ಗದಗ: ಜಿಲ್ಲೆಯ ಶಿಕ್ಷಣ ವಲಯದಲ್ಲಿ ಹೊಸದೊಂದು ಕ್ರಾಂತಿ ಸೃಷ್ಟಿಸಿರುವ ಪ್ರೊ. ಎಸ್.ವೈ. ಚಿಕ್ಕಟ್ಟಿ ಅವರ ದೀರ್ಘಕಾಲೀನ ಶ್ರಮ, ಸಾಧನೆ ಹಾಗೂ ಸಮಾಜಮುಖಿ ಸೇವೆಯನ್ನು ಗೌರವಿಸುವ ಸಲುವಾಗಿ ಶಿಷ್ಯರು, ಅಭಿಮಾನಿಗಳು ಹಾಗೂ ಅನೇಕ ವಿದ್ಯಾಭಿಮಾನಿಗಳು ಒಗ್ಗೂಡಿ ಅಭಿನಂದನಾ ಗ್ರಂಥವನ್ನು ಹೊರತರುವ ನಿರ್ಧಾರ ಕೈಗೊಂಡಿದ್ದಾರೆ. ಈ ಕುರಿತು ಪತ್ರಿಕಾ ಭವನದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಗ್ರಂಥದ ಪ್ರಧಾನ ಸಂಪಾದಕರಾದ ಹಿರಿಯ ಸಾಹಿತಿ ಐ.ಕೆ. ಕಮ್ಮಾರ ಹಾಗೂ ಅಭಿನಂದನಾ ಸಮಿತಿಯ ಅಧ್ಯಕ್ಷರಾದ ಎಸ್.ಎಲ್. ಹುಯಿಲಗೋಳ ಅವರು ಮಾಹಿತಿ ನೀಡಿದರು.
ಪ್ರೊ. ಚಿಕ್ಕಟ್ಟಿ ಅವರು ಮೂಲತಃ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕು ಅಡಹಲಟ್ಟಿ ಗ್ರಾಮದವರಾಗಿದ್ದರೂ, ಅವರ ಕರ್ಮಭೂಮಿ ಗದಗ ಆಗಿದೆ. 1983 ರಲ್ಲಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎಸ್.ಸಿ ಪದವಿ ಪಡೆದ ಅವರು ಗದಗದ ಅಂಜುಮನ್ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಹಾಗೂ ನಂತರ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದರು. 1988 ರ ವರೆಗೆ ಸೇವೆ ಸಲ್ಲಿಸಿದ ಬಳಿಕ, ತಮ್ಮದೇ ಆದ ಶೈಕ್ಷಣಿಕ ಕನಸುಗಳನ್ನು ನನಸು ಮಾಡುವ ದಿಸೆಯಲ್ಲಿ ಪಯಣ ಆರಂಭಿಸಿದರು.
ನಾಲ್ಕು ದಶಕಗಳ ಶೈಕ್ಷಣಿಕ ಪಯಣ..
ಒಂದು ಬಾಡಿಗೆ ಮನೆಯಲ್ಲಿ ಗೃಹ ಪಾಠದ ಶಿಕ್ಷಕರಾಗಿ ಆರಂಭವಾದ ಈ ಪಯಣ ಇಂದು ಸುಮಾರು 40 ವರ್ಷಗಳನ್ನು ಪೂರೈಸಿದೆ. ಶಿಸ್ತು, ಗುಣಮಟ್ಟ ಮತ್ತು ಸಂಸ್ಕಾರದ ಶಿಕ್ಷಣಕ್ಕೆ ಮಹತ್ವ ನೀಡುತ್ತಾ, ವಿದ್ಯಾರ್ಥಿಗಳ ಬೌದ್ಧಿಕ ಬೆಳವಣಿಗೆ ಜೊತೆಗೆ ನೈತಿಕ ಮೌಲ್ಯಗಳ ಬಿತ್ತನೆ ಮಾಡುವುದೇ ಇವರ ಮುಖ್ಯ ಗುರಿಯಾಗಿತ್ತು. ಇಂದು ನಗರದ ಮುಂಡರಗಿ ರಸ್ತೆ ಅಡವಿಸೋಮಾಪುರ ಗ್ರಾಮದ ಸಮೀಪ ರಾಷ್ಟ್ರೀಯ ಹೆದ್ದಾರಿಯ ತಟದಲ್ಲಿ ಸ್ಥಾಪಿಸಿರುವ ವಿಶಾಲ ಶೈಕ್ಷಣಿಕ ಸಂಕೀರ್ಣದಲ್ಲಿ ಪೂರ್ವ ಪ್ರಾಥಮಿಕದಿಂದ ಹಿಡಿದು ಪದವಿ ಮಟ್ಟದ ಶಿಕ್ಷಣ ಸಿಗುವಂತಾಗಿದೆ.
ಈ ಕ್ಯಾಂಪಸ್ಗೆ ಕಾಲಿಟ್ಟರೆ, ಅದು ಕೇವಲ ಶಾಲೆಯಲ್ಲ, ಮತ್ತೊಂದು ಪ್ರೇರಣಾದಾಯಕ ಜಗತ್ತೇ ಎನ್ನುವ ಭಾವನೆ ಮೂಡುತ್ತದೆ. ಸಂಸ್ಥೆಯ ಭಿತ್ತಿಗಳಲ್ಲಿ ನಾಡಿನ ಮಹನೀಯರ ನುಡಿಗಳು, ಸಾಧಕರ ಜೀವನಪಾಠಗಳು ಹಾಗೂ ನೈತಿಕ ಸಂದೇಶಗಳು ಅಲಂಕರಿಸಿಕೊಂಡಿದ್ದು, ಮಕ್ಕಳ ಮನಸ್ಸಿನಲ್ಲಿ ಶಾಶ್ವತ ಪ್ರೇರಣೆಯ ಬೀಜ ಬಿತ್ತುತ್ತಿವೆ.
ಅಂಕ ಮಾತ್ರವಲ್ಲ – ಸಂಸ್ಕಾರವೂ ಮುಖ್ಯ
“ಭಾರತೀಯ ಶಿಕ್ಷಣ ಸಂಸ್ಥೆ” ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಚಿಕ್ಕಟ್ಟಿ ಸಮೂಹ ಶಿಕ್ಷಣ ಸಂಸ್ಥೆಗಳು ಕೇವಲ ಪಾಠಪುಸ್ತಕದ ಜ್ಞಾನ ನೀಡುವುದಲ್ಲ, ಬದಲಾಗಿ ಅಂಕಗಳೊಂದಿಗೆ ಶಿಸ್ತು, ಸಂಸ್ಕಾರ ಮತ್ತು ಸಮಾಜಮುಖಿ ವ್ಯಕ್ತಿತ್ವವನ್ನು ಬೆಳೆಸುವ ವಿಶಿಷ್ಟ ಉದ್ದೇಶವನ್ನು ಹೊಂದಿದೆ. “ಅಂಕದ ವಿದ್ಯಾರ್ಥಿ ಎಲ್ಲಾದರೂ ದೊರೆಯಬಹುದು, ಆದರೆ ಸಂಸ್ಕಾರದ ವಿದ್ಯಾರ್ಥಿ ಮಾತ್ರ ಸಮಾಜಕ್ಕೆ ಅಮೂಲ್ಯ ಸಂಪತ್ತು” ಎಂಬ ತತ್ವವನ್ನು ಚಿಕ್ಕಟ್ಟಿ ಅವರು ಸದಾ ಅನುಸರಿಸುತ್ತ ಬಂದಿದ್ದಾರೆ. ಹೀಗಾಗಿ ಇವರ ಮಾರ್ಗದರ್ಶನದಲ್ಲಿ ಹೊರಬಂದ ಅನೇಕ ವಿದ್ಯಾರ್ಥಿಗಳು ಇಂದು ವಿವಿಧ ಕ್ಷೇತ್ರಗಳಲ್ಲಿ ಹೆಸರು ಮಾಡುತ್ತಿದ್ದಾರೆ.
ಅನೇಕ ಗೌರವ – ಹೆಮ್ಮೆಯ ಸಾಧನೆ
ಪ್ರೊ. ಚಿಕ್ಕಟ್ಟಿ ಅವರ ಶೈಕ್ಷಣಿಕ ಸಾಧನೆಗಳನ್ನು ಸಮಾಜ ಗುರುತಿಸಿ, ವಿವಿಧ ವೇದಿಕೆಗಳು ಪ್ರಶಸ್ತಿ ಹಾಗೂ ಗೌರವಗಳನ್ನು ನೀಡಿ ಗೌರವಿಸಿವೆ. ಮುಖ್ಯವಾಗಿ ಝೀ ಟಿವಿ ಕನ್ನಡ ವಾಹಿನಿಯಿಂದ ‘ರಿಯಲ್ ಸ್ಟಾರ್’ ಪ್ರಶಸ್ತಿ, ವಿಶ್ವವಿದ್ಯಾಲಯದಿಂದ ಡಾಕ್ಟರ್ ಆಫ್ ಲೆಟರ್ಸ್ ಗೌರವ ಪದವಿ, “ಕರುನಾಡ ಭೂಷಣ” ಹಾಗೂ ಇನ್ನೂ ಹತ್ತು ಹಲವು ರಾಜ್ಯಮಟ್ಟದ ಗೌರವಗಳು ಇವರ ಪಾಲಾಗಿವೆ. ಈ ಎಲ್ಲ ಪ್ರಶಸ್ತಿಗಳು ಕೇವಲ ಗೌರವವಲ್ಲ, ಸಮಾಜದ ನಂಬಿಕೆ ಹಾಗೂ ಪ್ರೀತಿಯ ಚಿಹ್ನೆಯಾಗಿದೆ.
ಅಭಿನಂದನಾ ಗ್ರಂಥ –ಮುಂದಿನ ಪೀಳಿಗೆಗೆ ಮಾರ್ಗದರ್ಶಕ
ಇವರ ಸಾಧನೆಯ ಹಾದಿಯನ್ನು ಅಕ್ಷರರೂಪದಲ್ಲಿ ಕಟ್ಟಿಕೊಡುವ ನಿಟ್ಟಿನಲ್ಲಿ ಹೊರತರುವ ಈ ಅಭಿನಂದನಾ ಗ್ರಂಥವು, ಕೇವಲ ಗೌರವಸೂಚಕ ಕೃತಿಯಲ್ಲದೆ, ಮುಂದಿನ ಪೀಳಿಗೆಗೆ ಮಾದರಿ ಹಾಗೂ ಪ್ರೇರಣೆ ಆಗಲಿದೆ ಎಂದು ಸಾಹಿತಿ ಐ.ಕೆ. ಕಮ್ಮಾರ ಹಾಗೂ ಅಧ್ಯಕ್ಷ ಎಸ್.ಎಲ್. ಹುಯಿಲಗೋಳ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಅಭಿನಂದನಾ ಗ್ರಂಥ ಸಮಿತಿಯ ಉಪಾಧ್ಯಕ್ಷ ವಿ.ಎಮ್. ಮುಂದಿನಮನಿ, ಶ್ರೀಮತಿ ಶೋಭಾ ಸ್ಥಾವರಮಠ, ಶ್ರೀಮತಿ ಶೋಭಾ ಭಟ್, ಶ್ರೀಮತಿ ಪುಷ್ಪಲತಾ ಬೇಲೇರಿ, ಶ್ರೀಮತಿ ರಿಯಾನಾ ಮುಲ್ಲಾ, ಶರಣಪ್ಪ ಗುಗಲೋತ್ತರ, ಮರಿಯಪ್ಪ ಹರಿಜನ ಹಾಗೂ ಶ್ರೀಶೈಲ ಬಡಿಗೇರ ಉಪಸ್ಥಿತರಿದ್ದರು.
ಲೇಖನ ಕಳುಹಿಸುವವರು ಸಂಪರ್ಕಿಸಲು:
ಅಭಿನಂದನಾ ಗ್ರಂಥಕ್ಕೆ ಲೇಖನ ಕಳುಹಿಸಲು ಇಚ್ಛಿಸುವವರು ತಮ್ಮ ಬರಹಗಳನ್ನು vcischoolgadag@gmail.com ಗೆ ಕಳುಹಿಸಬಹುದು. ಹೆಚ್ಚಿನ ಮಾಹಿತಿಗೆ 9448007467 ಅಥವಾ 9916314476 (ಪ್ರಧಾನ ಸಂಪಾದಕ ಐ.ಕೆ. ಕಮ್ಮಾರ) ಅವರನ್ನು ಸಂಪರ್ಕಿಸಬಹುದು.