ಮುಂಡರಗಿ:
ಗಣೇಶ ಚತುರ್ಥಿ ಹಬ್ಬದ ಅಂಗವಾಗಿ ಗದಗ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕ ಪಂಚಾಯಿತಿ ಮುಂಡರಗಿಯ ಸಂಯುಕ್ತ ಆಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರವನ್ನು ಮುಂಡರಗಿ ಪಟ್ಟಣದ ತಾಲೂಕು ಪಂಚಾಯಿತಿ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು.
ವರದಿ: ರಂಗನಾಥ ಕಂದಗಲ್ಲ. ಮುಂಡರಗಿ.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಗ್ಯಾರಂಟಿ ಸಮಿತಿ ಅಧ್ಯಕ್ಷ ಡಿ.ಡಿ. ಮೋರನಾಳ, ಸಾರ್ವಜನಿಕ ವಲಯದಲ್ಲಿ ಅಧಿಕಾರಿಗಳ ನಿತ್ಯದ ಕಾರ್ಯ ಒತ್ತಡದ ನಡುವೆ ಆರೋಗ್ಯ ತಪಾಸಣೆ ಅಗತ್ಯವಾಗಿದ್ದು, ಇಂತಹ ಶಿಬಿರಗಳು ಎಲ್ಲಾ ಇಲಾಖೆಗಳಿಗೂ ಮಾದರಿಯಾಗಬೇಕು ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ, ಹೇಮಂತಗೌಡ ಪಾಟೀಲ ಅವರು ಮಾತನಾಡಿ, “ವಜ್ರ, ವೈಡೂರ್ಯ, ಬಂಗಾರವನ್ನು ಹಣದಿಂದ ಖರೀದಿಸಬಹುದು. ಆದರೆ ರಕ್ತವನ್ನು ಹಣದಿಂದ ಪಡೆಯಲು ಸಾಧ್ಯವಿಲ್ಲ. ರಕ್ತದಾನವು ಜೀವ ಉಳಿಸುವ ಮಹೋನ್ನತ ಕಾರ್ಯವಾಗಿದ್ದು, ತಾಲೂಕು ಪಂಚಾಯಿತಿ ಇಂಥ ಶಿಬಿರ ಆಯೋಜಿಸಿರುವುದು ಸಮಾಜಕ್ಕೆ ಮಾದರಿಯಾಗಿದೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಸಿ.ಆರ್. ಮುಂಡರಗಿ ಅವರು ಮಾತನಾಡಿ, ಗಣೇಶ ಹಬ್ಬದ ಸಮಯದಲ್ಲಿ ಡಿಜೆ ಹಾಗೂ ಆರ್ಕೆಸ್ಟ್ರಾಗಳಲ್ಲಿ ತೊಡಗಿಕೊಳ್ಳುವ ಬದಲು ಯುವಕರು ರಕ್ತದಾನದಂತಹ ಸಮಾಜಮುಖಿ ಕಾರ್ಯಗಳಿಗೆ ಮುಂದಾದರೆ ಅನೇಕ ಬಡಜನರ ಜೀವ ಉಳಿಯಬಹುದು ಎಂದು ಅಭಿಪ್ರಾಯಪಟ್ಟರು.
ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವಿಶ್ವನಾಥ್ ಎಚ್ ಮಾತನಾಡಿ, “ನಮ್ಮ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಸಂಘ, ನರೇಗಾ ನೌಕರರ ಸಂಘ ಹಾಗೂ ಲೆಕ್ಕ ಶೀರ್ಷಿಕೆ ನೌಕರರು ಎಲ್ಲರೂ ಸೇರಿ ಗಣೇಶ ಚತುರ್ಥಿ ಅಂಗವಾಗಿ ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸಿದ್ದು ಸಂತೋಷದ ಸಂಗತಿ. ಪ್ರತಿಯೊಬ್ಬರೂ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಅಗತ್ಯ. ನೌಕರರ ಸಮಾಜಮುಖಿ ಪಾಲ್ಗೊಳ್ಳುವಿಕೆ ಈ ಕಾರ್ಯಕ್ರಮದ ಯಶಸ್ಸಿಗೆ ಕಾರಣವಾಗಿದೆ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಅಧಿಕಾರಿಗಳಾದ ಎಸ್.ಎಸ್. ಕಲ್ಮನಿ, ತಾಲೂಕು ಪಂಚಾಯಿತಿ ಮ್ಯಾನೇಜರ್ ವಿಜಯಕುಮಾರ್ ಬೆಣ್ಣಿ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ತಾಲೂಕು ಪಂಚಾಯಿತಿ ನೌಕರರು, ನರೇಗಾ ನೌಕರರು, ಜನಪ್ರತಿನಿಧಿಗಳು, ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಗ್ಯಾರೆಂಟಿ ಸಮಿತಿ, ಕೆಡಿಪಿ ಸಮಿತಿ ಮತ್ತು ಆರೋಗ್ಯ ರಕ್ಷಾ ಸಮಿತಿಯ ಸದಸ್ಯರುಗಳು ಭಾಗವಹಿಸಿ ಶಿಬಿರವನ್ನು ಯಶಸ್ವಿಗೊಳಿಸಿದರು.