ಲಕ್ಷ್ಮೇಶ್ವರ:
ಜಿಲ್ಲಾ ಪೊಲೀಸ್ ಅಧೀಕ್ಷಕರಾದ ರೋಹನ್ ಜಗದೀಶ್ ಐಪಿಎಸ್ ರವರ ಮಾರ್ಗದರ್ಶನದಲ್ಲಿ ತಾಲೂಕಿನ ಹೋಟೆಲ್ಗಳು ಹಾಗೂ ಲಾಡ್ಜ್ಗಳಲ್ಲಿ ಭರ್ಜರಿ ಪರಿಶೀಲನಾ ಕಾರ್ಯಾಚರಣೆ ನಡೆಯಿತು. ಸಾರ್ವಜನಿಕರ ಸುರಕ್ಷತೆ ಹಾಗೂ ಅಪರಾಧ ತಡೆಗಟ್ಟುವ ಉದ್ದೇಶದಿಂದ ಈ ವಿಶೇಷ ಕಾರ್ಯಾಚರಣೆಯನ್ನು ಕೈಗೊಳ್ಳಲಾಗಿದೆ.
ಇತ್ತೀಚಿನ ದಿನಗಳಲ್ಲಿ ಜಿಲ್ಲೆಯಲ್ಲಿ ಹೊರನಾಡಿನಿಂದ ಬರುವ ಅನಾಮಧೇಯ ವ್ಯಕ್ತಿಗಳು, ಅನುಮಾನಾಸ್ಪದ ಚಟುವಟಿಕೆಗಳು ಹಾಗೂ ಅಕ್ರಮ ಚಟುವಟಿಕೆಗಳ ಕುರಿತು ವಿವಿಧಮಟ್ಟದಲ್ಲಿ ಮಾಹಿತಿ ದೊರಕುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರು ಹೋಟೆಲ್ಗಳು ಮತ್ತು ಲಾಡ್ಜ್ಗಳಲ್ಲಿ ಅಚಾನಕ್ ದಾಳಿ ನಡೆಸಿದರು. ಪರಿಶೀಲನೆಯ ಸಂದರ್ಭದಲ್ಲಿ ಅತಿಥಿಗಳ ವಿವರಗಳು, ಆಧಾರ್ ಕಾರ್ಡ್ ದಾಖಲೆಗಳು, ಬುಕ್ಕಿಂಗ್ ದಾಖಲೆಗಳು ಇತ್ಯಾದಿಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಲಾಯಿತು.
ಈ ವೇಳೆ ಹೋಟೆಲ್ ಹಾಗೂ ಲಾಡ್ಜ್ ಮಾಲೀಕರಿಗೆ ಪೊಲೀಸರು ಸ್ಪಷ್ಟ ಸೂಚನೆ ನೀಡಿ, “ಯಾವುದೇ ವ್ಯಕ್ತಿ ಅನುಮಾನಾಸ್ಪದವಾಗಿ ವರ್ತಿಸಿದರೆ ತಕ್ಷಣವೇ ಹತ್ತಿರದ ಪೊಲೀಸ್ ಠಾಣೆಗೆ ಅಥವಾ ಜಿಲ್ಲಾ ಕಂಟ್ರೋಲ್ ರೂಂಗೆ ಮಾಹಿತಿ ನೀಡಬೇಕು. ಅತಿಥಿಗಳ ದಾಖಲೆಗಳನ್ನು ಸರಿಯಾಗಿ ಸಂಗ್ರಹಿಸದಿದ್ದರೆ ಕಾನೂನು ಕ್ರಮ ಜರುಗಲಿದೆ” ಎಂದು ಎಚ್ಚರಿಕೆ ನೀಡಿದರು.

ಅಧಿಕಾರಿಗಳ ಪ್ರಕಾರ, ಈ ರೀತಿಯ ತಪಾಸಣೆ ಮುಂದಿನ ದಿನಗಳಲ್ಲಿ ನಿರಂತರವಾಗಿ ನಡೆಯಲಿದ್ದು, ಜನರ ಭದ್ರತೆ, ಶಾಂತಿ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸರು ಬದ್ಧರಾಗಿದ್ದಾರೆ.
ಜಿಲ್ಲಾ ಜನತೆಯೂ ಸಹಕರಿಸಿ, ಸಮಾಜದಲ್ಲಿ ಶಾಂತಿ ಹಾಗೂ ಭದ್ರತೆ ನೆಲೆಸಲು ತಮ್ಮ ಪಾತ್ರವನ್ನು ನಿಭಾಯಿಸಬೇಕೆಂದು ಎಸ್ಪಿ ರೋಹನ್ ಜಗದೀಶ್ ಅವರು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.