಲಭೂತ ಸೌಲಭ್ಯಗಳ ಕೊರತೆಯಿಂದ ಮಕ್ಕಳು ಮತ್ತು ಮಹಿಳೆಯರು ಅನೇಕ ತೊಂದರೆಗಳನ್ನು ಅನುಭವಿಸುತ್ತಿರುವುದಾಗಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಲವು ಬಾರಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಸ್ಪಂದನೆ ದೊರೆಯದ ಹಿನ್ನೆಲೆಯಲ್ಲಿ, ಭೂಮಿ ಪೂಜೆಯ ನಿಮಿತ್ತ ಗ್ರಾಮಕ್ಕೆ ಆಗಮಿಸಿದ್ದ ಕೆಆರ್‌ಡಿಎಲ್ ಸಿಬ್ಬಂದಿ ಬಸವರಾಜ ಅವರನ್ನು ಗ್ರಾಮಸ್ಥರು ಸೇವಾಲಾಲ್ ದೇವಸ್ಥಾನದಲ್ಲಿ ಕೂಡಿ ಹಾಕಿದರು.
“ಅಧಿಕಾರಿಗಳು ಪ್ರತಿ ಬಾರಿ ಭರವಸೆ ನೀಡುತ್ತಾ ಹೋಗುತ್ತಾರೆ. ಆದರೆ ಕಾಮಗಾರಿ ಪೂರ್ಣಗೊಳ್ಳುವುದಿಲ್ಲ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಬಂದಿರುವ ಅನುದಾನ ದುರ್ಬಳಕೆಯಾಗುತ್ತಿದೆ. ಇನ್ನು ಮುಂದೆ ಮೇಲ್ದರ್ಜೆಯ ಅಧಿಕಾರಿಗಳು ಬರುವರಿಗೂ ನಾವು ದೇವಸ್ಥಾನದಲ್ಲೇ ಕೂಡಿ ಹಾಕುತ್ತೇವೆ,” ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದರು.
ಈ ಘಟನೆ ವೇಳೆ ಗ್ರಾಮಸ್ಥರಾದ ಸುಭಾಷ್ ಗುಡಿಮನಿ, ವಸಂತ ನಾಯಕ್, ಶಂಕ್ರಪ್ಪ ಸೋವೆನಹಳ್ಳಿ ಹಾಗೂ ಅನೇಕರು ಅಧಿಕಾರಿಗಳ ವಿರುದ್ಧ ಗಂಭೀರ ಆಕ್ರೋಶ ವ್ಯಕ್ತಪಡಿಸಿದರು. ಅಧಿಕಾರಿಗಳ ನಿರ್ಲಕ್ಷ್ಯದಿಂದ ಗ್ರಾಮ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿದ್ದು, ಈ ವಿಷಯಕ್ಕೆ ತಕ್ಷಣವೇ ಸ್ಪಂದಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದರು.
ಸ್ಥಳೀಯರು ಜಿಲ್ಲಾಧಿಕಾರಿಗಳು ಮತ್ತು ಸರ್ಕಾರದ ಗಮನಕ್ಕೆ ಈ ವಿಷಯವನ್ನು ತಲುಪಿಸಲು ನಿರ್ಧರಿಸಿದ್ದು, ಬೇಗ ಕಾರ್ಯ ಪೂರ್ಣಗೊಳಿಸಲಿಲ್ಲವೆಂದರೆ ದೊಡ್ಡ ಮಟ್ಟದ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.